ಸಿಂಧನೂರು: ವಿದ್ಯಾರ್ಥಿನಿಯರ ಮೇಲೆ ಥಾರ್ ಕಾರು ಹರಿದ ಪ್ರಕರಣ, ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 12, 2026

ಎ.ವಿ.ಎಸ್.ಬ್ರಿಲಿಯಂಟ್ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಸಾವಿನ ಪ್ರಕರಣ ಹಾಗೂ ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾದ ಘಟನೆಯನ್ನು ನ್ಯಾಯಯುತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ವೇದಿಕೆ ವತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿಪತ್ರ ರವಾನಿಸಲಾಯಿತು.
“ನಗರದ ಎ.ವಿ.ಎಸ್ ಬ್ರಿಲಿಯಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ವೀರರಾಜು ಹಾಗೂ ಅದೇ ಕಾಲೇಜಿನ ವಿದ್ಯಾರ್ಥಿನಿಯರಾದ ಮಹೇಶ್ವರಿ, ಜೈಬಾ, ಭೂಮಿಕಾ, ಮೇಘನಾ ಅವರು ದಿನಾಂಕ: 08-05-2026 ರಂದು ಮಧ್ಯಾಹ್ನ 4.40ರ ಸುಮಾರು ತರಗತಿ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ಕಾಲೇಜಿನ ಆವರಣದ ಮುಂದೆಯೇ ಥಾರ್ ಕಾರೊಂದು ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಭೂಮಿಕಾ ಮೃತಪಟ್ಟಿರುತ್ತಾರೆ. ವಿದ್ಯಾರ್ಥಿನಿ ಜೈಬಾ ಅವರ ಮೊಣಕಾಲು, ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ ಮತ್ತು ವಿದ್ಯಾರ್ಥಿನಿ ಮೇಘನಾಗೆ ಕಾಲು ಹಾಗೂ ತಲೆಗೆ ತೀವ್ರ ಗಾಯಗಳಾಗಿರುತ್ತವೆ ಹಾಗೂ ವಿದ್ಯಾರ್ಥಿನಿ ಮೇಘನಾ ಅವರಿಗೆ ಬಲಗೈ ಮುರಿದಿದ್ದು, ಇತರಕಡೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ದುರ್ಘಟನೆಗೆ ಎ.ವಿ.ಎಸ್. ಬ್ರಿಲಿಯಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಡಳಿತ ಮಂಡಳಿ ಹಾಗೂ ಚೇತನ ಆಸ್ಪತ್ರೆಯವರ ದಿವ್ಯ ನಿರ್ಲಕ್ಷö್ಯ ಸಾಕ್ಷಿಯಾಗಿದ್ದು, ಈ ದುರ್ಘಟನೆಗೆ ಇವರೇ ಹೊಣೆಗಾರರಾಗಿದ್ದಾರೆ” ಎಂದು ಸಂಘಟಕರು ಮನವಿಪತ್ರದಲ್ಲಿ ಆರೋಪಿಸಿದ್ದಾರೆ.

