ನಮ್ಮ ಸಿಂಧನೂರು, ಮಾರ್ಚ್ 28
ಸಿಂಧನೂರು ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಮಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೇರಿಗಿ ಗ್ರಾಮದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕುಡಿವ ನೀರಿಗಾಗಿ ಜನ-ಜಾನುವಾರುಗಳು ಪರದಾಡುತ್ತಿದ್ದು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತರ್ಜಲ ಕುಸಿದ ಪರಿಣಾಮ ಗ್ರಾಮದ ಕೆರೆಯಲ್ಲಿನ ಬೋರ್‌ವೆಲ್‌ನಲ್ಲಿ ನೀರು ಬರುತ್ತಿಲ್ಲ, ಕಳೆದ ತಿಂಗಳು ಇದೇ ಕೆರೆಯಲ್ಲಿ ಮತ್ತೊಂದು ಬೋರ್‌ವೆಲ್ ಕೊರೆಯಿಸಿದ್ದು, ಗ್ರಾಮದಲ್ಲಿರುವ 800ಕ್ಕೂ ಹೆಚ್ಚು ಮನೆಗಳಿಗೆ ಈ ನೀರು ಸಾಲುತ್ತಿಲ್ಲ. ಈ ಗ್ರಾಮದಲ್ಲಿ 500ಕ್ಕೂ ಹೆಚ್ಚು ನಲ್ಲಿಗಳಿದ್ದು, ಕೇವಲ 30 ನಲ್ಲಿಗಳಿಗೆ ನೀರು ಸರಬರಾಜು ಆಗುತ್ತಿದೆ. ಅಲ್ಲದೇ ಬೋರ್‌ವೆಲ್‌ನಿಂದ ಟ್ಯಾಂಕ್‌ಗೆ ನೀರು ಏರುತ್ತಿಲ್ಲ, ಹಾಗಾಗಿ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಸಮೀಪದ ಹಿರೇಬೇರಿಗಿ, ಕಲ್ಮಂಗಿ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ಹೋಗಿ ನೀರು ತರುವಂತಾಗಿದೆ. ಕುಡಿಯಲು ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಹಾಗೂ ಟಂಟಂನಲ್ಲಿ ನೀರು ತರುತ್ತಿದ್ದೇವೆ, ಆದರೆ ಜಾನುವಾರುಗಳು ಹಾಗೂ ಕುರಿ, ಮೇಕೆಗಳಿಗೆ ನೀರಿನ ದಾಹ ತಣಿಸಲು ಪಡಿಪಾಟಲು ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ತಾಲೂಕು ಆಡಳಿತ ನಿರ್ಲಕ್ಷ್ಯ ಆರೋಪ
ಗ್ರಾಮದ ನೀರಿನ ಸಮಸ್ಯೆಯ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಗ್ರಾಮದ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.