ನಮ್ಮ ಸಿಂಧನೂರು, ಜೂನ್ 11
ರಾಯಚೂರು ನಗರ, ದೇವದುರ್ಗ ತಾಲೂಕು ಹಾಗೂ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಈ ಕುರಿತು, ರಮೇಶ್.ಎಲ್.ನಾಯಕ್ ವಕೀಲರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿಯನ್ನು ವಿಚಾರಣೆ ನಡೆಸಿ, ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶ ಹೊರಡಿಸಿ, ಜುಲೈ 1ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ರಾಜ್ಯದಾದ್ಯಂತ ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಮರುಕಳುಹಿಸುತ್ತಿದ್ದು, ರಾಯಚೂರು, ಚಿತ್ರದುರ್ಗ, ತುಮಕೂರು ಇತ್ಯಾದಿ ಜಿಲ್ಲೆಯ ಜನರ ಅನುಕೂಲಕ್ಕಾಗಿ ಅಗತ್ಯ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದಿನಾಂಕ 11/06/2022, 10/11/2023 ಮತ್ತು 08/02/2024 ರಂದು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.
ರಾಯಚೂರು ಜಿಲ್ಲೆಯ ವಿವಿಧ ಪ್ರಕರಣ ಅರ್ಜಿಯಲ್ಲಿ ಪ್ರಸ್ತಾಪ
ಜೂನ್ ೨೦೨೨ರಲ್ಲಿ, ರಾಯಚೂರು ನಗರದಲ್ಲಿ ಕುಡಿಯುವ ನೀರು ಕಲುಷಿತಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿ, ಅನೇಕರು ಅಸ್ವಸ್ಥರಾಗಿದ್ದ ಘಟನೆ, ೨೦೨೩ರ ಮೇ ತಿಂಗಳಲ್ಲಿ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮ, ಲಿಂಗಸುಗೂರು ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಕಲುಷಿತ ನೀರಿನಿಂದ ಸಾವು-ನೋವು, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಜನರು ಬಾಧಿತರಾದ ಕುರಿತು ಹಾಗೂ ಜುಲೈ ೨೦೨೩ರಲ್ಲಿ ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಕಲುಷಿತ ಕುಡಿಯುವ ನೀರನ್ನು ಸೇವಿಸಿ ಆರು ಜನರು ಮೃತಪಟ್ಟು, ೧೮೦ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದ ಪ್ರಕರಣ, ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಸರ್ಕಾರವು ಮೃತ ಕುಟುಂಬಗಳಿಗೆ ಪರಿಹಾರ ನೀಡುವ ಮೂಲಕ ಕೈತೊಳೆದುಕೊಂಡಿದೆ. ಆದರೆ, ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸಲು ಪ್ರಯತ್ನಿಸಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಶುದ್ಧ ಕುಡಿಯುವ ನೀರು ನಾಗರಿಕರ ಮೂಲಭೂತ ಹಕ್ಕು
“ಜೀವದ ಹಕ್ಕು” ಅನ್ನು ಖಾತರಿಪಡಿಸುವ ಭಾರತದ ಸಂವಿಧಾನದ 21ನೇ ವಿಧಿಯು “ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಹಕ್ಕ”ನ್ನೂ ಒಳಗೊಂಡಿದೆ’’. ಆದರೆ ರಾಜ್ಯ ಸರ್ಕಾರ ಈ ಕುರಿತು ನಿರ್ಲಕ್ಷö್ಯ ತಾಳಿದೆ. ಕಲುಷಿತ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವ ವಿಷಯಗಳನ್ನು ಅರ್ಜಿಯಲ್ಲಿ ವಿವರಿಸಿರುವುದು ತಿಳಿದುಬಂದಿದೆ.
ಸೂಕ್ತ ನಿರ್ದೇಶನಕ್ಕೆ ಮನವಿ
ಪದೇ ಪದೆ ಮರುಕಳಿಸುವ “ಕುಡಿಯುವ ನೀರಿನ ಮಾಲಿನ್ಯ”ವನ್ನು ಪರಿಹರಿಸಲು ಸೂಕ್ತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಪ್ರಾರ್ಥಿಸಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ನೀರಿನ ಮೂಲಗಳನ್ನು ಆಗಾಗ್ಗೆ ಪರಿಶೀಲಿಸಲು, ಹಳೆಯ ಮುಖ್ಯ ನೀರು ಸರಬರಾಜು ಪೈಪ್‌ಲೈನ್‌ಗಳನ್ನು ಪರಿಶೀಲಿಸಲು ಮತ್ತು ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳಲ್ಲಿ ನಿರ್ದಿಷ್ಟ ದಿನಗಳಿಗೊಮ್ಮೆ ನೀರು ಸಂಗ್ರಹಣಾ ಸೌಲಭ್ಯಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನು ಕೋರಿದೆ.