ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 03
ಸಿಂಧನೂರು ಹಾಗೂ ಮಸ್ಕಿ ತಾಲೂಕು ವ್ಯಾಪ್ತಿಯ ಮಳೆಯಾಶ್ರಿತ ಗ್ರಾಮಗಳ ರೈತರ ಜಮೀನುಗಳಲ್ಲಿ ಈ ಬಾರಿ ತೊಗರಿ ಬೆಳೆ ಕಣ್ಣು ಕೋರೈಸುತ್ತಿದೆ. ಆರಂಭದಲ್ಲಿ ಮಳೆ ಕೊರತೆ ಎದುರಾಗಿತ್ತು, ತದನಂತರ ಬಿಟ್ಟೂ ಬಿಡದೇ ಸುರಿದ ಪರಿಣಾಮ ಎದೆಯೆತ್ತರಕ್ಕೆ ಬೆಳೆದಿದ್ದು, ರೈತರಲ್ಲಿ ಇಳುವರಿಯ ನಿರೀಕ್ಷೆಗಳು ಗರಿಗೆದರಿವೆ.
ಕಳೆದ ಬಾರಿ ಕ್ವಿಂಟಲ್‌ಗೆ ಆರಂಭದಲ್ಲಿ 12 ಸಾವಿರದವರೆಗೂ ತೊಗರಿ ಮಾರಾಟವಾಗಿತ್ತು. ತದನಂತರ 7,500ರಿಂದ 8000 ಸಾವಿರದವರೆಗೂ ದರ ಇತ್ತು. ಪುನಃ 12 ಸಾವಿರಕ್ಕೆ ತಲುಪಿತ್ತು. ಉತ್ತಮ ದರವಿದ್ದ ಕಾರಣ ಮಳೆಯಾಶ್ರಿತ ರೈತರು ಒಳ್ಳೆಯ ಆದಾಯ ಪಡೆದುಕೊಂಡಿದ್ದರು. ಈ ಬಾರಿಯೂ ತೊಗರಿ ಬೆಳೆ ಬಂಪರ್ ಆಗಿರುವುದರಿಂದ ಖುಷಿಯಲ್ಲಿದ್ದಾರೆ.
ಕೀಟ ಕಾಟ ಕಡಿಮೆ
ಕಳೆದ ಬಾರಿಯಂತೆ ಈ ಸಲ ಕೀಟಗಳ ಕಾಟ ಕಡಿಮೆ ಇದೆ ಎಂದು ರೈತರು ಹೇಳುತ್ತಾರೆ. ಸತತ ಮಳೆಯಿಂದಾಗಿ ಅಷ್ಟೊಂದು ಪ್ರಮಾಣದಲ್ಲಿ ತೊಗರಿಗೆ ಉಳುಬಾಧೆ ಕಾಡಿಲ್ಲ, ಇನ್ನು ಒಡಲು ಪ್ರದೇಶದಲ್ಲಿ ನೀರು ನಿಂತು ಅಲ್ಲಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಉಳಿದಂತೆ ಬೆಳೆ ಕಣ್ಣು ಬಿಡುವಂತೆ ಇದೆ. ಹೊಲಗಳಲ್ಲಿ ತೊಗರಿ ಬೆಳೆ ನೋಡುವುದೇ ಒಂದು ಖುಷಿ ಎನ್ನುವ ವಾತಾವರಣ ನಿರ್ಮಾಣಗೊಂಡಿದೆ.
ನೆಲ್ಲಿಗಿಂತ ತೊಗರಿ ಮೇಲು !
“ಬೆಳಿಬಾರ‍್ದ ಬೆಳಿ ಬಂತಂದ್ರ, ಚೀಲ ತುಂಬಿ ಸಾಕಾಗಬೇಕು ನೋಡ್ರಿ. ಈ ಸಲ ತೊಗರಿ ಬೆಳಿ ಭಾಳ ಚಲೋ ಐತಿ. ಹ್ವಾದ ಸಲ ಒಳ್ಳೆ ಬೆಳಿ ಬಂದಿತ್ತು. ನಾಕ್ ರೊಕ್ಕ ಆಗಿದ್ವು. ನೆಲ್ಲು ಬೆಳಸಬೇಕಂದ್ರ ಉಸುಕು ಉಗ್ಗಿದಂಗ ಗೊಬ್ಬರ ಹಾಕ್ಬೇಕ್ರಿ. ಆದ್ರ ತೊಗರಿಗೆ ಆಪರಿ ಏನಿಲ್ಲ. ಒಂದೆರಡು ಸಲ ಗೊಬ್ರ ಹಾಕಿ, ಎರಡ್ಮೂರು ಸಲ ಸಣ್ಣಾಗಿ ಎಣ್ಣಿ ಹೊಡದ್ರ ಬೆಳಿ ಕೈಗೆ ಬರುತ್ತ. ಮಳಿ ಅಷ್ಟ ಆಬಕು ನೋಡ್ರಿ. ಹಿಂಗಾಗಿ ನೆಲ್ಲಿಗಿಂತ ತೊಗರಿನೇ ಮೇಲು” ಎಂದು ಹಿರೇಬೇರಿಗಿ ಗ್ರಾಮದ ರೈತರೊಬ್ಬರು ಹೇಳುತ್ತಾರೆ.