ಸಿಂಧನೂರು: ತುಂಗಭದ್ರಾ ಜಲಾಶಯ ಕಲುಷಿತಗೊಳಿಸುತ್ತಿರುವ ಕಾರ್ಖಾನೆಗಳನ್ನು ಸ್ಥಳಾಂತರಿಸಲು ಆಗ್ರಹಿಸಿ ಪ್ರತಿಭಟನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು.ಫೆಬ್ರವರಿ 23

ತುಂಗಭದ್ರ ಜಲಾಶಯಕ್ಕೆ ಕಲುಷಿತ ತ್ಯಾಜ್ಯ ಹರಿಬಿಡುತ್ತಿರುವ ಹಾಗೂ ಕೊಪ್ಪಳ ಸೇರಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ವಿಪರೀತ ಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ, ಕರ್ನಾಟಕ ರೈತ ಸಂಘ (ಎಐಯುಕೆಎಸ್)ದ ವತಿಯಿಂದ ಸೋಮವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಅವರು “ಕೊಪ್ಪಳ ಜಿಲ್ಲಾ ಕೇಂದ್ರ ಹಾಗೂ ತಾಲೂಕಿನ ಸುತ್ತಮುತ್ತ ಇರುವ ಗ್ರಾಮಗಳ ವ್ಯಾಪ್ತಿಯಲ್ಲಿ 24ಕ್ಕೂ ಹೆಚ್ಚು ಬೃಹತ್ ಕಾರ್ಖಾನೆಗಳು ನಿರ್ಮಾಣಗೊಂಡಿವೆ. ಈ ಎಲ್ಲಾ ಕಾರ್ಖಾನೆಗಳು ವಿಷಕಾರಿ ನೀರು, ಬೂದಿ (ಮೊಲಾಸಸ್) ಸೇರಿದಂತೆ ಇತರೆ ತ್ಯಾಜ್ಯವನ್ನು ನೇರವಾಗಿ ತುಂಗಭದ್ರಾ ಜಲಾಶಯಕ್ಕೆ ಹರಿಬಿಡಲಾಗುತ್ತಿದೆ. ಕೆಲವು ಕಾರ್ಖಾನೆಗಳು ವಿಷಕಾರಿ ನೀರನ್ನು ಸಂಸ್ಕರಿಸದೇ ಸುತ್ತಮುತ್ತಲ ಭೂಮಿಯಲ್ಲಿ ಇಂಗಿಸಲಾಗುತ್ತದೆ. ಇದರಿಂದ ಕಲುಷಿತಗೊಂಡ ಅಂತರ್ಜಲವೂ ಸಹ ತುಂಗಭದ್ರಾ ನದಿಗೆ ಸೇರುತ್ತಿದೆ. ಈ ನೀರನ್ನು ಸೇವಿಸಿದ ಜನರು ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ 20 ವರ್ಷಗಳಿಂದ ಕೊಪ್ಪಳ ಜಿಲ್ಲೆಯ ಚಿಕ್ಕಗನಾಳ, ಹಿರೇಬಗನಾಳ, ಕಾಸನಕಂಡಿ, ಗಿಣಗೇರಾ, ಅಲ್ಲಾನಗರ, ಬೇವಿನಾಳ, ಹಾಲವರ್ತಿ, ಲಾಚನಕೇರಿ, ಮುಂಡರಗಿ ಸೇರಿದಂತೆ ಹಲವು ಗ್ರಾಮಗಳು ಸದರಿ ಕಾರ್ಖಾನೆಗಳ ವಿಷಕಾರಿ ಅನಿಲ, ಹೊಗೆಯಿಂದ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಗ್ರಾಮಗಳ ಪ್ರತಿಯೊಂದು ಮನೆಯ ಕುಟುಂಬದ ಬಹುತೇಕ ಸದಸ್ಯರು ಅಸ್ತಮಾ, ಟಿಬಿ, ಕ್ಯಾನ್ಸರ್, ಚರ್ಮರೋಗ ಇತ್ಯಾದಿ ರೋಗಗಳಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ ರಾಷ್ಟ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಿನ ಕಾರ್ಖಾನೆಗಳನ್ನು ಹಂತ ಹಂತವಾಗಿ ಸ್ಥಳಾಂತರ ಮಾಡಬೇಕೆಂದು ವರದಿ ನೀಡಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಎಂಎಸ್‌ಪಿ ಬಲ್ಡೋಟಾ ಕಂಪನಿಯು 54,000 