Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 07

ಜಿಲ್ಲೆಯಲ್ಲಿ ಹತ್ತಿ, ಸೂರ್ಯಕಾಂತಿ ಹಾಗೂ ಸಜ್ಜೆ ಫಸಲು ಬಂದಿದ್ದು, ಕೂಡಲೇ ಜಿಲ್ಲಾಡಳಿತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಭೇರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು “ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೇಂಗಾ ಉತ್ಪನ್ನ ಖರೀದಿಸಲು ಈಗಾಗಲೇ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹತ್ತಿ, ಸೂರ್ಯಕಾಂತಿ, ಸಜ್ಜೆ ರಾಶಿ ಮಾಡಿ ರೈತರು ಮಾರಾಟಕ್ಕೆ ಮುಂದಾದರೂ ಇಲ್ಲಿಯವರೆಗೂ ಖರೀದಿ ಕೇಂದ್ರಗಳನ್ನು ತೆರೆದಿರುವುದಿಲ್ಲ. ಕೇವಲ ಒಂದೇ ಉತ್ಪನ್ನದ ಖರೀದಿ ಕೇಂದ್ರಗಳನ್ನು ತೆರೆದಿರುವುದು ಅವೈಜ್ಞಾನಿಕವಾಗಿದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು 2025-26ನೇ ಸಾಲಿಗೆ ಸಜ್ಜೆ-ಎಫ್.ಎ.ಕ್ಯೂ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ರೂ.2775, ಹತ್ತಿ -ಎಫ್.ಎ.ಕ್ಯೂ-ಮಧ್ಯಮ ಎಳೆ ರೂ.7710, ಉದ್ದನೆಯ ಎಳೆ ರೂ.8110, ಸೂರ್ಯಕಾಂತಿ-ಎಫ್.ಎ.ಕ್ಯೂ ರೂ.7721ಗೆ ನಿಗದಿಗೊಳಿಸಿದೆ. ಆದರೆ ಎಪಿಎಂಸಿ/ ಖಾಸಗಿ ಮಾರುಕಟ್ಟೆಯಲ್ಲಿ ಸಜ್ಜೆ ರೂ.2000, ಸೂರ್ಯಕಾಂತಿ ರೂ.6000 ರಿಂದ ರೂ.6300 ಹಾಗೂ ಹತ್ತಿ ರೂ.6000ರಿಂದ ರೂ.6200 ವರೆಗೆ ಖರೀದಿ ನಡೆಯುತ್ತಿದೆ. ಇದರಿಂದ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಯ ಸಚಿವರು, ಶಾಸಕರು, ಸಂಸದರು ರೈತರನ್ನು ಮರೆತಿದ್ದಾರೆ”
“ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರು ಅಲ್ಪಸ್ವಲ್ಪ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಹೋದರೆ, ಅತಿ ಕಡಿಮೆ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ. ಬೆಳೆ ಬರುವ ಮುನ್ನವೇ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಎಲ್ಲಾ ಕ್ಷೇತ್ರಗಳ ಶಾಸಕರು ದಿವ್ಯ ಮೌನ ವಹಿಸಿದ್ದಾರೆ. ಆ ಮೂಲಕ ಅನ್ನದಾತ ರೈತರನ್ನು ಮರೆತಿದ್ದಾರೆ. ಇದು ರೈತರ ಮೇಲೆ ದುಷ್ಪರಿಣಾಮ ಉಂಟುಮಾಡಲಿದೆ. ಈ ಕೂಡಲೇ ಶಾಸಕರು, ಸಂಸದರು ಹಾಗೂ ಸಚಿವರು ಸಜ್ಜೆ, ಸೂರ್ಯಕಾಂತಿ ಹಾಗೂ ಹತ್ತಿ ಫಸಲಿನ ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಒತ್ತಡ ಹೇರಬೇಕು” ಎಂದು ರಮೇಶ ಪಾಟೀಲ್ ಭೇರಿಗಿ ಅವರು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *