ಬೆಳಗಾವಿ (ಸುವರ್ಣಸೌಧ) ಡಿಸೆಂಬರ್ 18
ನಮ್ಮ ಸಿಂಧನೂರು,
ರಾಜ್ಯದ ಎಲ್ಲಾ ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್ಗಳು, ಕ್ಲೀನರ್ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ವಿಮುಕ್ತಿಗೊಳಿಸಿ, ಖಾಯಂಗೊಳಿಸಬೇಕು ಹಾಗೂ ಈ ಕಾರ್ಮಿಕರಿಗೆ ಮಾಸಿಕ ವೇತನ ರೂ.42,000 ರೂ. ನಿಗದಿಗೊಳಿಸಬೇಕು ಸೇರಿ ಇನ್ನಿತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಎಐಸಿಸಿಟಿಯುನಿಂದ ಬೆಳಗಾವಿ ಸುವರ್ಣಸೌಧದ ಮುಂದೆ ದಿನಾಂಕ: 17-12-2025ರಂದು ಧರಣಿ ನಡೆಸಿದ ಹಿನ್ನೆಲೆಯಲ್ಲಿ, ಸರ್ಕಾರದ ಪರವಾಗಿ ಧರಣಿ ಸ್ಥಳಕ್ಕೆ ಆಗಮಿಸಿದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರು ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.
ನಂತರ ಮಾತನಾಡಿದ ಸಚಿವರು, ಹೊರಗುತ್ತಿಗೆ ಪದ್ಧತಿಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೀದರ್ ಮಾದರಿಯಲ್ಲಿ ಸಹಕಾರ ಸಂಘಗಳ ಅಡಿಯಲ್ಲಿ ಕೆಲಸ ನಿರ್ವಹಿಸಲು ಸರ್ಕಾರ ಚಿಂತನೆ ನಡೆಸಿತ್ತು, ಆದರೆ ಈ ಕುರಿತು ಕಾರ್ಮಿಕ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ವಿಧೇಯಕ ಸದ್ಯಕ್ಕೆ ಕೈಬಿಡಲಾಗಿದೆ” ಎಂದು ಸಚಿವರು ತಿಳಿಸಿದರು. ತಾವು ನೀಡಿದ ಹಕ್ಕೊತ್ತಾಯ ಪತ್ರವನ್ನು ಸಂಬಂಧಿಸಿದ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ” ಎಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಪಿ.ಪಿ.ಅಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್, ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಮುಖಂಡರಾದ ನಿರ್ಮಲಾ, ವಿಜಯ್ ದೊರೆರಾಜು, ರಾಮಣ್ಣ ವಿಟ್ಲ, ಕೇಶವ ನಾಯಕ್, ಅಶೋಕ್ಗೌಡ, ಚಂದ್ರಶೇಖರ್ ಶಿರಗುಪ್ಪಿ, ನಾಗಲಕ್ಷ್ಮಿ, ಅಜೀಜ್ ಜಾಗೀದಾರ್, ಪರಶುರಾಮ, ವೀರೇಶ, ಮಾಯಮ್ಮ ಹಾಗೂ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘ (ಎಐಸಿಸಿಟಿಯು ಸಂಯೋಜಿತ)ದ ನೂರಾರು ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

