ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 17
ರಾಜ್ಯದ ಯುವಜನರ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಅವರ ಸಮಗ್ರ ಅಭಿವೃದ್ಧಿಗೆ, ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪಿಸುವಂತೆ ಒತ್ತಾಯಿಸಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಶನಿವಾರ ಮನವಿಪತ್ರ ರವಾನಿಸಲಾಯಿತು.
ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಯುವಜನರಿದ್ದು, ಅವರು ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಮಾನಸಿಕ ಒತ್ತಡ, ಮಾದಕ ವ್ಯಸನ, ಸೈಬರ್ ವಂಚನೆ, ಸಾಮಾಜಿಕ ಅಸುರಕ್ಷತೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲಿ ಪ್ರತಿನಿಧಿತ್ವದ ಕೊರತೆ ಮುಂತಾದ ಗಂಭೀರ ಸಮಸ್ಯೆಗಳು ಯುವಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಸಂಘಟಕರು ಮನವಿಪತ್ರದಲ್ಲಿ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿ 9,450 ಆತ್ಮಹತ್ಯೆ ಪ್ರಕರಣ
“ರಾಜ್ಯ ಗೃಹ ಇಲಾಖೆ ಅಧಿಕೃತ ಅಂಕಿಅಂಶಗಳ ಪ್ರಕಾರ, 2022 ರಿಂದ ನವೆಂಬರ್ 2025ರವರೆಗೆ ಕರ್ನಾಟಕದಲ್ಲಿ 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬಹುಪಾಲು ಯುವಜನರಿಗೆ ಸಂಬAಧಿಸಿದೆ. ವಿವಿಧ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಅಧ್ಯಯನಗಳು ಸುಮಾರು 30% ಯುವಜನರು ಮಾನಸಿಕ ಆರೋಗ್ಯ ಸಮಸ್ಯೆಗಳು ಅಥವಾ ದೀರ್ಘಕಾಲದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ದೃಢಪಡಿಸಿವೆ. ಅದೇ ರೀತಿ ಎನ್ಎಸ್ಎಸ್ಒ ಸಮೀಕ್ಷೆಗಳ ಪ್ರಕಾರ ಯುವಜನರಲ್ಲಿ ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಳ್ಳದೇ ಇರುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಇದರಿಂದ ಅವರ ಭವಿಷ್ಯ ಮತ್ತು ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿಯ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತಿದೆ” ಎಂದು ಮನವಿಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಯುವ ನೀತಿ ಇದ್ದರೂ ಪರಿಣಾಮಕಾರಿ ಅನುಷ್ಠಾನ ಇಲ್ಲ’
2022ರಲ್ಲಿ ರಾಜ್ಯ ಯುವ ನೀತಿ ಇದ್ದರೂ, ಪರಿಣಾಮಕಾರಿ ಅನುಷ್ಠಾನ, ವಿವಿಧ ಇಲಾಖೆಗಳ ಯುವ ಕಾರ್ಯಕ್ರಮಗಳ ಸಮನ್ವಯ, ಯುವಜನರ ಅಹವಾಲುಗಳ ಪರಿಹಾರ ಹಾಗೂ ಸಾಕ್ಷ್ಯಾಧಾರಿತ ನೀತಿ ಶಿಫಾರಸುಗಳನ್ನು ನೀಡುವ ಕಾನೂನುಬದ್ಧ ಸಂಸ್ಥೆ ರಾಜ್ಯದಲ್ಲಿ ಪ್ರಸ್ತುತ ಇಲ್ಲ. ಇದರಿಂದ ಯುವ ಕಲ್ಯಾಣ ಕ್ಷೇತ್ರದಲ್ಲಿ ಗಂಭೀರ ಸಂಸ್ಥಾತ್ಮಕ ಶೂನ್ಯತೆ ಉಂಟಾಗಿದೆ. ಕೇರಳ, ಅಸ್ಸಾಂ, ಮಿಜೋರಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಅವು ಯುವ ಕಲ್ಯಾಣ, ಉದ್ಯೋಗ ಮಾರ್ಗದರ್ಶನ, ಮಾನಸಿಕ ಆರೋಗ್ಯ, ಮಾದಕ ವಸ್ತು ತಡೆ ಮತ್ತು ನಾಯಕತ್ವ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಹೆಚ್ಚಿನ ಯುವಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯಕ್ಕೂ ಸಹ ಇಂತಹ ಆಯೋಗದ ಅಗತ್ಯತೆಯಿದ್ದು, ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆಗಾಗಿ ಅಗತ್ಯ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಸಂಘಟಕರು ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ವಸಿಮ್ ಹಾಗೂ ತಾಲೂಕು ಅಧ್ಯಕ್ಷ ಅಬುಲೈಸ್ ನಾಯಕ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ವಿದ್ಯಾರ್ಥಿ ಸಂಘಟನೆಯ ಚಾಂದ್ಪಾಷ, ಯುವ ಮುಖಂಡ ಸೊಹೈಲ್ ದೇಸಾಯಿ, ಸಂಘಟನೆಯ ತಾಲೂಕು ಉಪಾಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿಗಳಾದ ನಯಿಮ್ ಇರ್ಫಾನ್, ಮುಸ್ತಾಕ್, ಅಝರ್, ಶಬೀರ್, ಆಸಿಫ್, ಫಾರೂಕ್, ರಿಯಾಜ್, ಯಾಸೀನ್ ಮುಲ್ಲಾ ಇನ್ನಿತರರಿದ್ದರು.

