ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 16
ನಗರದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಾರಿಗೆ ಸಂಸ್ಥೆಯ ಬಸ್ ಹರಿದು ಮಹಿಳೆಯೊಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ 12.50 ಸುಮಾರು ನಡೆದಿದೆ. ಸಾರಿಗೆ ಸಂಸ್ಥೆಯ ಬಸ್ ಮಹಿಳೆಯ ತಲೆಮೇಲೆ ಹರಿದಿದ್ದರಿಂದ ಮಹಿಳೆಯ ತಲೆಬುರಡೆ, ಮೆದುಳಿನ ಭಾಗ ರಸ್ತೆಮೇಲೆ ಚೆಲ್ಲಾಪಿಲ್ಲಿಯಾದ ಭೀಕರ ದೃಶ್ಯ ಪ್ರತ್ಯಕ್ಷದರ್ಶಿಗಳ ಹೃದಯ ಕಲಕಿತು.
ಜಮಾಯಿಸಿದ ಜನ
ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಈ ದುರ್ಘಟನೆ ನಡೆದಿದ್ದರಿಂದ ಕ್ಷಣಮಾತ್ರದಲ್ಲಿ ನೂರಾರು ಜನರು ಗುಂಪು ಗೂಡಿದ್ದರಿಂದ ಕೆಲಕಾಲ ಕುಷ್ಟಗಿ ಮಾರ್ಗದಲ್ಲಿ ರಸ್ತೆ ಸಂಚಾರಕ್ಕೆ ವ್ಯತ್ಯವಾಯಿತು. ಮಹಿಳೆಯೊಬ್ಬರು ಭೀಕರವಾಗಿ ಅಪಘಾತಕ್ಕೀಡಾಗಿದ್ದನ್ನು ಮಹಿಳೆಯರು ಸೇರಿದಂತೆ ಸುತ್ತಮುತ್ತಲಿನ ಜನರು ಕಂಡು ಮರುಗಿದ್ದು ಕಂಡುಬಂತು. ಅಪಘಾತದ ಭೀಕರತೆ ಕಾರಣ ಮಹಿಳೆ ಯಾರೆಂದು ಪತ್ತೆಯಾಗಿಲ್ಲ. ತದನಂತರ ಆಂಬುಲೆನ್ಸ್ ಮೂಲಕ ಸಂಚಾರಿ ಠಾಣೆ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಕಳೆಬರಹ ಸಾಗಿಸಿದರು.
ಫುಟ್ಪಾತ್ ಅತಿಕ್ರಮಣ, ಜನ ಸಂಚಾರಕ್ಕೆ ಸಂಕಷ್ಟ
ಕೆಲ ಖಾಸಗಿ ಹೋಟೆಲ್ನವರು ಫುಟ್ಪಾತ್ ಅತಿಕ್ರಮಣ ಮಾಡಿಕೊಂಡಿದ್ದು, ಇದರಿಂದಾಗಿ ಬಸ್ ನಿಲ್ದಾಣದ ಆಸುಪಾಸು ಜನರು ಅನಿವಾರ್ಯವಾಗಿ ರಸ್ತೆ ಮೇಲೆ ಸಂಚರಿಸುತ್ತಾರೆ. ಕೆಲ ಅಂಗಡಿಮುಂಗಟ್ಟುಗಳ ಮುಂದೆ ಮನಬಂದಂತೆ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇದರಿಂದ ಸಾರಿಗೆ ಸಂಸ್ಥೆ ವಾಹನಗಳು ಸೇರಿದಂತೆ ಇನ್ನಿತರೆ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲಿ ಯಾವುದೇ ಫಲಕಗಳಾಗಿ, ಆಧುನಿಕ ರಸ್ತೆ ಸುರಕ್ಷತಾ ಕ್ರಮಗಳನ್ನಾಗಲಿ ಕೈಗೊಳ್ಳದೇ ಇರುವುದರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದ ಎರಡೂ ಪ್ರವೇಶ ದ್ವಾರಗಳು ಅವೈಜ್ಞಾನಿಕ ?
ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ಬಸ್ ನಿಲ್ದಾಣ ಅತ್ಯಂತ ದೊಡ್ಡ ನಿಲ್ದಾಣವಾಗಿದೆ. ಆದರೆ ವಿಚಿತ್ರ ಮತ್ತು ವಿಪರ್ಯಾಸ ಸಂಗತಿಯೇನೆಂದರೆ, ಎರಡೂ ಪ್ರವೇಶ ದ್ವಾರಗಳು ಅತ್ಯಂತ ಚಿಕ್ಕದಾಗಿದ್ದು, ಸರ್ಕಾರ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ವಾಣಿಜ್ಯ ಕಾಂಪ್ಲೆಕ್ಸ್ಗಳನ್ನು ನಿರ್ಮಿಸಿದೆ. ಇಕ್ಕಟ್ಟಾದ ಪ್ರವೇಶ ದ್ವಾರಗಳಲ್ಲಿ ಸಾರಿಗೆ ಬಸ್ಗಳನ್ನು ಚಲಾಯಿಸಲು ಚಾಲಕರು ಪರದಾಡುವಂತಾಗಿದೆ. ಈ ನಡುವೆ ಇಕ್ಕಟ್ಟಾದ ಪ್ರದೇಶವನ್ನೂ ಕೆಲವರು ಅತಿಕ್ರಮಿಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಅನಿವಾರ್ಯವಾಗಿ ಜನರು ರಸ್ತೆ ಮೇಲೆ ಸಂಚರಿಸುವುದರಿಂದ ಪದೇ ಪದೆ ಅಪಘಾತಗಳು ಘಟಿಸಿ, ಸಾರ್ವಜನಿಕರ ಪ್ರಾಣ ಹಾನಿಯಾಗುತ್ತಿದೆ ಎಂದು ನಗರದ ನಾಗರಿಕರೊಬ್ಬರು ದೂರುತ್ತಾರೆ.
ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ ?
ಸಾರಿಗೆ ಬಸ್ ಸಂಚರಿಸಲು ಪ್ರವೇಶ ದ್ವಾರದಲ್ಲಿ ರಸ್ತೆ ಇಕ್ಕಟ್ಟಾಗಿರುವುದಲ್ಲದೇ ಕೆಲವರು ರಸ್ತೆ ಅತಿಕ್ರಮಿಸಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಈ ನಡುವೆ ಬಸ್ ನಿಲ್ದಾಣ ಆಸುಪಾಸು ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊAಡು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರು ವಾಹನ ಪಾರ್ಕಿಂಗ್ ಮಾಡಿದರೂ ಟ್ರಾಫಿಕ್ ಇಲಾಖೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗದೇ ಇರುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಸಂಘಟನೆಯ ಮುಖಂಡರೊಬ್ಬರು ಆಪಾದಿಸಿದ್ದಾರೆ.

