ಸಿಂಧನೂರು: ಬಿಸಿಎಂ ಹೊಸ ಹಾಸ್ಟೆಲ್ ಮಂಜೂರು ಕಗ್ಗಂಟು, ಗ್ರಾಮೀಣ ವಿದ್ಯಾರ್ಥಿಗಳ ಪರದಾಟ !!

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 24

ಚುನಾಯಿತ ಜನಪ್ರತಿನಿಧಿಗಳ ನಿಷ್ಕಾಳಜಿ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಿಂಧನೂರು ತಾಲೂಕಿನ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ತಾಲೂಕಿನಲ್ಲಿ ಬಿಸಿಎಂನ (ಪ್ರಿ ಮೆಟ್ರಿಕ್, ಪೋಸ್ಟ್ ಮೆಟ್ರಿಕ್) ಕೇವಲ 8 ಹಾಸ್ಟೆಲ್‌ಗಳಿರುವುದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕಾಗಿ ಅಲೆದೂ ಅಲೆದು ಸುಸ್ತಾಗುತ್ತಿದ್ದಾರೆ.
ತಾಲೂಕು ಕೇಂದ್ರದಿಂದ 15ರಿಂದ 20ಕ್ಕೂ ಕಿ.ಮೀ ಅಂತರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಪಿಯುಸಿ ಹಾಗೂ ಪದವಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದರೂ ಅವರಿಗೆ ಹಾಸ್ಟೆಲ್ ಪ್ರವೇಶಕ್ಕೆ ಅವಕಾಶ ಸಿಗುತ್ತಿಲ್ಲ. ಯಾಕೆ ಹೀಗೆ ಎಂದು ಅಧಿಕಾರಿಯೊಬ್ಬರನ್ನು ಕೇಳಿದರೆ “ನಾವೇನು ಮಾಡಂ ರ‍್ರೀ. ಇರೋದೆ 8 ಹಾಸ್ಟೆಲ್ಲೂ ! ಅಷ್ಟçಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಕೊಡಲಿಕ್ಕೆ ಆಗುತ್ತೆ. ಇಲಾಖೆ ರೂಲ್ಸ್ ಪ್ರಕಾರ ಹೋಗ್ಬೇಕಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹಾಸ್ಟೆಲ್ ಅವಕಾಶ ಕೇಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಧಿಕಾರಿಗಳಿಗೆ ಇರುವ ಪರಿಸ್ಥಿತಿ ಹೇಳಿ ಕಳುಹಿಸುವುದೇ ಕೆಲಸವಾಗಿದೆ.
ಸಿಂಧನೂರು ತಾಲೂಕಲ್ಲಿ ಇರೋದು ಕೇವಲ 8 ಬಿಸಿಎಂ ಹಾಸ್ಟೆಲ್ !
ರಾಯಚೂರು ಜಿಲ್ಲೆಯ ಸಿಂಧನೂರು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಬಿಸಿಎಂ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿದ್ದರೆ, ಈ ತಾಲೂಕಲ್ಲಿ ಇರೋದು ಮಾತ್ರ 8 ಹಾಸ್ಟೆಲ್‌ಗಳು. ಹೀಗಾಗಿ ಸಮಸ್ಯೆ ಉಲ್ಬಣಿಸಿದೆ. ದೇವದುರ್ಗ 11, ರಾಯಚೂರು 21, ಮಾನ್ವಿ 11 ಹಾಗೂ ಲಿಂಗಸುಗೂರು ತಾಲೂಕಿನಲ್ಲಿ 18 ಬಿಸಿಎಂ (ಪ್ರಿ ಮೆಟ್ರಿಕ್ ಹಾಗೂ ಪೋಸ್ಟ್ ಮೆಟ್ರಿಕ್) ಹಾಸ್ಟೆಲ್‌ಗಳಿವೆ. ಆದರೆ, ಸಿಂಧನೂರು ತಾಲೂಕಿನಲ್ಲಿ ಮಾತ್ರ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಬೇಡಿಕೆಗೆ ತಕ್ಕಂತೆ ಕೊರತೆಯಾಗಿರುವುದೇ ಹಾಸ್ಟೆಲ್ ಬಿಕ್ಕಟ್ಟಿಗೆ ಕಾರಣವಾಗಿದೆ.
ಹಾಸ್ಟೆಲ್‌ಗಾಗಿ 2600 ದಾಟಿದ ಅರ್ಜಿಗಳು
ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್‌ನಲ್ಲಿ ಪ್ರವೇಶ ಅವಕಾಶ ಬಯಸಿ ಇಲ್ಲಿಯವರೆಗೆ ಪ್ರಿ ಮೆಟ್ರಿಕ್ 2002 ಹಾಗೂ ಪೋಸ್ಟ್ ಮೆಟ್ರಿಕ್ 605 ಸೇರಿ ಒಟ್ಟು 2607 ಅರ್ಜಿಗಳನ್ನು ವಿದ್ಯಾರ್ಥಿಗಳು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲಿ 593 ಪೋಸ್ಟ್ ಮೆಟ್ರಿಕ್, 210 ಪ್ರಿ ಮೆಟ್ರಿಕ್ ಒಟ್ಟು 803 ವಿದ್ಯಾರ್ಥಿಗಳು ಮಾತ್ರ ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಸತಿ ಸೌಕರ್ಯ ಪಡೆದಿದ್ದಾರೆ.
‘ವಿದ್ಯಾರ್ಥಿಗಳ ಸಂಖ್ಯೆ ಪರಿಗಣಿಸಿದರೆ ಇನ್ನೂ 8 ಹಾಸ್ಟೆಲ್ ಬೇಕು’
ಇತ್ತೀಚೆಗೆ ಬಿಸಿಎಂ ಹಾಸ್ಟೆಲ್‌ಗೆ ವಿದ್ಯಾರ್ಥಿಗಳ ಬೇಡಿಕೆ ಹೆಚ್ಚಿದೆ. ಈ ಬೇಡಿಕೆಯನ್ನು ಪರಿಗಣಿಸಿದರೆ ಇನ್ನೂ ಸಿಂಧನೂರು ತಾಲೂಕಿಗೆ 8 ಬಿಸಿಎಂ ಹಾಸ್ಟೆಲ್‌ಗಳು ಬೇಕು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಇರುವ ಕಡಿಮೆ ಪ್ರಮಾಣದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಸೌಕರ್ಯ ಕಲ್ಪಿಸುವುದು ಹರಸಾಹಸದ ಕೆಲಸವಾಗಿದೆ ಎಂದು ಅವರು ಬೇಜಾರು ವ್ಯಕ್ತಪಡಿಸುತ್ತಾರೆ.
ರಾಯಚೂರು ಜಿಲ್ಲೆಗೆ 4 ಹಾಸ್ಟೆಲ್
ಇಡೀ ರಾಯಚೂರು ಜಿಲ್ಲೆಗೆ ಹೊಸದಾಗಿ 4 ಹಾಸ್ಟೆಲ್‌ಗಳು ಮಂಜೂರಾಗಿವೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಈಗಾಗಲೇ ಒಂದು ರಾಯಚೂರು ತಾಲೂಕಿಗೆ ಮಂಜೂರಾಗಿದ್ದು, ಇನ್ನೂ 3 ಹಾಸ್ಟೆಲ್‌ಗಳಿಗೆ ಹಗ್ಗ-ಜಗ್ಗಾಟ ನಡೆದಿದೆ. ಸಿಂಧನೂರು ತಾಲೂಕಿಗೆ 1 ಬಾಲಕರ, ಇನ್ನೊಂದು ಬಾಲಕಿಯರ ಬಿಸಿಎಂ ಹಾಸ್ಟೆಲ್‌ಗಳು ಮಂಜೂರಾದರೆ ಕನಿಷ್ಠಪಕ್ಷ 200 ವಿದ್ಯಾರ್ಥಿಗಳಿಗಾದರೂ ಅವಕಾಶ ದೊರೆಯುತ್ತದೆ ಎಂದು ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ. ಗುರುವಾರ ಸಿಂಧನೂರು ತಾಲೂಕಿಗೆ ಹೊಸ ಹಾಸ್ಟೆಲ್‌ಗಳು ಮಂಜೂರಿಯಾಗಿವೆ ಎಂದು ಹೇಳಲಾಗುತ್ತಿದ್ದು, ಇನ್ನೂ ಅಧಿಕೃತಗೊಂಡಿಲ್ಲ.
ತಾಲೂಕಿಗೆ ಹಾಸ್ಟೆಲ್ ತರುವಲ್ಲಿ ಶಾಸಕರ ನಿರ್ಲಕ್ಷ್ಯ ಆರೋಪ
ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್‌ಗಳ ಸಂಖ್ಯೆ ಅತಿ ಕಡಿಮೆ ಇದ್ದರೂ, ಹೊಸದಾಗಿ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಸಿಕೊಂಡು ಬರುವಲ್ಲಿ ಹಿಂದಿನ ಶಾಸಕರಾಗಲಿ, ಹಾಲಿ ಶಾಸಕರಾಗಲಿ ಕಾಳಜಿವಹಿಸದೇ ಇರುವುದೇ ವಿದ್ಯಾರ್ಥಿಗಳು ಹಾಸ್ಟೆಲ್‌ಗಾಗಿ ಪಡಿಪಾಟಲು ಅನುಭವಿಸಲು ಕಾರಣವಾಗಿದೆ. ಹಾಸ್ಟೆಲ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳು ಹೋರಾಟ ಮಾಡಿದರೂ ಕನಿಷ್ಠಪಕ್ಷ ಸೌಜನ್ಯಕ್ಕಾದರೂ ತಾಲೂಕಾ ಅಧಿಕಾರಿಗಳ ಸಭೆ ನಡೆಸಿ, ವಿದ್ಯಾರ್ಥಿಗಳ ಅಹವಾಲುಗಳನ್ನು ಕೇಳುವವರಿಲ್ಲದಂತಾಗಿದೆ ಎಂದು ವಿದ್ಯಾರ್ಥಿ ಮುಖಂಡರೊಬ್ಬರು ಆರೋಪಿಸುತ್ತಾರೆ.


Spread the love

Leave a Reply

Your email address will not be published. Required fields are marked *