ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 13
ದೇಶದಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರಿ ಶಕ್ತಿಗಳು ಸಾಂಸ್ಕೃತಿಕ ದಾಳಿಯ ಮೂಲಕ ದುಡಿಯುವ ಜನರ ಸಾಹಿತ್ಯವನ್ನು ನುಂಗಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಸಿವೆ. ಈ ಹುನ್ನಾರವನ್ನು ಸದೆಬಡಿಯುವ ಮೂಲಕ ದುಡಿಯುವ ಜನರ ಸಾಹಿತ್ಯವನ್ನು ಎತ್ತಿಹಿಡಿಯಬೇಕು ಎಂದು ಸಿಪಿಐ(ಎಂಎಲ್) ಪಾಲಿಟ್ ಬ್ಯುರೋ ಸದಸ್ಯ ಹಾಗೂ ಹಿರಿಯ ಚಿಂತಕ ಆರ್.ಮಾನಸಯ್ಯ ಕರೆ ನೀಡಿದರು.
ನಗರದ ಟೌನ್‌ಹಾಲ್‌ನಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಬೀದಿಸಾಲು ಪ್ರಕಾಶನ ಮಸ್ಕಿ ಹೊರ ತಂದಿರುವ ಯುವ ಕವಿ ಪ್ರಶಾಂತ್ ದಾನಪ್ಪ ಅವರ ‘ಅಂಬೇಡ್ಕರ್ ಯಾರು ಅಂಬೇಡ್ಕರ್ ?’ ಕೃತಿ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಆರ್‌ಎಸ್‌ಎಸ್‌ನಿಂದ ಸುಳ್ಳು ಪ್ರಚಾರ
“ಆರ್‌ಎಸ್‌ಎಸ್ ಬಾಬಾ ಸಾಹೇಬ್ ಅವರನ್ನು ವಾರಸುದಾರರು ಎಂದು ತನ್ನ ಎಲೆಕ್ಟ್ರಾನಿಕ್ ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಕೇಷನ್‌ಗಳಲ್ಲಿ ವ್ಯಾಪಕ ಪ್ರಚಾರ ಮಾಡುತ್ತಿದೆ. ಅಂಬೇಡ್ಕರ್ ಅವರನ್ನು ಸಾವರ್ಕರ್‌ಗೆ ಹೋಲಿಕೆ ಮಾಡುತ್ತಿದೆ. ಇದು ಆಘಾತ ಮತ್ತು ಅತ್ಯಂತ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ಹನ್ನೆರಡನೇ ಶತಮಾನದಲ್ಲಿನ ಕಾಯಕ ಚಳವಳಿ, ವಚನ ಅಥವಾ ಶರಣ ಚಳವಳಿ ಜಗತ್ತು ಕಂಡಂತಹ ದುಡಿಯುವ ಜನರ ಪ್ರಜಾಪ್ರಭುತ್ವವಾದಿ, ಸಮಾಜವಾದಿ ಚಳವಳಿಯಾಗಿದೆ. ವಚನಕಾರರು ರಚಿಸಿದ ವಚನ ಸಾಹಿತ್ಯ ಆಗಮ, ವೇದ, ಉಪನಿಷತ್ ಹಾಗೂ ಪುರಾಣದ ವಿರುದ್ಧ ಸಡ್ಡು ಹೊಡೆದು ರಚಿತಗೊಂಡಿದೆ. ಈ ಸಾಹಿತ್ಯವನ್ನು ಬಲಪಂಥೀಯ ಶಕ್ತಿಗಳು ತಿರುಚುವ ದುರುದ್ದೇಶದಿಂದ, ಉಪನಿಷತ್ ಅಂಶಗಳಿಂದ ವಚನಗಳನ್ನು ರಚಿಸಲಾಗಿದೆ ಎಂದು ಕ್ಲೇಮು ಮಾಡುತ್ತಿರುವುದಲ್ಲದೇ ವ್ಯಾಪಕ ಪ್ರಚಾರದಲ್ಲಿ ತೊಡಗಿವೆ. ವಚನ ದರ್ಶನ ಸೇರಿದಂತೆ ಇನ್ನಿತರೆ ಕಾರ್ಯಕ್ರಮ, ತಿರುಚಿದ ಪುಸ್ತಕಗಳನ್ನು ಮುದ್ರಿಸಿ ಹಂಚಿಕೆ ಮಾಡುವ ಮೂಲಕ ದುಡಿಯುವ ಜನರು ರಚಿಸಿದ ಸಾಹಿತ್ಯವನ್ನು ಆಪೋಶನ ತೆಗೆದುಕೊಳ್ಳಲು ಹೊರಟಿವೆ. ಇದಕ್ಕಾಗಿ ಅವರು ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಕೆಲ ಬಲಪಂಥೀಯ ಪಬ್ಲಿಕೇಷನ್‌ಗಳು ತಿರುಚಿದ ಪುಸ್ತಕಗಳನ್ನು ಪ್ರಿಂಟ್ ಮಾಡಿ ಅದರ ಸಾವಿರಾರು ಪ್ರತಿಗಳನ್ನು ಹಂಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಫ್ಯಾಸಿಸ್ಟ್ ಪ್ರಭುತ್ವ ಕವಿ, ಬರಹಗಾರರ ಅಧಿಕಾರ ಕಸಿದುಕೊಂಡಿದೆ’
“ಇದು ದುರಿತಕಾಲ. ದುರುಳರ, ದುಷ್ಟರ ಆಳ್ವಿಕೆ, ಫ್ಯಾಸಿಸ್ಟ್ ಸರ್ವಾಧಿಕಾರ ದೇಶದ ಕವಿ, ಬರಹಗಾರರ ಅಧಿಕಾರವನ್ನು ಕಸಿದುಕೊಂಡಿದೆ. ಜನಪರವಾಗಿ, ನೊಂದವರ ಪರವಾಗಿ ಧ್ವನಿ ಎತ್ತುವುದೇ ಅಪರಾಧ ಎನ್ನುವಂತಾಗಿದೆ. ಸಂವಿಧಾನ ತಿದ್ದುಪಡಿ ಮಾಡುತ್ತೇವೆ, ಸಂವಿಧಾನ ನಮಗೆ ಹೊಂದಾಣಿಕೆ ಆಗುತ್ತಿಲ್ಲ. ಸೆಕ್ಯುಲರಿಸಂ ತೆಗೆಯಲೇಬೇಕು. ಡೆಮಾಕ್ರಸಿ ಎನ್ನುವುದು ಇರಲೇಬಾರದು, ಸಮಾಜವಾದ ಎನ್ನುವುದನ್ನು ಅಂಬೇಡ್ಕರ್ ಅವರು ಕಾಪಿ ಮಾಡಿದ್ದಾರೆ. ಇದು ಹಿಂದೂರಾಷ್ಟ್ರ” ಎಂದು ಫ್ಯಾಸಿಸ್ಟ್ ಶಕ್ತಿಗಳು ಠೇಂಕರಿಸುತ್ತಿವೆ. ಇದಕ್ಕೆ ಪ್ರತಿರೋಧ ಒಡ್ಡಲು ದುಡಿಯುವ ಜನರ ಪರವಾಗಿ ಗಟ್ಟಿ ಧ್ವನಿ ಎತ್ತಲೇಬೇಕಿದೆ” ಎಂದು ಮಾನಸಯ್ಯ ಹೇಳಿದರು.