Namma Sindhanuru Click For Breaking & Local News

“ತಾಲ್ಲೂಕಿನ ಅರಗಿನಮರಕ್ಯಾಂಪ್‌ನ ಬಡ ಕೂಲಿ ಕಾರ್ಮಿಕ ಕುಟುಂಬದ ವಿದ್ಯಾರ್ಥಿನಿ ಭೂಮಿಕಾ ಸಾವಿಗೀಡಾಗಿರುವುದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.90ರಷ್ಟು ಅಂಕಗಳನ್ನು ಪಡೆದಿದ್ದ ಭೂಮಿಕಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಆಕೆ ಸ್ವ ಇಚ್ಛೆಯಿಂದ ಪಿಯು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ವೈದ್ಯಳಾಗುವ ಕನಸು ಕಟ್ಟಿಕೊಂಡಿದ್ದಳು, ಆದರೆ ಕಾಲೇಜಿನವರ ಬೇಜವಾಬ್ದಾರಿ ಹಾಗೂ ಖಾಸಗಿ ಆಸ್ಪತ್ರೆಯವರು ನಿರ್ಲಕ್ಷ್ಯದಿಂದ ಮುಗ್ದ ವಿದ್ಯಾರ್ಥಿನಿ ಬಲಿಪಶುವಾಗಿದ್ದು, ಇನ್ನುಳಿದ ಮೂವರು ವಿದ್ಯಾರ್ಥಿನಿಯರು ಸಹ ಗಂಭೀರವಾಗಿ ಗಾಯಗೊಂಡಿರುವುದರಿಂದ ಅವರ ಓದಿಗೂ ಕುತ್ತು ಎದುರಾಗಿದೆ. ಈ ಘಟನೆ ಇಡೀ ಪಾಲಕ ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಆತಂಕವನ್ನುಂಟು ಮಾಡಿದೆ” ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
“ಈ ಪ್ರಕರಣದಲ್ಲಿ ನೈಜ ತಪ್ಪಿತಸ್ಥರನ್ನು ಬಚಾವು ಮಾಡುವ ದುರುದ್ದೇಶದಿಂದ ಕೆಲ ಪ್ರಭಾವಿಗಳು ಇದೊಂದು ಆಕಸ್ಮಿಕ ಘಟನೆ ಎಂದು ಸಾರ್ವಜನಿಕ ವಲಯದಲ್ಲಿ ಬಿಂಬಿಸಿ, ಪ್ರಕರಣವನ್ನು ಮುಚ್ಚಿಹಾಕುವ ಯತ್ನದಲ್ಲಿದ್ದು, ಈ ನಿಟ್ಟಿನಲ್ಲಿ ಹಲವು ಅಪರಾ-ತಪರಾ ಮಾಡಲಾಗಿದೆ ಎಂದು ಪ್ರತ್ಯಕ್ಷö್ಯದರ್ಶಿಗಳು ನಮ್ಮ ಸಂಘಟನೆಗೆ ಮಾಹಿತಿ ನೀಡಿರುತ್ತಾರೆ. ಹಾಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾವುದೇ ಪ್ರಭಾವ ಮತ್ತು ಒತ್ತಡಕ್ಕೆ ಮಣಿಯದೇ ನ್ಯಾಯಯುತ ತನಿಖೆ ನಡೆಸಬೇಕು, ಆ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ನಮ್ಮ ಸಂಘಟನೆಯು ಆಗ್ರಹಿಸುತ್ತದೆ. ಹಾಗೂ ಕೂಡಲೇ ರಸ್ತೆಗೆ ಹೊಂದಿಕೊಂಡಿರುವ ಹಾಗೂ ರಸ್ತೆ ಬಳಿಯಿರುವ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳ ಹಿತದ ದೃಷ್ಟಿಯಿಂದ ಸೂಕ್ತ ನಿರ್ದೇಶನ ಹಾಗೂ ನೊಟೀಸ್ ಜಾರಿ ಮಾಡುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮೃತ ವಿದ್ಯಾರ್ಥಿನಿ ಭೂಮಿಕಾ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಮತ್ತು ಈ ಮೂವರು ವಿದ್ಯಾರ್ಥಿನಿಯರಿಗೆ ತಲಾ 15 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು, ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿದ ಎ.ವಿ.ಎಸ್.ಬ್ರಿಲಿಯಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು, ಆಸ್ಪತ್ರೆಯ ಆವರಣದಲ್ಲಿ ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳದ ಚೇತನ ಆಸ್ಪತ್ರೆಯವರ ಮೇಲೆ ಕ್ರಮ ಕೈಗೊಳ್ಳಬೇಕು, ಯಾವುದೇ ಪ್ರಭಾವಕ್ಕೊಳಗಾಗದೇ ಭೂಮಿಕಾ ಸಾವಿನ ಪ್ರಕರಣವನ್ನು ನ್ಯಾಯಯುತವಾಗಿ ತನಿಖೆಗೊಳಪಡಿಸಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಎಲ್ಲಾ ಶಿಕ್ಷಣ ಸಂಸ್ಥೆಯವರಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡಿ, ನೊಟಿಸ್ ಜಾರಿ ಮಾಡಬೇಕು ಮನವಿಪತ್ರದ ಆ ಮೂಲಕ ಆಗ್ರಹಿಸಿದ್ದಾರೆ. ಶಿರಸ್ತೇದಾರ್ ವಾಣಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಇ.ಎಚ್.ನಾಯಕ, ಸಂಘಟನೆಯ ಪ್ರಮುಖರಾದ ಪ್ರದೀಪ ಗೊರೇಬಾಳ, ಸ್ವಾಮಿ ನಾಯಕ ಬಾದರದಿನ್ನಿ, ಶಾರದಾ ನಾಯಕ, ಶಾಂಭವಿ, ಶಶಿಧರ ಸಿಂಧನೂರು, ಭೀಮೇಶ ಸಿಂಧನೂರು, ರಮೇಶ ಎಲೆಕೂಡ್ಲಿಗಿ, ಮುತ್ತು ಎಲೆಕೂಡ್ಲಿಗಿ, ನಿಂಗಮ್ಮ, ಯಮನೂರು ಪಗಡದಿನ್ನಿ, ಸುಧಾಕರ ಗೊರೇಬಾಳ ಇದ್ದರು.


Spread the love

Leave a Reply

Your email address will not be published. Required fields are marked *