ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 29
ಜಿಲ್ಲೆಯ ಸಿಂಧನೂರು-ಮಸ್ಕಿ ತಾಲೂಕಿನಲ್ಲಿ ಮಳೆಗೆ ಕೃಷಿ ಜಮೀನಿನಲ್ಲಿನ ಜೋಳ, ತೊಗರಿ, ಸಜ್ಜೆ ಹಾಗೂ ಹತ್ತಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಜೋಳಕ್ಕೆ ಎಕರೆಗೆ 25 ಸಾವಿರ ಮತ್ತು ತೊಗರಿಗೆ ಎಕರೆಗೆ 20 ಸಾವಿರ ರೂ. ಹಾಗೂ ಉಳಿದ ಬೆಳೆಗಳ ಪಾರದರ್ಶಕ ಸಮೀಕ್ಷೆ ನಡೆಸಿ ಕೂಡಲೇ ಬೆಳೆನಷ್ಟ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಸಿಪಿಐ(ಎಂಎಲ್) ಲಿಬರೇಶನ್ ತಾಲೂಕು ಸಮಿತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ರವಾನಿಸಲಾಯಿತು.
“ಕಂದಾಯ, ಕೃಷಿ ಇಲಾಖೆ ಕೂಡಲೇ ಬೆಳೆ ನಷ್ಟ ಜಂಟಿ ಸಮೀಕ್ಷೆ ನಡೆಸಲಿ” : ಬಸವರಾಜ ಬೆಳಗುರ್ಕಿ ಆಗ್ರಹ
ಈ ವೇಳೆ ಮಾತನಾಡಿದ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, “ಸಿಂಧನೂರು ತಾಲೂಕು ವ್ಯಾಪ್ತಿಯ ಉದ್ಬಾಳ.ಜೆ, ಗೋಮರ್ಸಿ, ಜೋಳದರಾಶಿ, ಮಾಡಸಿರವಾರ, ಬೆಳಗುರ್ಕಿ, ಕಾತರಕಿ.ಡಿ, ಮಲದಿನ್ನಿ.ಡಿ, ಗೊಣ್ಣಿಗನೂರು, ಅಲಬನೂರು, ಹರಟೇನೂರು, ಬಾದರ್ಲಿ, ವಳಬಳ್ಳಾರಿ, ಗಿಣಿವಾರ, ಗೋನವಾರ, ರಾಮತ್ನಾಳ, ಕಗ್ಗಲ್.ಡಿ ಸೇರಿದಂತೆ ಇನ್ನಿತರೆ ಗ್ರಾಮಗಳ ಸೀಮೆ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಯಲ್ಲಿ ರೈತರು ಹೈಬ್ರಿಡ್ ಜೋಳ ಬಿತ್ತನೆ ಮಾಡಿದ್ದಾರೆ. ಜೋಳದ ಹೊಲದ ತುಂಬೆಲ್ಲಾ ಮಳೆ ನೀರು ನಿಂತಿದ್ದು, ಕೊಳೆಯುವ ಹಂತ ತಲುಪಿವೆ. ಕೆಲವೊಂದು ಜೋಳದ ಹೊಲಗಳು ಭತ್ತದ ಗದ್ದೆಗಳಂತಾಗಿರುತ್ತವೆ. ದಿನದಿಂದ ದಿನಕ್ಕೆ ಬೆಳೆ ಕೊಳೆಯುತ್ತಿದೆೆ. ಕೆಲವು ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಜೋಳ ಮೊಳಕೆ ಹೊಡೆದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಒಂದು ಹೈಬ್ರಿಡ್ ಜೋಳದ ಪಾಕೀಟ್ ಬೆಲೆ 1350 ರೂಪಾಯಿ, 2 ಎಕರೆಗೆ 2700, 2 ಎಕರೆಗೆ 1 ಚೀಲಕ್ಕೆ 1450 ರೂ. ದರದ 2 ಚೀಲ ಡಿಎಪಿ 2900 ರೂ. ಗೊಬ್ಬರ ಹಾಕಲಾಗಿದೆ. ಎರಡನೇ ಬಾರಿ 2 ಎಕರೆಗೆ 1400 ಬೆಲೆಯ 20-20 ಗೊಬ್ಬರ 2800 ರೂ, ಮತ್ತೊಂದು ಬಾರಿ 2 ಚೀಲ ಡಿಎಪಿ 2900, 2 ಸಲ ಕ್ರಿಮಿನಾಶಕ 1000 ರೂ, 2 ಎಕರೆಗೆ ಬಿತ್ತಲು ಎಲ್ಲ ಸೇರಿ 3000 ರೂ, ಉಳುಮೆ ಮಾಡುವ ಮುನ್ನ ಟಿಲ್ಲರ್ ಕುಂಟೆ ಹೊಡೆಯಲು ಎರಡು ಬಾರಿ 3000 ರೂ, ಕೊನೆಯ ಬಾರಿ 1 ಸಲ ಟ್ರ್ಯಾಕ್ಟರ್ ಕುಂಟೆ ಹೊಡೆಯಲು 600 ರೂ. ಒಟ್ಟು ಲೆಕ್ಕ ಹಾಕಿದರೆ 2 ಎಕರೆಗೆ 18,900 ರೂ.ಖರ್ಚಾಗುತ್ತದೆ. ಜಮೀನಿನ ರೈತರ ಮಾನವ ಶ್ರಮ ಲೆಕ್ಕಹಾಕಿದರೆ ಎಕರೆ 10 ಸಾವಿರ ರೂಪಾಯಿಗೂ ಹೆಚ್ಚು ನಷ್ಟವಾಗಿದೆ” ಎಂದು ಬೆಳಗುರ್ಕಿ ಗಮನ ಸೆಳೆದರು.

