ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9
ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ವಾರ್ಡ್ ನಂ.10ರ ನಿವಾಸಿಗಳಿಗೆ ಪಟ್ಟಾ ನೀಡಬೇಕು ಹಾಗೂ ವಾರ್ಡ್ ನಂ.11ರಲ್ಲಿ ಚರಂಡಿ ವ್ಯವಸ್ಥೆ ಹಾಗೂ ಮುಖ್ಯರಸ್ತೆ ನಿರ್ಮಾಣದ ಪ್ರಮುಖ ಬೇಡಿಕೆ ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗಾಗಿ ಸಿಪಿಐ(ಎಂ)ದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರು ಮಾತನಾಡಿ, ಪಟ್ಟಣದ ವಾರ್ಡ್ ನಂ.10 ಮತ್ತು 11ರ ನಿವಾಸಿಗಳು ಕಳೆದ ಹಲವು ದಿನಗಳಿಂದ ವಿವಿಧ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮತ್ತು ಪಟ್ಟಣ ಪಂಚಾಯಿತಿಗೆ ಮನವಿ ಮಾಡುತ್ತಾ ಬಂದರೂ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದು, ಈ ಕೂಡಲೇ ಇಲ್ಲಿನ ಜನರ ಅಹವಾಲುಗಳನ್ನು ಆಲಿಸಿ ಪರಿಹರಿಸಬೇಕು” ಎಂದು ಆಗ್ರಹಿಸಿದರು.
ಕಳೆದ 20 ವರ್ಷದಿಂದ ವಾಸಿಸುತ್ತಿರುವ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಬೇಕು, ಅನರ್ಹರಿಗೆ ನಿವೇಶನ ಹಂಚದೇ ಪಾರದರ್ಶಕತೆಯನ್ನು ಕಾಪಾಡಬೇಕು, ಪಕ್ಷದ ವತಿಯಿಂದ ಅರ್ಹತೆ ಇರುವ 120 ಫಲಾನುಭವಿಗಳ ಹೆಸರಿನ ಪಟ್ಟಿ ತಯಾರಿಸಿದ್ದು, ಪರಿಗಣನೆಗೆ ತೆಗೆದುಕೊಂಡು ಅವರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾ ನಿರತರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೊನ್ನೂರಪ್ಪ, ಎಂ. ಗೋಪಾಲ ಕೃಷ್ಣ, ವಿರೇಶ ನಾಯಕ್, ಭಂಡಾರಪ್ಪ, ಹನುಮಂತ, ಇಬ್ರಾಹಿಂ ಸಾಬ್, ಕುಂಬಾರ ಮರಿಯಪ್ಪ
ಜನವಾದಿ ಮಹಿಳಾ ಸಂಘಟನೆಯ ಗಿರಿಜಾ ಕಿಲ್ಲೆದ್, ಜೊಂಚರು ವೀರೇಶ, ಕೆಪಿಆರ್‌ಎಸ್‌ನ ನಾಗರತ್ನ ನಾಯಕಿ, ಮೌಲಾಸಾಬ್, ಯಂಕಪ್ಪ ಕೆಂಗಲ್ ಸೇರಿದಂತೆ ವಾರ್ಡ್ ನಿವಾಸಿಗಳು ಇದ್ದರು.
