ನಮ್ಮ ಸಿಂಧನೂರು, ಮಾರ್ಚ್ 12
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೆರೆ ಗ್ರಾಮದವರಾದ ಹಾಗೂ ಸದ್ಯ ಬಾಗಲಕೋಟ ಜಿಲ್ಲೆಯ ಇಳಕಲ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಕವಿ ಆರಿಫ್ ರಾಜಾ ಅವರು ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ನ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವುದಕ್ಕೆ ಸಿಂಧನೂರಿನ ಪಿ.ಲಂಕೇಶ್ ಸಾಹಿತ್ಯ ವೇದಿಕೆ ಹರ್ಷ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ವೇದಿಕೆಯ ಸಂಚಾಲಕರಾದ ಇಮಾಮ್ ಹುಸೇನ್ ಎತ್ಮಾರಿ, ಬಸವರಾಜ ಹಸಮಕಲ್ ಅವರು, ಜಂಗಮ ಫಕೀರನ ಜೋಳಿಗೆ, ಸೈತಾನನ ಪ್ರವಾದಿ, ಬೆಂಕಿಗೆ ತೊಡಿಸಿದ ಬಟ್ಟೆ, ಎದೆಹಾಲಿನ ಪಾಳಿ, ನಕ್ಷತ್ರ ಮೋಹ ಕವನ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಆರಿಫ್ ರಾಜಾ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಆರಿಫ್ ರಾಜಾ ಅವರ ಕವಿತೆಗಳು ಸ್ಪಾನಿಷ್, ಪರ್ಷಿಯನ್, ಗ್ರೀಕ್, ಅಲ್ಬೇನಿಯನ್, ಇಂಗ್ಲೀಷ್, ಟರ್ಕಿ ಭಾಷೆಗಳಿಗೆ ಅನುವಾದಗೊಂಡಿದ್ದು, ಅಷ್ಟೇ ಅಲ್ಲದೇ ವಿಜಯಪುರದ ಅಕ್ಕಮಹಾದೇವಿ, ಶಿವಮೊಗ್ಗ, ಮಂಗಳೂರು, ದಾವಣಗೆರೆ ಸೇರಿ ಪಿಯು ಮಂಡಳಿಯ ಪ್ರಥಮ ಪಿಯುಗೆ ಪಠ್ಯವಾಗಿರುವುದು ಅವರಲ್ಲಿನ ಪ್ರತಿಭೆಗೆ ಸಾಕ್ಷಿ ಎಂದು ಹೇಳಿದ್ದಾರೆ.