ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 13
ಜೋಳ ಖರೀದಿಸುವಂತೆ ನಿರಂತರ 9 ಬಾರಿ ಹೋರಾಟ ನಡೆಸಿ, 10ನೇ ಬಾರಿಗೆ “ಸಿಂಧನೂರು ಬಂದ್” ಮೂಲಕ ಎಚ್ಚರಿಕೆ ನೀಡಿದಾಗ್ಯೂ, ನುಸಿಹುಳು, ಗುಣಮಟ್ಟದ ಕೊರತೆ ಹೀಗೆ ಹಲವು ಸಬೂಬು ಹೇಳಿ, ಖರೀದಿಗೆ ನಿರಾಕರಿಸುತ್ತಿರುವ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳು ಹಾಗೂ ಸರ್ಕಾರದ ಎಡಬಿಡಂಗಿ ನೀತಿಯನ್ನು ಖಂಡಿಸಿ ಪುನಃ ಬೃಹತ್ ಹೋರಾಟ ಸಂಘಟಿಸಲು ರೈತ ಸಂಘಟನೆಗಳ ಒಕ್ಕೂಟ ಮುಂದಾಗಿರುವುದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ರೈತ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳು ಸೇರಿದಂತೆ ರೈತ ಮುಖಂಡರ ಸಭೆ ಕರೆಯಲಾಗುತ್ತದೆ ಎಂದು ಹೇಳಲಾಗಿದ್ದು, ರೈತರ ಆರ್ಥಿಕ ಸಂಕಷ್ಟ, ಸರ್ಕಾರದ ದ್ವಂದ್ವ ನೀತಿ, ಉಗ್ರಾಣ ನಿಗಮದವರ ನಿರಾಕರಣೆ ಸೇರಿದಂತೆ ಹಲವು ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ.
ಗುರುವಾರ ರಾಗಲಪರ್ವಿ ಕ್ರಾಸ್ ಬಳಿ ಆಹಾರ ಇಲಾಖೆಯ ಅಧಿಕಾರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿ ಹಲವು ದಿನಗಳಿಂದ ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದಾಗ್ಯೂ ಪುನಃ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳು ಹಲವು ಕಾರಣಗಳನ್ನು ಮುಂದಿಟ್ಟು ಟ್ರಾಕ್ಟರ್, ಲಾರಿಯಲ್ಲಿ ಲೋಡು ಮಾಡಿಕೊಂಡು ಹೋದ ಜೋಳವನ್ನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡಿರುವ ರೈತರು, ಪುನಃ ಹೋರಾಟದ ಹಾದಿ ತುಳಿಯಲು ಸಜ್ಜಾಗಿದ್ದಾರೆ.
‘ಸರ್ಕಾರದ ವಿಳಂಬ ನೀತಿಯೆ ಜೋಳದ ಖರೀದಿ ಬಿಕ್ಕಟ್ಟಿಗೆ ಕಾರಣ’
“ಸರಿಯಾದ ಸಮಯಕ್ಕೆ ಜೋಳ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸಿ ಇಷ್ಟೊತ್ತಿಗೆ ಖರೀದಿಸಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಸರ್ಕಾರವೇ ವಿಳಂಬ ಮಾಡಿ, ಈಗ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ಅದರ ವ್ಯಾಪ್ತಿಯಲ್ಲಿ ಬರುವ ನಿಗಮಗಳು, ಜಿಲ್ಲಾಡಳಿತದ ಅಧಿಕಾರಿಗಳು ಏನು ಕೆಲಸ ಮಾಡುತ್ತಿವೆ. ಬೆಳೆದ ಜೋಳವನ್ನು ಖರೀದಿಸಲು ಆಗದ ಸರ್ಕಾರ, ರೈತದ್ರೋಹಿ ಸರ್ಕಾರವಾಗಿದೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬೀಜ ಮಾರಾಟಗಾರರಿಗೆ ಬಹುಪರಾಖ್, ಜೋಳ ಬೆಳೆದವರಿಗೆ ಛಡಿ ಏಟು,