“ಅಂಬೇಡ್ಕರ ಯಾರು ಅಂಬೇಡ್ಕರ್ ಹಾಡಿನ ಫ್ಯಾನು”
“ಪ್ರತಿಭೆಗೆ ಯಾವ ವಯಸ್ಸಿನ, ಜಾತಿಯ, ಧರ್ಮದ ಹಂಗೂ ಇಲ್ಲ. ಚನ್ನಣ್ಣ ವಾಲೀಕಾರ ಅವರ ‘ನೀ ಹೋದ ಮರುದಿನ ಮೊದಲಂಗೆ ನಮ್ ಬದುಕು ಹಾಗ್ಯಾದದೋ ಬಾಬಾ ಸಾಹೇಬ, ನಿನ್ನಂಗ ದುಡಿದವರು ಕಳಕಳಿಯ ಪಡುವವರು ಇನ್ನುತನ ಬರಲಿಲ್ಲ ಒಬ್ಬ’, ಸಿದ್ದಲಿಂಗಯ್ಯ ಅವರ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ ಆಲವೇ, ಕೋಟಿ ಕೋಟಿ ಕಪ್ಪು ಜನರ ಮೊಟ್ಟ ಮೊದಲ ಮಾತೆ”, ಸಿ.ದಾನಪ್ಪ ನಿಲೋಗಲ್ ಅವರ “ಅಂಬೇಡ್ಕರ್ ಹೇಳಿದ ಮಾತು, ಮರೆಯಬೇಡಿ” ದುಡಿಯುವ ಜನರನ್ನು ಚಿಂತನೆಗೆ ಹಚ್ಚುವ ಇಂತಹ ಜಾಗೃತಿ ಹಾಡುಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಿವೆ. ಈ ಮೂರು ಹಾಡುಗಳ ನಂತರ ಕವಿ ಪ್ರಶಾಂತ್ ದಾನಪ್ಪ ಅವರ ‘ಅಂಬೇಡ್ಕರ್ ಯಾರು ಅಂಬೇಡ್ಕರ್’ ಅತ್ಯಧ್ಬುತವಾಗಿ ಮೂಡಿಬಂದಿದೆ. ಈ ಹಾಡು ನನಗೆ ಅತ್ಯಂತ ಪ್ರಿಯವಾಗಿದ್ದು, ಈ ಹಾಡಿನ ಫ್ಯಾನು ನಾನು” ಎಂದು ಆರ್.ಮಾನಸಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್.ಮಾನಸಯ್ಯ, ಸಿ.ದಾನಪ್ಪಣ್ಣ ಸಮುದಾಯದ ಕಣ್ಣುಗಳು: ನರಸಪ್ಪ ಡಿಂಗ್ರಿ
“ಆರ್.ಮಾನಸಯ್ಯ ಹಾಗೂ ಸಿ.ದಾನಪ್ಪಣ್ಣ ಅವರು ಸಮುದಾಯದ ಎರಡು ಕಣ್ಣುಗಳು ಇದ್ದಹಾಗೆ. ಅವರ ವೈಚಾರಿಕ ಚಿಂತನೆ, ಆಲೋಚನಾ ಕ್ರಮ, ಹೋರಾಟ ಮನೋಭಾವ ಮತ್ತು ದುಡಿಯುವ ಜನರ ಬಗೆಗಿನ ಕಾಳಜಿ, ಸಾಹಿತ್ಯ ರಚನೆ ಅನುಕರಣೀಯ” ಎಂದು ನರಸಪ್ಪ ಡಿಂಗ್ರಿ ರಾಯಚೂರು ಅಭಿಮಾನದ ನುಡಿಗಳನ್ನಾಡುವ ಜೊತೆಗೆ ಸಿ.ದಾನಪ್ಪ ಅವರ ಕ್ರಾಂತಿಕಾರಿ ಹಾಡುಗಳನ್ನು ಹಾಡಿದರು.
