ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 12
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಪ್ರಯುಕ್ತ ಗುರುವಾರ ಜಾಗೃತಿ ಜಾಥಾ ಹಾಗೂ ಕಾನೂನು ನೆರವು ಕಾರ್ಯಕ್ರಮ ನಡೆಯಿತು.
ಕೋಟೆ ಪ್ರದೇಶದ ಶಾಲಾ ಮಕ್ಕಳು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, “ಜೀತ ಪದ್ಧತಿ ತಡೆಗಟ್ಟಿ, ಮಕ್ಕಳ ಮತ್ತು ಮಹಿಳೆಯರ ರಕ್ಷಿಸಿ, ಬಾಲ ಕಾರ್ಮಿಕತೆ ಹೋಗಲಾಡಿಸಿ-ಶಿಕ್ಷಣ ಮುಂದುವರಿಸಿ, ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ, ಮಹಿಳೆಯರ ಮತ್ತು ಮಕ್ಕಳ ಶೋಷಣೆ ನಿಲ್ಲಲಿ-ಉತ್ತಮ ಸಮಾಜ ನಿರ್ಮಾಣವಾಗಲಿ, ಮಕ್ಕಳ ರಕ್ಷಣೆ ದೇಶದ ರಕ್ಷಣೆ, ಮಾನವ ಕಳ್ಳ ಸಾಗಣೆ ಶಿಕ್ಷಾರ್ಹ ಅಪರಾಧ, ಬಾಲ್ಯ ನಮಗೆ ದುಡಿಮೆ ನಿಮಗೆ, ಬಿಕ್ಷಾಟನೆ ನಿಲ್ಲಿಸಿ ಮಕ್ಕಳ ಭವಿಷ್ಯ ರೂಪಿಸಿ” ಎನ್ನುವ ಘೋಷಣೆಗಳನ್ನು ಹಾಕಿದರು. ಜಾಥಾದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.