ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 14
ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನದಿ, ಹೊಳೆ, ಹಳ್ಳ ಹಾಗೂ ಕೆರೆಗಳಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನರು ಮುಕ್ಕುಂದಾ, ದಡೇಸುಗೂರು ಬಳಿಯಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುಕ್ಷೇತ್ರ ಅಂಬಾಮಠದ ಅಂಬಾದೇವಿ ದರ್ಶನ ಪಡೆಯಲು ಮಧ್ಯಾಹ್ನದಿಂದಲೇ ಭಕ್ತರು ಪ್ರಯಾಣ ಬೆಳಸಿದ್ದು ಬುಧವಾರ ಕಂಡುಬಂತು.
ಹಬ್ಬದ ವಿಶೇಷ
ಸೂರ್ಯ ದಕ್ಷಿಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸುಸಂದರ್ಭವನ್ನು ಭಕ್ತಿಪೂರ್ವಕ ಆಚರಿಸುತ್ತ ಬರಲಾಗುತ್ತಿದೆ. ಅಂದು ನದಿ, ಹೊಳೆಗಳಲ್ಲಿ ಪುಣ್ಯಸ್ನಾನ ಮಾಡಿ ಸಾಂಪ್ರದಾಯಿಕ ಖಾದ್ಯಗಳಾದ ಎಳ್ಳು-ಬೆಲ್ಲ, ಹೋಳಿಗೆ, ಹುಗ್ಗಿ, ರೊಟ್ಟಿ ಸೇರಿದಂತೆ ತರಹೇವಾರಿ ಪಲ್ಯಗಳನ್ನು ಮನೆಮಂದಿ ಹಾಗೂ ನೆರೆಹೊರೆಯವರೆಲ್ಲಾ ಸೇರಿ ಸಾಮೂಹಿಕ ಭೋಜನದೊಂದಿಗೆ ಸವಿಯಲಾಗುತ್ತದೆ.
ನದಿ ತಟದ ಗ್ರಾಮಗಳು
ಪ್ರತಿವರ್ಷವೂ ಸಂಕ್ರಾಂತಿಯ ಹಬ್ಬದಂದು ತುಂಗಭದ್ರಾ ನದಿತಟದ ಮುಕ್ಕುಂದಾ, ದಡೇಸುಗೂರು, ಸಿಂಗಾಪುರ, ಒಳಬಳ್ಳಾರಿ, ಆಯನೂರು, ಉಪ್ಪಳ, ಕೆಂಗಲ್ ಭಾಗದ ಗ್ರಾಮಗಳ ಪ್ರದೇಶದಲ್ಲಿ ಪುಣ್ಯಸ್ನಾನ ಮಾಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸುವುದು ಸಾಮಾನ್ಯವಾಗಿದೆ.
ಮುಕ್ಕುಂದಾ ಗ್ರಾಮದಲ್ಲಿ ಜನ ದಟ್ಟಣೆ
ತಾಲೂಕಿನ ಮುಕ್ಕುಂದಾ ಗ್ರಾಮವು ಪ್ರವಾಸಿ ತಾಣದಂತಿದ್ದು, ಈ ಭಾಗದಲ್ಲಿ ತುಂಗಭದ್ರಾ ನದಿಯು ಪಂಗಲೊಡೆದು ವಿಸ್ತಾರವಾಗಿ ಹರಿಯುವುದರಿಂದ ಪುಣ್ಯಸ್ನಾನಕ್ಕೆ ಅನುಕೂಲವಿದೆಯೆಂದು ಪ್ರತಿವರ್ಷ ಹೆಚ್ಚು ಜನರು ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ಪ್ರತಿ ವರ್ಷ ಸಕ್ರಾಂತಿಯಂದು ವಿಪರೀತ ಜನದಟ್ಟಣೆ ಇರುತ್ತದೆ. ಜನದಟ್ಟಣೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