ಹೀಗೆ ಹುಟ್ಟಿತು ʼಅಂಬೇಡ್ಕರ ಯಾರು ಅಂಬೇಡ್ಕರ ಹಾಡು” : ಪ್ರಶಾಂತ್ ದಾನಪ್ಪ
“ಖ್ಯಾತ ಕ್ರಿಕೆಟ್ ಆಟಗಾರನೊಬ್ಬ ʼವೂ ಈಸ್ ಅಂಬೇಡ್ಕರ್ ʼ ಎಂದು ಮೊದಲಿಸಿದ್ದ. ಈ ಕುರಿತು ಸೊಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಯೂ ಕೂಡ ಆಯಿತು. ಆ ಹೇಳಿಕೆಯನ್ನು ಪ್ರತಿರೋಧಿಸಿ ನಾನು ಟ್ವಿಟ್ ಕೂಡ ಮಾಡಿದ್ದೆ. ಅಷ್ಟರ ನಂತರವೂ ಈ ಹೇಳಿಕೆ ನನ್ನನ್ನು ಬಹಳಷ್ಟು ದಿನ ಕಾಡಿತು. ದೇಶಕ್ಕೆ ಸಂವಿಧಾನ ಕೊಟ್ಟ ಹಾಗೂ ಜನರನ್ನು ವಿಮೋಚನೆಗೊಳಿಸಿದ ಬಾಬಾ ಸಾಹೇಬರನ್ನು ಮೊದಲಿಸಿದ ಆ ವ್ಯಕ್ತಿಗೆ ಹಾಡಿನ ಮೂಲಕವೇ ಬಾಬಾ ಸಾಹೇಬರು ಯಾರು ಎಂದು ಉತ್ತರ ಕೊಟ್ಟೆನು” ಎಂದು ಕವಿ ಪ್ರಶಾಂತ್ ದಾನಪ್ಪ ʼಅಂಬೇಡ್ಕರ್ ಯಾರು ಅಂಬೇಡ್ಕರ್ʼ ಹಾಡು ಹುಟ್ಟಿದ ಬಗೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕ್ರಾಂತಿಕಾರಿ ಹಾಡುಗಾರ ಅಂಬಣ್ಣ ಆರೋಲಿಕರ್, ಸಿ.ದಾನಪ್ಪ ನಿಲೋಗಲ್, ಬಾಬು ಭಂಡಾರಿಗಲ್, ಆರ್‌ಸಿಎಫ್‌ನ ಎಂ.ಗಂಗಾಧರ, ನಾರಾಯಣ ಬೆಳಗುರ್ಕಿ, ಎಚ್.ಎನ್.ಬಡಿಗೇರ ಮಾತನಾಡಿದರು. ಮುಖಂಡರಾದ ಎಂ.ವಿರೂಪಾಕ್ಷಿ, ಬಾಬು ಭಂಡಾರಿಗಲ್, ಡಿ.ಎಚ್.ಪೂಜಾರ್, ಜೆ.ಬಿ.ರಾಜು, ಬಿ.ಎನ್.ಆರ್, ಬಿ.ಬಸವಲಿಂಗಪ್ಪ, ಮೇರಿ ದಾನಪ್ಪ ಮಸ್ಕಿ, ಕವಿ ಪ್ರಶಾಂತ್ ದಾನಪ್ಪ, ಡಾ.ನಾಜರ್.ಪಿ.ಎಸ್., ಜಾಗೃತ ಮಹಿಳಾ ಸಂಘಟನೆಯ ಚಿನ್ನಮ್ಮ, ಡಾ.ರಾಜಶೇಖರ ನಾರನಾಳ, ರಮೇಶ ಗಬ್ಬೂರು, ದೊಡ್ಡಪ್ಪ ಮುರಾರಿ, ನರಸಪ್ಪ ಡಿಂಗ್ರಿ, ಎಂ.ಆರ್.ಭೇರಿ, ಡಾ.ಬಸವರಾಜ ನಾಯಕ, ರಂಜಾನ್‌ಸಾಬ್ ಉಳ್ಳಾಗಡ್ಡಿ, ಧರ್ಮರಾಜ ಗೋನಾಳ, ಬಿ.ಎನ್.ಯರದಿಹಾಳ, ರಾಜ್ಯ ಮಹಿಳಾ ಒಕ್ಕೂಟದ ವಿರುಪಮ್ಮ, ರತ್ನಮ್ಮ ಕಟ್ಟಿಮನಿ, ವಿಜಯರಾಣಿ ಸಿರವಾರ, ಡಾ.ಹುಸೇನಪ್ಪ ಅಮರಾಪುರ ಸೇರಿದಂತೆ ಇನ್ನಿತರರು ಇದ್ದರು. ಆರ್‌ಸಿಎಫ್ ಕಲಾತಂಡದವರು ಕ್ರಾಂತಿಗೀತೆಗಳನ್ನು ಪ್ರಸ್ತುಪಡಿಸಿದರು.
