ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 16
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬಿಳಿಜೋಳವನ್ನು ಖರೀದಿಸಲು ಜ.14ರಿಂದ ನೋಂದಣಿ ಕಾರ್ಯ ಆರಂಭವಾಗಿದ್ದು, ತಾಲೂಕಿನ ವಲ್ಕಂದಿನ್ನಿ ವಿವಿದೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದಲ್ಲಿ ಶುಕ್ರವಾರ ನೂಕುನುಗ್ಗಲು ಕಂಡುಬಂತು.
ಬೆಳಿಗ್ಗೆ 7 ಗಂಟೆಯಿಂದಲೇ ನೂರಾರು ರೈತರು ಸಹಕಾರ ಸಂಘದ ಆವರಣದಲ್ಲಿ ಜಮಾಯಿಸಿ ನೋಂದಣಿಗಾಗಿ ಕಾಯುತ್ತ ಕುಳಿತಿದ್ದರು, ನೋಂದಣಿ ಕಾರ್ಯಕ್ಕೆ ಸಮರ್ಪಕ ಪೂರ್ವ ತಯಾರಿ ಮಾಡಿಕೊಳ್ಳದಿರುವುದರಿಂದ ರೈತರು ಕಿರಿಕಿರಿ ಅನುಭವಿಸುತ್ತಿರುವುದು ಗೋಚರಿಸಿತು.
ನೋಂದಣಿಗೆ ಮುಗಿಬಿದ್ದ ರೈತರು
ಸಹಕಾರ ಸಂಘದ ಕಾರ್ಯಾಲಯಕ್ಕೆ ನೋಂದಣಿಗಾಗಿ ಒಮ್ಮಿಂದೊಮ್ಮೆಲೆ ನೂರಾರು ರೈತರು ಮುಗಿಬೀಳುತ್ತಿದ್ದು, ಕೂಗಾಟ, ಗದ್ದಲ ಸಾಮಾನ್ಯವಾಗಿದೆ. ಗದ್ದಲದ ನಡುವೆ ಎದ್ದುಬಿದ್ದು, ಕೊಸರಾಡಿ ನೋಂದಣಿ ಮಾಡಿಸುವಂತಾಗಿದೆ ಇಂತಹ ಗದ್ದಲದಲ್ಲಿ ನಮ್ಮಿಂದ ಯಾವಾಗ ಹೆಸರು ಬರೆಸಿ ಚೀಟಿ ತರುವುದು ಆಗ್ತದ ರೀ. ಮೊದಲನೇ ದಿನ ಬಂದ್ವಿ ಅಂಗ ಹೋದ್ವಿ, ಈಗ ಎರಡ್ನೇ ದಿನ ಬಂದೀವಿ ನೋಡ್ರಿ” ಎಂದು ರೈತರೊಬ್ಬರು ತಿಳಿಸಿದರು.
ಮಹಿಳಾ ರೈತರಿಗೆ ಸಂಕಷ್ಟ
ನೋಂದಣಿ ಪ್ರಕ್ರಿಯೆಗೆ ಸರದಿ ಸಾಲಿನಲ್ಲಿ ವ್ಯವಸ್ಥೆ ಮಾಡದೇ ಹೋಗಿದ್ದರಿಂದ ಮಹಿಳಾ ರೈತರು ನೋಂದಣಿ ಮಾಡಿಸಲು ಪರದಾಡುತ್ತಿದ್ದಾರೆ. ಪುರುಷರೊಂದಿಗೆ ನೋಂದಣಿ ಮಾಡಿಸಲು ನಿಲ್ಲಬೇಕಾಗಿದ್ದು, ವಯಸ್ಸಾದ ಮಹಿಳೆಯರು ಗದ್ದಲದ ಸಂದರ್ಭದಲ್ಲಿ ಬೀಳುವಂತಾಗಿದೆ, ಬೆಳಿಗ್ಗೆಯಿಂದ ಸಂಜೆವರೆಗೂ ಸಹಕಾರ ಸಂಘದ ಕಾರ್ಯಾಲಯದ ಮುಂದೆ ಕುಳಿತು ವಾಪಸ್ ಹೋಗುವಂತಾಗಿದೆ. “ಇಷ್ಟು ಗದ್ಲದಾಗ ನಾವ್ ಹೆಂಗ್ ರೆಜಿಸ್ಟ್ರೇಶನ್ ಮಾಡ್ಸಬೇಕ್ರಿ. ಗಣಮಕ್ಳು ಒಂದೇ ಸಮನೇ ತುಂಬಿ ತುಳಕತಾರ. ಸರದಿ ಸಾಲಾಗ ನಿಂತಗಂಡು ಹೋಗಂಗನ ಮಾಡಿಲ್ಲ. ಶಕ್ತಿ ಇದ್ದೋರು ಮುಂದು ಹೋಗ್ತಾರ. ಮೊನ್ನೇನ ನಾವು ವಾಪಸ್ ಹೋಗೀವಿ. ಇವತ್ತನು ಅದೇ ಪರಿಸ್ಥಿತಿ ಆಗೇತಿ” ಎಂದು ಮಹಿಳಾ ರೈತರೊಬ್ಬರು ಅಳಲು ತೋಡಿಕೊಂಡರು.

ಎಲ್ಲೆಲ್ಲಿ ಜೋಳ ಖರೀದಿ ಕೇಂದ್ರ
ತಾಲೂಕಿನ ರೌಡಕುಂದಾ, ದಿದ್ದಿಗಿ, ಹಂಚಿನಾಳಕ್ಯಾಂಪ್, ಸಾಲಗುಂದಾ, ಬಾದರ್ಲಿ, ಬೂದಿವಾಳ, ಗೋನವಾರ, ಉಮಲೂಟಿ, ಜವಳಗೇರಾ, ವಲ್ಕಂದಿನ್ನಿ, ಸಿಂಧನೂರು (ಪಿಎಸಿಎಸ್), ಅಲಬನೂರು, ಮಲ್ಲಾಪುರ, ಆರ್.ಎಚ್.ಕ್ಯಾಂಪ್, ತುರ್ವಿಹಾಳ, ಹುಡಾ, ಬೆಳಗುರ್ಕಿ, ಮಾಡಸಿರವಾರ, ಉದ್ಬಾಳ(ಯು), ಸಿಂಧನೂರು (ಟಿಎಪಿಸಿಎಂಎಸ್)
ಮೇಲ್ವಿಚಾರಣೆ ಮರೆತ ಅಧಿಕಾರಿಗಳು
ಇತ್ತೀಚಿಗೆ ಜೋಳ ಖರೀದಿ ಕೇಂದ್ರಕ್ಕೆ ಸಂಬಂಧಿಸಿದಂತೆ ಕೆಲ ಪ್ರತಿಪಕ್ಷಗಳು ಸುದ್ದಿಗೋಷ್ಠಿ ನಡೆಸಿ ಕೈಬಿಡುತ್ತಿವೆ ಹೊರತು, ಖರೀದಿ ಕೇಂದ್ರಗಳ ಪರಿಸ್ಥಿತಿ, ಅಲ್ಲಿ ಖರೀದಿ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ? ರೈತರು ಆಗುತ್ತಿರುವ ಕಿರಿಕಿ ಏನು ? ಎಂಬ ಬಗ್ಗೆ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಕನಿಷ್ಠ ಮೇಲ್ವಿಚಾರಣೆ ಮಾಡದೇ ಬೇಜವಾವಾಬ್ದಾರಿ ವಹಿಸುವುದರಿಂದ ಖರೀದಿ ನೋಂದಣಿ ಪ್ರಕ್ರಿಯೆ ಕಾರ್ಯ ವಿಳಂಬವಾಗಿ ರೈತರು ನೋಂದಣಿಯಿಂದ ಹೊರಗುಳಿಯುವಂತಾಗಿದೆ” ಎಂದು ರೈತ ಮುಖಂಡರೊಬ್ಬರು ಆರೋಪಿಸುತ್ತಾರೆ.
