Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 30

ಹಿರಿಯ ಲೇಖಕ ಹಾಗೂ ಸಂಶೋಧಕ ನಗರದ ಡಾ.ಶಾಶ್ವತಸ್ವಾಮಿ ಮುಕ್ಕುಂದಿಮಠ ವಯೋಸಹಜವಾಗಿ ದಿ.30-10-2025 ಗುರುವಾರದಂದು ಬೆಳಿಗ್ಗೆ 10 ಗಂಟೆ ಸುಮಾರು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಓರ್ವ ಪುತ್ರ ಕೆಲ ದಿನಗಳ ಹಿಂದೆ ನಿಧನರಾಗಿದ್ದಾರೆ.
ಸಿಂಧನೂರಿನ ಸರಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತರಾಗಿದ್ದ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಹಲವು ಪ್ರಮುಖ ಸಂಶೋಧನಾ ಕೃತಿಗಳ ಮೂಲಕ ಹೆಸರಾಗಿದ್ದರು. ಡಾ.ಎಂ.ಚಿದಾನAದಮೂರ್ತಿ ಅವರ ಅಪ್ಪಟ ಶಿಷ್ಯರಾಗಿದ್ದ ಇವರು ನಾಡಿನ ಹಲವು ಖ್ಯಾತ ಸಾಹಿತಿಗಳೊಂದಿಗೆ ಅಧ್ಯಾಪಕವೃತ್ತಿಯನ್ನು ಕೈಗೊಂಡಿದ್ದರು. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಬೋಧನೆ ಕೈಗೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ.
10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
2019ರಲ್ಲಿ ನಗರದಲ್ಲಿ ನಡೆದ 10ನೇ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಹಲವು ಸಂಶೋಧನ ಕಮ್ಮಟ, ವಿಚಾರ ಸಂಕಿರಣ, ಕತೆ ಹಾಗೂ ಕಾವ್ಯಗೋಷ್ಠಿಗಳ ನೇತೃತ್ವ ವಹಿಸಿಕೊಂಡು ಸಾಹಿತ್ಯಿಕ ವಾತಾವರಣ ಸೃಷ್ಟಿಸುವಲ್ಲಿ ಶ್ರಮಿಸಿದ್ದರು. ಅಲ್ಲದೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮೌಲಿಕ ಉಪನ್ಯಾಸಗಳನ್ನು ಮಂಡಿಸುವ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದರು. ಇಳಿವಯಸ್ಸಿನಲ್ಲೂ ನಾಡಿನ ಕೆಲವೊಂದು ವಾಗ್ವಾದಗಳಿಗೆ ಪ್ರಜಾವಾಣಿ ಸೇರಿದಂತೆ ಇನ್ನಿತರೆ ದೈನಿಕಗಳಿಗೆ ಪತ್ರಗಳನ್ನು ಬರೆಯುವ ಮೂಲಕ ತಮ್ಮದೇ ಆದ ವಿಷಯ ಮಂಡಿಸುತ್ತಿದ್ದುದು ವಿಶೇಷ.
ಅಪಾರ ಶಿಷ್ಯ ಬಳಗ
ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಇವರ ಶಿಷ್ಯರಲ್ಲಿ ಹಲವರು ಶಾಸಕರಾಗಿ, ಸಚಿವರಾಗಿ ವಿವಿಧ ರಂಗಗಳಲ್ಲಿ ಉನ್ನತ ಹುದ್ದೆಗಳಲ್ಲಿ ಗುರುತಿಸಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *