ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 25
ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 15000 ಹಾಗೂ ಸಹಾಯಕಿಯರಿಗೆ ರೂ. 10000 ಗೌರವ ಧನ ಹೆಚ್ಚಿಸಿ ಜಾರಿಗೊಳಿಸಬೇಕು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ 2011ರಿಂದ ನಿವೃತ್ತರಾಗಿರುವ ವಯೋವೃದ್ಧ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ಹಾಗೂ ನಿವೃತ್ತಿ ಪಡೆದವರಿಗೂ ಗ್ರಾಚ್ಯುಟಿ ಅನಕೂಲ ಕಲ್ಪಿಸಬೇಕೆನ್ನುವ ಪ್ರಮುಖ ಬೇಡಿಕೆ ಸೇರಿದಂತೆ ಇನ್ನಿತರೇ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 2ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಜಿಲ್ಲಾ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಂಗನವಾಡಿ ಕೇಂದ್ರದ ಕೆಲಸದ ಜವಾಬ್ದಾರಿಯೊಂದಿಗೆ ಹೆಚ್ಚುವರಿಯಾಗಿ ಹಾಗೂ ಬಲವಂತವಾಗಿ ಬಿ.ಎಲ್.ಓ ಜವಾಬ್ದಾರಿ ಹೊರೆಸುತ್ತಿರುವುದರಿಂದ ಕರ್ತವ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಬಿಎಲ್‌ಓ ಜವಾಬ್ದಾರಿ ನಿರಾಕರಿಸುವ ಕಾರ್ಯಕರ್ತೆಯರ ಶಿಸ್ತುಕ್ರಮ ಜರುಗಿಸುತ್ತಿರುವುದು ಸರಿಯಲ್ಲ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಅವಕಾಶ ಮಾಡಿಕೊಡುತ್ತಿರುವುದರಿಂದ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲ ಆಶಯಗಳು ಗಾಳಿಗೋಪುರವಾಗುತ್ತಿವೆ. ಆದುದರಿಂದ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿಗಳನ್ನು ಪ್ರಾರಂಭಿಸಿ ಅಂಗನವಾಡಿ ಅಂಗನವಾಡಿಗಳಿಗೆ ಬರುವ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸಿ ಬಡಿಸಲು ತರಕಾರಿ ವೆಚ್ಚ ಕೇವಲ 50 ಪೈಸೆ ಕೊಡುತ್ತಿದ್ದು ಇದನ್ನು ಬೆಲೆ ಏರಿಕೆಗೆ ತಕ್ಕಂತೆ ಹೆಚ್ಚಿಸಬೇಕು ಎಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಅಂದು ನಡೆಯುವ ಹೋರಾಟದಲ್ಲಿ ಸರ್ಕಾರವನ್ನು ಆಗ್ರಹಿಸಲಾಗುವುದು” ಎಂದು ಕಂಬಳಿ ಅವರು ತಿಳಿಸಿದರು.
“ಪ್ರಣಾಳಿಕೆಯಲ್ಲಿ ಮಾತುಕೊಟ್ಟ ಭರವಸೆಗಳನ್ನು ಈಡೇರಿಸಿ”: ಸಂಗಯ್ಯಸ್ವಾಮಿ
ಫೆಡರೇಶನ್ ಜಿಲ್ಲಾ ಕಾರ್ಯಾಧ್ಯಕ್ಷ ಸಂಗಯ್ಯಸ್ವಾಮಿ ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಡಿ.ಎ. ರೂ. 30 ಇರುವುದನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸಬೇಕು, ಇದನ್ನು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವವರಿಗೂ ವಿಸ್ತರಿಸಬೇಕು. ಮಾತೃವಂದನ, ಭಾಗ್ಯಲಕ್ಷ್ಮಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಪ್ರತಿ ತಿಂಗಳು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಬಾಡಿಗೆ ಕಟ್ಟಡಗಳನ್ನು ಪಡೆಯಲು ಅಗತ್ಯವಾದ ಮುಂಗಡ ಹಣ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಅನುಮೋದನೆ ನೀಡದೆ ಇರುವ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಹಣ ಮತ್ತು ಪೋಷನ್ ಅಭಿಯಾನದ ಪ್ರೋತ್ಸಾಹ ಧನ ನೀಡುವಂತೆ ಕ್ರಮ ಕೈಗೊಳ್ಳಬೇಕು. ಅನಾರೋಗ್ಯಕ್ಕೆ ತುತ್ತಾಗುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಶಸ್ತçಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸೆಗಾಗಿ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. ಅನಾರೋಗ್ಯಕ್ಕೆ ಒಳಗಾದ ಅವಧಿಯನ್ನು ವೇತನ ಸಹಿತ ವೈದ್ಯಕೀಯ ರಜೆ ಎಂದು ಪರಿಗಣಿಸಬೇಕು. ಕಾರ್ಯಕರ್ತೆಯರ ಮಾಸಿಕ ಭತ್ಯೆ ರೂ. 50 ಕೊಡುತ್ತಿದ್ದು, ಇದನ್ನು ಹೆಚ್ಚಿಸಬೇಕು ಮೊಟ್ಟೆಯ ದರ ಏರುಪೇರು ಆಗುತ್ತಿದ್ದು, ಮಾರುಕಟ್ಟೆಯ ದರ ಹೆಚ್ಚಳಕ್ಕೆ ಅನುಗುಣವಾಗಿ ಮೊಟ್ಟೆ ಹಣ ವನ್ನು ಬಿಡುಗಡೆ ಮಾಡಬೇಕು. ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ವಾಸ ಸ್ಥಳಕ್ಕೆ ಇರುವ ನಿಯಮವನ್ನು ಸಡಿಲಿಸಬೇಕು. ಅಂಗನವಾಡಿ ಕೇಂದ್ರಗಳ ನಿರ್ವಹಣೆಗಾಗಿ ಬಿಡುಗಡೆಗೊಳಿಸುತ್ತಿರುವ 2000 ರೂಪಾಯಿ ಸಾದಿಲ್ವಾರು ಹಣವನ್ನು ಇತರೆ ಕಾರ್ಯಕ್ರಮಗಳಿಗೂ ಬಳಕೆ ಮಾಡಲು ಸೂಚಿಸುತ್ತಿರುವುದರಿಂದ ಸಾದಿಲ್ವಾರು ಹಣ ಬಳಕೆಯ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ, ತಾಲೂಕು ಘಟಕದ ಅಧ್ಯಕ್ಷೆ ಗಿರಿಜಮ್ಮ, ಪದಾಧಿಕಾರಿಗಳಾದ ಸಾವಿತ್ರಿ ಎಲೆಕೂಡ್ಲಿಗಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ತಿಪ್ಪಯ್ಯ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.

