ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9
“ಶಾಸಕ ಹಂಪನಗೌಡ ಬಾದರ್ಲಿ ಅವರ ಬಗ್ಗೆ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ನಾಲಿಗೆ ಹರಿಬಿಟ್ಟು ಹಗುರವಾಗಿ ಮಾತನಾಡುತ್ತಿದ್ದು, ಇದೇ ರೀತಿ ಮುಂದುವರಿದರೆ ತಾವು ಸಹಿಸುವುದಿಲ್ಲ” ಎಂದು ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಬಸನಗೌಡ ಬಾದರ್ಲಿ, ಬಾದರ್ಲಿ ಕುಟುಂಬಕ್ಕೆ ಸೇರಿದವರಲ್ಲ. ನಮ್ಮ ಕುಟುಂಬದ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಉಪ್ಪು ತಿಂದ ಮನೆಗೆ ದ್ರೋಹ ಬಗೆದಿದ್ದಾರೆ. ಬಸನಗೌಡ ಬಾದರ್ಲಿ ಅವರು ಬಳ್ಳಾರಿಯಲ್ಲಿ 2000ನೇ ಇಸ್ವಿ ಆಸುಪಾಸು ಓದುವಾಗಲಿಂದಲೇ ವೈಯಕ್ತಿಕವಾಗಿ ನಾನು ಮತ್ತು ನಮ್ಮ ಕುಟುಂಬದಿಂದ ಸಹಾಯ ನೀಡಿದ್ದೇವೆ. ಆದರೆ ಇವರು ಇತ್ತೀಚಿನ ದಿನಗಳಲ್ಲಿ ಹಂಪನಗೌಡರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದನ್ನು ಕೈಬಿಡಬೇಕು” ಎಂದು ಬಾಬುಗೌಡ ಬಾದರ್ಲಿ ಟೀಕಾ ಪ್ರಹಾರ ನಡೆಸಿದರು.
‘ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದೇ ಹಂಪಗೌಡರು’
“ಶಾಸಕರಾದ ಹಂಪನಗೌಡ ಬಾದರ್ಲಿ ಅವರೇ, ಬಸನಗೌಡ ಬಾದರ್ಲಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದವರು. ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಈ ಹಿಂದೆ ವಿವಿಧ ಭಾಗದ ಶಾಸಕರನ್ನು ಮನವೊಲಿಸಿದ್ದಾರೆ. ಅದಕ್ಕಾಗಿ ನಿರಂತರ ಕೆಲಸ ಮಾಡಿದ್ದಾರೆ. ಅದನ್ನೆಲ್ಲಾ ಮರೆತು ಎಮ್ಮೆಲ್ಸಿ ಅವರು ಮನಸೋಇಚ್ಚೆ ಮಾತನಾಡುವುದು ಸರಿಯೇ ?” ಎಂದು ಬಾಬುಗೌಡ ಬಾದರ್ಲಿ ವಾಗ್ದಾಳಿ ನಡೆಸಿದರು.
ಪಕ್ಷದ ವಿರುದ್ಧ ಬಂಡಾಯವೆದ್ದವರು ಯಾರು ?
“ಕಾಂಗ್ರೆಸ್ ಪಕ್ಷದ ಚಿಹ್ನೆಯಿಲ್ಲದಿದ್ದರೆ ಠೇವಣಿ ಕಳೆದುಕೊಳ್ಳುತ್ತೀರಿ ಎಂದು ಹಂಪನಗೌಡರ ಬಗ್ಗೆ ಹಗುರವಾಗಿ ಮಾತನಾಡುವ ಬಸನಗೌಡ ಬಾದರ್ಲಿ ಅವರು, ಈ ಹಿಂದೆ 2023ರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾದವರು ಯಾರು ? ಅವರೊಂದಿಗೆ ಇರುವ ಕೆಲವರು ಈ ಹಿಂದೆ ಕಾಂಗ್ರೆಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಟೀಕೆ ಮಾಡಿಲ್ಲವೇ ? ಸಿಎಂ, ಡಿಸಿಎಂ ಅವರ ಹೆಸರು ಹೇಳುತ್ತ ಕಾಂಗ್ರೆಸ್ಗೆ ದ್ರೋಹ ಮಾಡುತ್ತಿರುವುದು ಎಮ್ಮೆಲ್ಸಿ ಅವರು ನಾವಲ್ಲ” ಎಂದು ಬಾಬುಗೌಡ ಬಾದರ್ಲಿ, ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರನ್ನು ಕಟು ಮಾತುಗಳಲ್ಲಿ ಟೀಕಿಸಿದರು.
ಸುಳ್ಳು ಆರೋಪ
“ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು, ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಎಸ್ಸಿ, ಎಸ್ಟಿ ಜನರಿಗೆ ಕೊಳವೆಬಾವಿ ಸೌಲಭ್ಯ ಕೊಡಿಸದೇ ಅನ್ಯಾಯ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಸ್ಸಿ, ಎಸ್ಟಿ ಜನರಿಗೆ ಬಂದ ಸೌಲಭ್ಯವನ್ನು ಅದೇ ಸಮುದಾಯದವರಿಗೆ ನೀಡಲಾಗಿದೆ. ಯಾರು ಪಕ್ಷಕ್ಕೆ ದುಡಿದಿದ್ದಾರೆ, ಅರ್ಹ ಫಲಾನುಭವಿಗಳಿದ್ದಾರೆ ಅಂತವರಿಗೆ ಸೌಲಭ್ಯ ಕಲ್ಪಿಸಲಾಗಿದೆಯೇ ಹೊರತು, ಬೇರೆ ಸಮುದಾಯದವರಿಗೆ ಈ ಯೋಜನೆಯನ್ನು ನೀಡಿಲ್ಲ. ಈ ಕುರಿತು ಹುರುಳಿಲ್ಲದ ಆರೋಪ ಮಾಡುತ್ತಿರುವ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರಿಗೆ ಸಾಮಾನ್ಯ ಜ್ಞಾನವಾದರೂ ಬೇಡವೇ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಷ್ಟಾಚಾರ ಉಲ್ಲಂಘಿಸಿಲ್ಲ
“ಇತ್ತೀಚಿಗೆ ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ಬಂದಿರುವ 14 ಬಸ್ಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಲಾಗಿದೆ. ಬಹಳ ಸಮಯವಾಗಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಕಾರ್ಯಕ್ರಮ ಬೇಗ ಮುಗಿಸಲಾಗಿದೆ. ಆದರೆ ಇದನ್ನು ನೆಪವಾಗಿಟ್ಟುಕೊಂಡು ಇಲ್ಲ ಸಲ್ಲದ ಮಾತನಾಡುವುದು ತಕ್ಕುದಲ್ಲ. ಶಿಷ್ಟಾಚಾರ ಪಾಲಿಸಿಲ್ಲ ಎಂದು ವೃಥಾ ಆರೋಪ ಮಾಡುವ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು, ಎಮ್ಮೆಲ್ಸಿ ಅನುದಾನದ ಕಾರ್ಯಕ್ರಮಗಳಿಗೆ ಶಾಸಕರನ್ನು ಕರೆದು ಶಿಷ್ಟಾಚಾರ ಪಾಲಿಸಿದ್ದಾರೆಯೇ. ಶಾಸಕರು ಯಾವುದೇ ಅಧಿಕಾರಿಗಳ ಮೇಲೆ ದರ್ಪ ತೋರಿಲ್ಲ. ಆದರೆ ಎಮ್ಮೆಲ್ಸಿ ಅವರು ತಾವು ಕರೆಯುವ ಸಭೆಗಳಲ್ಲಿ ಅಧಿಕಾರಿಗಳೊಂದಿಗೆ ಯಾವ ರೀತಿ ವರ್ತಿಸುತ್ತಾರೆ, ದರ್ಪ ತೋರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ” ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸ್ಪರ್ಧಿಸಲು ಬಹಿರಂಗ ಸವಾಲ್
“ನಾನು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ನಿಲ್ಲುತ್ತೇನೆ, ಬಸನಗೌಡ ಬಾದರ್ಲಿ ಅವರು ನಿಲ್ಲಲ್ಲಿ. ಯಾರು ಗೆಲ್ಲುತ್ತಾರೆ ನೋಡೋಣ. ಎಮ್ಮೆಲ್ಸಿ ಸೋತರೆ ಅವರು ರಾಜೀನಾಮೆ ನೀಡಬೇಕು, ನಾನು ಸೋತರೆ ಸುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಬಾಬುಗೌಡ ಬಾದರ್ಲಿ ಅವರು ಖಾರವಾಗಿ ಬಹಿರಂಗವಾಗಿ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಲಿಂಗಪ್ಪ, ಎನ್.ಅಮರೇಶ, ವೈ.ನರೇಂದ್ರನಾಥ, ಖಾಜಿಮಲಿಕ್, ಎಂ.ಅನಿಲ್ಕುಮಾರ್, ಪ್ರಭುರಾಜ ಕರ್ಪೂರಮಠ, ವೀರೇಶ ಹಟ್ಟಿ ಸೇರಿದಂತೆ ಇನ್ನಿತರರಿದ್ದರು.
