ಸಿಂಧನೂರು: ವಿದ್ಯಾರ್ಥಿನಿ ಸಾವಿನ ಪ್ರಕರಣ ಪಾರದರ್ಶಕವಾಗಿ ತನಿಖೆಗೊಳಿಪಡಿಸಿ, ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಲು ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು.ಮೇ 11, 2026

ನಗರದ ಎ.ವಿ.ಎಸ್ ಬ್ರಿಲಿಯಂಟ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಭೂಮಿಕಾ ಸಾವಿನ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆಗೊಳಪಡಿಸಬೇಕು, ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಸುರಕ್ಷತೆ, ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ರವಾನಿಸಲಾಯಿತು.
ಶೈಕ್ಷಣಿಕ ಹಕ್ಕಿನ ಉಲ್ಲಂಘನೆ ಆರೋಪ
“ನಗರದ ಸಾರ್ವಜನಿಕ ಗ್ರಂಥಾಲಯದ ಹಿಂಭಾಗದಲ್ಲಿರುವ ಎ.ವಿ.ಎಸ್ ‌ ಬ್ರಿಲಿಯಂಟ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಭೂಮಿಕಾ ತಂದೆ ವೀರರಾಜು ಅರಗಿನಮರಕ್ಯಾಂಪ್ ಅವರು ಕಾಲೇಜಿನ ಮುಂಭಾಗದಲ್ಲಿಯೇ ಅಪಘಾತಕ್ಕೀಡಾಗಿ ಧಾರುಣವಾಗಿ ಮೃತಪಟ್ಟಿರುವುದು ಕಾಲೇಜು ಆಡಳಿತ ಮಂಡಳಿಯವರ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಈ ಘಟನೆ ವಿದ್ಯಾರ್ಥಿಗಳು ಹಾಗೂ ಪಾಲಕ ಸಮುದಾಯದಲ್ಲಿ ಭಯ, ಆತಂಕವನ್ನು ಸೃಷ್ಟಿಸಿದೆ. ದುರ್ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿದ್ದರಿAದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಲು ಹಿಂದೇಟು ಹಾಕುವಂತಾಗಿದೆ. ಸಿಂಧನೂರು ತಾಲೂಕು ಕೇಂದ್ರ ಜಿಲ್ಲೆಯಲ್ಲಿಯೇ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದ್ದು, ಇಲ್ಲಿಗೆ ದಿನವೂ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಾರೆ. ಆದರೆ ಈ ಘಟನೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದ್ದು, ಮಕ್ಕಳ ಶೈಕ್ಷಣಿಕ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಸಂಘಟಕರು ಮನವಿಪತ್ರದಲ್ಲಿ ಆಪಾದಿಸಿದ್ದಾರೆ.
ಅವಘಡಕ್ಕೆ ಸಂಸ್ಥೆಯೇ ನೇರ ಹೊಣೆ: ಆಪಾದನೆ
“ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಯಮಾವಳಿಯಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೂ ಎ.ವಿ.ಎಸ್.ಬ್ರಿಲಿಯಂಟ್ ಕಾಲೇಜಿನವರು ರಜೆಯಲ್ಲೂ ವಿಶೇಷ ತರಗತಿ ನಡೆಸುತ್ತಿದ್ದು, ದಿನಾಂಕ: 08-05-2025 ರಂದು ಮಧ್ಯಾಹ್ನ 4.30ರ ಸುಮಾರು ತರಗತಿ ಮುಗಿಸಿಕೊಂಡು ಸಹಪಾಠಿಗಳಾದ ಭೂಮಿಕಾ, ಮಹೇಶ್ವರಿ, ಜೈಬಾ ಹಾಗೂ ಮೇಘನಾ ಅವರು ಹೊರಟ ಸಂದರ್ಭದಲ್ಲಿ ಕೆಎ-02/ಎಂಡಬ್ಲ್ಯು-0333 ನಂಬರಿನ ಕಾರು ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಅವಘಡದ ತೀವ್ರತೆಗೆ ಭೂಮಿಕಾ ತಂದೆ ವೀರರಾಜು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ವಿದ್ಯಾರ್ಥಿನಿ ಜೈಬಾ ಅವರ ಮೊಣಕಾಲು, ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇನ್ನೊಬ್ಬ ವಿದ್ಯಾರ್ಥಿನಿ ಮೇಘನಾಗೆ ಕಾಲು ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಹಾಗೂ ವಿದ್ಯಾರ್ಥಿನಿ ಮೇಘನಾಗೆ ಬಲಗೈ ಮುರಿದಿದ್ದು, ಇತರೆಡೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಈ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅವಘಡ ಎ.ವಿ.ಎಸ್. ಬ್ರಿಲಿಯಂಟ್ ಕಾಲೇಜು ಮುಂದೆಯೇ ನಡೆದಿದ್ದು, ಶಿಕ್ಷಣ ಸಂಸ್ಥೆಯೇ ಈ ಅವಘಡಕ್ಕೆ ನೇರ ಹೊಣೆಯಾಗಿದೆ” ಎಂದು ಅವರು ಮನವಿಪತ್ರದಲ್ಲಿ ತಿಳಿಸಿದ್ದಾರೆ.