“ಸರ್ಕಾರ ತೊಗರಿ ಬೆಳೆಗಾರರ ನೆರವಿಗೆ ಬರಲಿ ” : ಬಸವರಾಜ ಕೊಂಡೆ ಒತ್ತಾಯ
ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ ಮಸ್ಕಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಬೇರಿಗಿ, ವೀರಾಪುರ, ರತ್ನಾಪುರ, ಕಲ್ಮಂಗಿ, ಉಮಲೂಟಿ, ಬುಕ್ಕನಹಟ್ಟಿ, ಗೊರಲೂಟಿ, ಹೊಸೂರು, ಹತ್ತಿಗುಡ್ಡ, ಗುಂಡಾ, ಗಂಟೇರಹಟ್ಟಿ, ಮಂಗನಮ್ಮನ ಹಟ್ಟಿ, ರತ್ನಾಪುರ ಹಟ್ಟಿ, ಬೊಮ್ಮನಾಳ, ಮಾಂಪುರ, ಸಂಕನಾಳ, ಹೊಗರನಾಳ-ಗುಡಿಹಾಳ, ಹೊಕ್ರಾಣಿ, ಬಪ್ಪೂರು ಗ್ರಾಮಗಳ ಸೀಮಾದ ರೈತರ ಹೊಲಗಳಲ್ಲಿ ತೊಗರಿ ಬೆಳೆಯಲ್ಲಿ ನೀರು ನಿಂತಿರುತ್ತವೆ. ಇದರಿಂದ ತಂಪು ಹೆಚ್ಚಾಗಿ ಕೆಲವು ಕಡೆ ತೊಗರಿಯ ಕಾಂಡ ಕೊಳೆಯುತ್ತಿದೆ. ಇನ್ನೂ ಹಲವು ಕಡೆ ನೆಟೆ ರೋಗ ಹೆಚ್ಚಿರುತ್ತದೆ. ಸುರಿಯುತ್ತಿರುವ ಮಳೆಗೆ ಮೊಗ್ಗುಗಳು ಉದುರುತ್ತಿವೆ. ತೊಗರಿ ಬೆಳೆ ಎಕರೆಗೆ 5 ಸಾವಿರ ಖರ್ಚು ಮಾಡಲಾಗಿದೆ. ವಿಪರೀತ ಮಳೆಯಿಂದಾಗಿ ಬೆಳೆ ನಷ್ಟವಾದರೆ ರೈತರ ಮೇಲೆ ಸಾಲದ ಹೊರೆ ಇನ್ನಷ್ಟು ಹೆಚ್ಚಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಹಕ್ಕೊತ್ತಾಯಗಳು: ವಿಪರೀತ ಮಳೆಯಿಂದ ಸಿಂಧನೂರು, ಮಸ್ಕಿ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಬೆಳೆನಷ್ಟವಾಗಿದ್ದು ಕೂಡಲೇ ಕಂದಾಯ, ಕೃಷಿ ಇಲಾಖೆಯಿಂದ ಪಾರದರ್ಶಕವಾಗಿ ಜಂಟಿ ಸಮೀಕ್ಷೆ ನಡೆಸಿ ಜೋಳಕ್ಕೆ ಎಕರೆ 25 ಸಾವಿರ ಹಾಗೂ ತೊಗರಿಗೆ ಎಕರೆಗೆ 20 ಸಾವಿರ ರೂಪಾಯಿ ಬೆಳೆನಷ್ಟ ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು, ನಷ್ಟಕ್ಕೀಡಾದ ಹತ್ತಿ ಬೆಳೆಗಾರರಿಗೆ ಎಕರೆಗೆ 15 ಸಾವಿರ ಹಾಗೂ ತೊಗರಿ ಬೆಳೆಗೆ ಎಕರೆ 20 ಸಾವಿರ ನಷ್ಟ ಪರಿಹಾರ ಒದಗಿಸಬೇಕು, ಜೋಳ, ತೊಗರಿ, ಸಜ್ಜೆ, ಹತ್ತಿ ಸೇರಿದಂತೆ ನಷ್ಟಕ್ಕೀಡಾದ ತೋಟಗಾರಿಕೆ ಬೆಳೆಗಳ ಸಮೀಕ್ಷೆಯನ್ನೂ ಕಡ್ಡಾಯವಾಗಿ ನಡೆಸಬೇಕು, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಈ ಕೂಡಲೇ ಆದೇಶ ಹೊರಡಿಸಿ ಸಮೀಕ್ಷೆ ಚುರುಕೊಳಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್.ಎಚ್.ಕಲ್ಮಂಗಿ, ಮಹಾದೇವ ಅಮರಾಪುರ, ರೈತರಾದ ಚಿದಾನಂದ, ಹುಸೇನಪ್ಪ, ಮೌನೇಶ, ದುರುಗಪ್ಪ, ಶರಣಪ್ಪ, ವೀರೇಶ, ರಮೇಶ, ಕಂಠೆಪ್ಪ ಸೇರಿದಂತೆ ಇನ್ನಿತರರಿದ್ದರು.