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಉಕ್ಕಿತ ಕಾರ್ಖಾನೆ ನಿರ್ಮಾಣ ಮಾಡಲು ಮುಂದಾಗಿರುವುದು, ಜನರನ್ನು ಬೆಂಕಿಯಿಂದ ಬಾಣಲೆಗೆ ತಳ್ಳಿದಂತಾಗಿದೆ” ಎಂದು ಪೂಜಾರ್ ಕಳವಳ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ ಮಾತನಾಡಿ, “ಕಳೆದ 10 ವರ್ಷದ ಹಿಂದೆ ಬಲ್ಡೋಟಾ ಕಂಪನಿ ನಿರ್ಮಾಣ ಮಾಡಿರುವ ಒಂದು ಕಾರ್ಖಾನೆಯಿಂದ ಹೊಗೆ ಕೊಳವೆ (ಚಿಮಣಿ)ಯಿಂದ ಕೊಪ್ಪಳದ ಭಾಗ್ಯನಗರದ ಸಾವಿರಾರು ಜನರು ಹತ್ತಾರು ಕಾಯಿಲೆಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಪುನಃ 54 ಸಾವಿರ ಕೋಟಿ ವೆಚ್ಚದ ಕಾರ್ಖಾನೆ ನಿರ್ಮಾಣವಾದರೆ 17 ಕೊಳವೆ (ಚಿಮಣಿ)ಗಳಿಂದ ಹೊರಬರುವ ಹೊಗೆ ಮತ್ತು ವಿಷ ತ್ಯಾಜ್ಯದಿಂದ ಉಂಟಾಗುವ ಅನಾಹುತ ನೆನಸಿಕೊಂಡರೆ ಆತಂಕ ಕಾಡುತ್ತದೆ. ಈ ಬಲ್ಡೋಟಾ ಕಂಪನಿ ಕಾರ್ಖಾನೆ ವಿಸ್ತರಣೆಯಾದರೆ, ಕೊಪ್ಪಳ ನಗರ, ಭಾಗ್ಯ ನಗರ, ಐತಿಹಾಸಿಕ ಗವಿಮಠ ಸ್ಥಳಾಂತರಿಸಬೇಕಾಗುತ್ತದೆ. ಹಾಗಾಗಿ ಕೊಪ್ಪಳ ಜಂಟಿ ಕ್ರಿಯಾ ವೇದಿಕೆ, ಕೊಪ್ಪಳ ಬಚಾವೋ ಆಂದೋಲನ ವೇದಿಕೆ, ಪರಿಸರ ರಕ್ಷಣಾ ಸಮಿತಿ ವತಿಯಿಂದ ಕೊಪ್ಪಳದಲ್ಲಿ ಅನಿರ್ದಿಷ್ಟ ಸತ್ಯಾಗ್ರಹ ಧರಣಿ ನಡೆದಿರುತ್ತದೆ. ಈ ಹೋರಾಟ ಆರಂಭವಾಗಿ 116 ದಿನ ಕಳೆದಿದ್ದು ಮುಂದುವರಿದಿದೆ. ಆದರೆ, ಕರ್ನಾಟಕ ಸರ್ಕಾರ ಬಲ್ಡೋಟಾ ಕಂಪನಿಯ ವಿಸ್ತರಣೆಯನ್ನು ರದ್ದುಗೊಳಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಫೆ.24ರಂದು ಕೊಪ್ಪಳ ಬಂದ್ ಕರೆ ನೀಡಲಾಗಿದೆ. ಕೊಪ್ಪಳ ಬಂದ್ ಕರೆಗೆ ಬೆಂಬಲಿಸಿ ಕರ್ನಾಟಕ ರೈತ ಸಂಘ (ಕೆಆರ್‌ಎಸ್-ಎಐಯುಕೆಎಸ್) ಈ ಹಕ್ಕೊತ್ತಾಯ ಪತ್ರವನ್ನು ಸಿಎಂ ಅವರಿಗೆ ಸಲ್ಲಿಸಲಾಗುತ್ತಿದೆ” ಎಂದು ಅವರು ಹೇಳಿದರು.

ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಮಾತನಾಡಿ, “ಜನರ ಆರೋಗ್ಯದ ಹಿತದೃಷ್ಟಿ, ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಅಣೆಕಟ್ಟೆಯನ್ನು ಉಳಿಸುವ ನಿಟ್ಟಿನಲ್ಲಿ ಸಿಎಂ ಅವರು ತುರ್ತು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಹಿಳಾ ಮುಖಂಡರಾದ ರೇಣುಕಮ್ಮ, ಮರಿಯಮ್ಮ, ವಿರುಪಮ್ಮ, ಶರಣಬಸವ ನಾಗಲಾಪುರ, ಪ್ರಗತಿ, ರಾಜಶೇಖರ, ಬಸವರಾಜ, ಅಸ್ಲಂ, ತಿಮೋತಿ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *