ನಮ್ಮ ಸಿಂಧನೂರು, ಸೆಪ್ಟೆಂಬರ್ 30
ಒಳಮೀಸಲಾತಿ ಅನುಷ್ಠಾನಗೊಳಿಸಿ ಅಂಗೀಕರಿಸುವAತೆ ರಾಜ್ಯ ಸರ್ಕಾರಕ್ಕೆ ಪರಮಾಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ನೀಡಿ ಎರಡು ತಿಂಗಳು ಗತಿಸಿದರೂ ಸರ್ಕಾರಗಳ ವಿಳಂಭ ಧೋರಣೆಯನ್ನು ಖಂಡಿಸಿ 3-10-2024 ಗುರುವಾರದಂದು, ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ರಾಯಚೂರು ಜಿಲ್ಲಾ ಬಂದ್ಗೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಐಕ್ಯ ಹೋರಾಟ ಸಮಿತಿಯಿಂದ ತಾಲೂಕು ಕೇಂದ್ರ, ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸಭೆಗಳು ನಡೆದಿದ್ದು, ಹೋರಾಟ ಚುರುಕು ಪಡೆದಿದೆ. ಸಮಿತಿಯ ಮುಖಂಡರು, ಮುಂಚೂಣಿ ನಾಯಕರು ನೇತೃತ್ವದಲ್ಲಿ ಪರಸ್ಪರ ಚರ್ಚೆ ಸೇರಿದಂತೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಘಟನೆ ತಯಾರಿ ನಡೆದಿದೆ.
ಮಸ್ಕಿಯಲ್ಲಿ ಬೃಹತ್ ರ್ಯಾಲಿ
ಮಸ್ಕಿ ಪಟ್ಟಣದಲ್ಲಿ ಸೆಪ್ಟೆಂಬರ್ 20ರಂದು ಒಳ ಮೀಸಲಾತಿಗಾಗಿ ಐಕ್ಯ ಹೋರಾಟ ಸಮಿತಿಯಿಂದ, ಅಂಬೇಡ್ಕರ್ ಉದ್ಯಾನದಿಂದ ಬ್ರಮರಾಂಭ ಕಲ್ಯಾಣಮಂಟಪದವರೆಗೂ ಬೃಹತ್ ರ್ಯಾಲಿ ನಡೆಸಿ, ಬಹಿರಂಗ ಸಭೆಯಲ್ಲಿ ಸುಪ್ರೀಂಕೋರ್ಟ್ನ ತೀರ್ಪಿನಂತೆ ಒಳಮೀಸಲಾತಿ ಅನುಷ್ಠಾನಗೊಳಿಸಿ ಅಂಗೀಕರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಲಾಗಿದೆ. ಈ ರ್ಯಾಲಿಯಲ್ಲಿ ಜಿಲ್ಲೆಯ ಅಪಾರಸಂಖ್ಯೆಯ ಜನಸ್ತೋಮ ಭಾಗವಹಿಸಿದ್ದನ್ನು ಸ್ಮರಿಸಬಹುದು.
ತಾಲೂಕುವಾರು ಪೂರ್ವಭಾವಿ ಸಭೆ
ಐಕ್ಯ ಹೋರಾಟ ಸಮಿತಿಯ ಮುಂಚೂಣಿ ನಾಯಕರ ನೇತೃತ್ವದಲ್ಲಿ ಈಗಾಗಲೇ ೨೭ರಂದು ಸಿಂಧನೂರಿನಲ್ಲಿ ಪೂರ್ವಭಾವಿ ಸಭೆ ಜರುಗಿದ್ದು, ಅದರಂತೆ ಸಿರವಾರ, ಮಾನ್ವಿ, ಲಿಂಗಸುಗೂರು, ದೇವದುರ್ಗ, ರಾಯಚೂರು ಸೇರಿ ಹಲವು ಪಟ್ಟಣಗಳಲ್ಲಿ ಪೂರ್ವಭಾವಿ ಸಭೆಗಳು ನಡೆದಿವೆ. ಅಕ್ಟೋಬರ್ ೩ರಂದು ರಾಯಚೂರು ಜಿಲ್ಲಾ ಬಂದ್ ಯಶಸ್ವಿಗೊಳಿಸುವ ಮೂಲಕ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಂದಾಗಲಾಗುತ್ತಿದೆ ಎಂದು ತಿಳಿದುಬಂದಿದೆ.