“ಜೋಳ ಬೆಳೆದ ರೈತರನ್ನು ಸರ್ಕಾರ ಅಪರಾಧಿಯೆಂಬಂತೆ ನೋಡುತ್ತಿದೆ. ಹಾಗಾದರೆ ಜಮೀನಿನಲ್ಲಿ ತನಗೆ ಇಷ್ಟ ಬಂದ ಬೆಳೆ ಬೆಳೆಯಲೂ ರೈತರಿಗೆ ಹಕ್ಕು ಇಲ್ಲವೇ ? ಪದೇ ಪದೆ ಜೋಳ ಖರೀದಿ ನಿರಾಕರಿಸುತ್ತಿರುವುದನ್ನು ಗಮನಿಸಿದರೆ, ಸರ್ಕಾರವೇನಾದರೂ ಖಾಸಗಿ ಹಿತಾಸಕ್ತಿಗಳಿಗೆ ಮಣಿದಿದೆಯೇ ಎನ್ನುವ ಅನುಮಾನ ಬರುತ್ತದೆ. ಹಾಗಾದರೆ ಜೋಳ ಬೆಳೆಯುವುದೇ ತಪ್ಪು ಎನ್ನುವಂತಾದರೆ, ಈ ಭಾಗದಲ್ಲಿ ಜೋಳದ ಬೀಜ ಮಾರಾಟಕ್ಕೆ ಯಾಕೆ ಅನುಮತಿ ನೀಡಿದ್ದೀರಿ ? ಕೃಷಿ ಇಲಾಖೆ ಹಾಗೂ ಆಹಾರ ಇಲಾಖೆಗೆ ಕನಿಷ್ಠ ಜ್ಞಾನ ಇಲ್ಲವೇ ? ರೈತರು ತಮಗಿಷ್ಟ ಬಂದ ಬೆಳೆ ಬೆಳೆಯುವ ಸ್ವಾತಂತ್ರ್ಯವನ್ನು ಕಿತ್ತಿಕೊಳ್ಳುವುದು ಯಾವ ನ್ಯಾಯ? ಎಂದು ರೈತರೊಬ್ಬರು ಪ್ರಶ್ನಿಸಿದ್ದಾರೆ.
‘ಎಲ್ಲ ಜೋಳವನ್ನು ಕಾಮಾಲೆ ಕಣ್ಣಿನಿಂದ ನೋಡುವುದು ಬೇಡ,
ಕಳೆದ ಬಾರಿ ಬೇರೆ ರಾಜ್ಯದಿಂದ ಒಂದಿಷ್ಟು ಜೋಳ ನಮ್ಮ ರಾಜ್ಯಕ್ಕೆ ಬಂದಿದ್ದು, ಆ ಜೋಳದಲ್ಲಿ ಗುಣಮಟ್ಟದ ಕೊರತೆ ಕಂಡುಬಂದು, ಅದು ಪ್ರಯೋಗಾಲಯದ ಪರಿಶೀಲನೆಯಲ್ಲಿ ಸಾಬೀತಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಬೆಳೆದ ಎಲ್ಲ ಜೋಳವನ್ನು ಅನುಮಾನದಿಂದ ಇಲ್ಲವೆ ಕಾಮಾಲೆ ಕಣ್ಣಿನಿಂದ ನೋಡುವ ಮೂಲಕ ರೈತರ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ. ಒಂದು ವೇಳೆ ಅಂತಹ ಜೋಳವನ್ನು ಪತ್ತೆ ಹಚ್ಚಲು ಸರ್ಕಾರದ ಬಳಿ ತಜ್ಞರಿಲ್ಲವೇ, ಪ್ರಯೋಗಾಲಯಗಳಿಲ್ಲವೇ, ಆ ರೀತಿ ಅನ್ಯ ರಾಜ್ಯದಿಂದ ಗುಣಮಟ್ಟವಿಲ್ಲದ ಜೋಳ ನಮ್ಮ ರಾಜ್ಯಕ್ಕೆ ಹೇಗೆ ಬಂದವು ? ಜಿಲ್ಲಾಡಳಿತ, ಸರ್ಕಾರ ಇದನ್ನು ತಡೆಯುವಲ್ಲಿ ಯಾಕೆ ಮುಂದಾಗಲಿಲ್ಲ ? ಸರ್ಕಾರ, ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ತಪ್ಪನ್ನು ರೈತರ ಮೇಲೆ ಹಾಕುತ್ತಿರುವುದಕ್ಕೆ ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ ? ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.