Namma Sindhanuru Click For Breaking & Local News

‘ಶಿಕ್ಷಣ ಹಕ್ಕು ಕಾಯ್ದೆ, 2009’ ಉಲ್ಲಂಘನೆʼ, ಖಾಸಗಿ ಆಸ್ಪತ್ರೆಯವರ ಬೇಜವಾಬ್ದಾರಿ : ದೂರು
“ಮೃತ ಭೂಮಿಕಾ ಅತ್ಯಂತ ಬಡ ಕುಟುಂಬದ ಮತ್ತು ಶೋಷಿತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಆಕೆ ಭವಿಷ್ಯದಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪೋಷಕರಿಗೆ ಆಸರೆಯಾಗುತ್ತಿದ್ದಳು. ಆದರೆ ಕಾಲೇಜು ಆಡಳಿತ ಮಂಡಳಿ ಹಾಗೂ ಖಾಸಗಿ ಆಸ್ಪತ್ರೆಯವರ ಬೇಜವಾಬ್ದಾರಿಯಿಂದ ಹೂವೊಂದು ಅರಳುವ ಮುನ್ನವೇ ಬಾಡಿದಂತಾಗಿದೆ. ಪ್ರತಿಭಾವಂತ ಮುಗ್ದ ಮಗಳನ್ನು ಕಳೆದುಕೊಂಡ ಬಡ ಕುಟುಂಬ ಅಕ್ಷರಶಃ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಪಿಯು ಕಾಲೇಜು ಪಕ್ಕದಲ್ಲಿಯೇ ಚೇತನ ಆಸ್ಪತ್ರೆ ಇದ್ದು, ದಿನವೂ ಇಲ್ಲಿಗೆ ಆಂಬ್ಯುಲೆನ್ಸ್ ಸೇರಿದಂತೆ ಖಾಸಗಿ ವಾಹನಗಳು ವಿಪರೀತವಾಗಿ ಬರುತ್ತಿದ್ದರೂ ಶಿಕ್ಷಣ ಸಂಸ್ಥೆಯವರು ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಇರುವುದರಿಂದ ಈ ದುರ್ಘಟನೆ ಜರುಗಿದೆ. ಈ ನಡುವೆ ಕಾಲೇಜು ಪಕ್ಕದಲ್ಲಿಯೇ ಆಸ್ಪತ್ರೆ ಇರುವುದರಿಂದ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿದ್ದರೂ ಆಸ್ಪತ್ರೆಯವರೂ ಕೂಡ ಯಾವುದೇ ಸುರಕ್ಷತೆ, ಭದ್ರತೆ ಹಾಗೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಎದ್ದುಕಾಣುತ್ತಿದೆ. ‘ಶಿಕ್ಷಣ ಹಕ್ಕು ಕಾಯ್ದೆ, 2009’ ಅಡಿಯಲ್ಲಿ ಶಾಲಾ ಮಕ್ಕಳಿಗೆ ಸುರಕ್ಷಿತ ಮತ್ತು ಮಕ್ಕಳ ಸ್ನೇಹಿ ವಾತಾವರಣವನ್ನು ಒದಗಿಸುವ ಜವಾಬ್ದಾರಿ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ. ಆದರೆ ಈ ಘಟನೆಯಲ್ಲಿ ಶಿಕ್ಷಣ ಸಂಸ್ಥೆಯವರಿಂದ ಹಲವು ಲೋಪಗಳಾಗಿದ್ದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ” ಎಂದು ಮನವಿಪತ್ರದಲ್ಲಿ ದೂರಿದ್ದಾರೆ.
ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರಕ್ಕೆ ಆಗ್ರಹ
“ಅವಘಡದಲ್ಲಿ ಮೃತಪಟ್ಟ ಸಿಂಧನೂರು ನಗರದ ಎ.ವಿ.ಎಸ್.ಬ್ರಿಲಿಯಂಟ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಭೂಮಿಕಾ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು, ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನು ಮೂವರು ವಿದ್ಯಾರ್ಥಿನಿಯರ ಆಸ್ಪತ್ರೆಯ ಚಿಕಿತ್ಸೆ ವೆಚ್ಚವನ್ನು ಭರಿಸಬೇಕು ಹಾಗೂ ಈ ಮೂವರು ವಿದ್ಯಾರ್ಥಿನಿಯರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ವಿದ್ಯಾರ್ಥಿನಿಯರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಎ.ವಿ.ಎಸ್.ಬ್ರಿಲಿಯಂಟ್ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಶಿಕ್ಷಣ ಇಲಾಖೆಯ ನಿಯಮಾವಳಿಗಳ ಅನ್ವಯ ಕ್ರಮ ಜರುಗಿಸಬೇಕು, ಸೂಕ್ತ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಚೇತನ ಆಸ್ಪತ್ರೆಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಎ.ವಿ.ಎಸ್.ಬ್ರಿಲಿಯಂಟ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಭೂಮಿಕಾ ಅವರ ಸಾವಿರ ಘಟನೆಯನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ದುರ್ಘಟನೆಗಳು ಮರುಕಳಿಸದಂತೆ ಜಿಲ್ಲಾ, ತಾಲ್ಲೂಕು ಆಡಳಿತ ಹಾಗೂ ಸಂಚಾರಿ ಠಾಣೆ ಪೊಲೀಸರು ಸೇರಿದಂತೆ ಸಂಬಂಧಿಸಿದ ಇಲಾಖೆಯವರು ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ(ಎಂಎಲ್) ಲಿಬರೇಶನ್ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಕಂಠೆಪ್ಪ ರೈತನಗರಕ್ಯಾಂಪ್, ನಿಂಗಪ್ಪ ಸುಲ್ತಾನಪುರ, ತಿಮ್ಮಣ್ಣ ಸುಲ್ತಾನಪುರ, ಐಸಾ ಸಂಘಟನೆಯ ಪ್ರವೀಣ್, ಅಮರೇಶ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *