ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 06
“ಬುಗರಿ, ಮಣ್ಣು, ಕನ್ನೆಮಳೆ ಕಥಾಸಂಕಲನ, ತೊಟ್ಟಿಲು, ಕಿರೀಟ, ಬೇರು, ಹೊಕ್ಕುಳು ಕಾದಂಬರಿಗಳು ಹಾಗೂ ಸೊಲ್ಲು ವಿಮರ್ಶಾ ಕೃತಿ ಹಾಗೂ ಇತ್ತೀಚಿನ ‘ನಾನೆಂಬ ಕಿಂಚಿತ್ ಆತ್ಮಕತೆ’ಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಬರಹಗಳನ್ನು ಕೊಟ್ಟ ಡಾ.ಮೋಗಳ್ಳಿ ಗಣೇಶ ಅವರು ಅಪ್ಪಟ ದೇಸೀ ಪ್ರತಿಭೆ ಹಾಗೂ ಯುವ ಸಾಹಿತಿಗಳಿಗೆ ಸ್ಫೂರ್ತಿಯ ಚಿಲುಮೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ್ ಹೇಳಿದರು.
ಕನ್ನಡದ ಖ್ಯಾತ ಸಾಹಿತಿ ಡಾ.ಮೋಗಳ್ಳಿ ಗಣೇಶ ಅವರು ನಿಧನರಾದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಸಮಿತಿ ವತಿಯಿಂದ ನಗರದ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಮೋಗಳ್ಳಿಯವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಜನಪದ ವಿಭಾಗದ ಮುಖ್ಯಸ್ಥರಾಗಿ ಅತ್ಯಂತ ಶಿಸ್ತುಬದ್ಧವಾಗಿ ಜನಪದ ವಿಭಾಗವನ್ನು ಕಟ್ಟಿ, ಶಿಷ್ಯವೃಂದವನ್ನೇ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಂಶೋಧನಾ ಕ್ಷೇತ್ರದಲ್ಲಿಯೂ ಮಹತ್ವದ ಕೆಲಸ ಮಾಡಿದ್ದ ಮೋಗಳ್ಳಿಯವರು, ದಕ್ಷಿಣ ಕರ್ನಾಟಕ ಭಾಗದಿಂದ ಬಂದು, ಉತ್ತರ ಕರ್ನಾಟಕ ಭಾಗವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಸಾಹಿತ್ಯ ಕೃಷಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಮೋಗಳ್ಳಿ ಗಣೇಶ ಅವರ ಭಾವಚಿತ್ರಕ್ಕೆ ಹೂಹಾರ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಯಪ್ಪ ಮೇಟಿ, ಮಲ್ಲಿಕಾರ್ಜುನ ಕಾಟಗಲ್, ಬೂದೇಶ ಮರಾಠ, ರುದ್ರಗೌಡ, ಶ್ರೀಕಾಂತ ಜವಳಿ, ದತ್ತು ಪ್ರಸಾದ್, ಯಲ್ಲಪ್ಪ, ಹನುಮಂತ, ಹನೀಫ್, ನಾಗಪ್ಪ ಉಮಲೂಟಿ ಸೇರಿದಂತೆ ಇನ್ನಿತರರಿದ್ದರು.
