ನಮ್ಮ ಸಿಂಧನೂರು, ಜೂನ್ 19
ಸಾರಿಗೆ ಬಸ್‌ನಲ್ಲಿ ಪ್ರಯಾಣದ ವೇಳೆ ತಮ್ಮ ಬಳಿಯಿದ್ದ 2 ಲಕ್ಷ 50 ಸಾವಿರ ರೂಪಾಯಿ ಹಣವನ್ನು ಸೀಟ್‌ನಲ್ಲಿ ಬಿಟ್ಟು ಮರೆತು ಹೋಗಿದ್ದ ಪ್ರಯಾಣಿಕರೊಬ್ಬರಿಗೆ, ಪುನಃ ಹಣ ಮರಳಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದ ಘಟನೆ ರಾಯಚೂರಿನಲ್ಲಿ ಮಂಗಳವಾರ ನಡೆದಿದೆ.
ಹುಬ್ಬಳ್ಳಿಯ ಡಿಪೋದ ಸಾರಿಗೆ ಬಸ್, ಮಾನ್ವಿ ಪಟ್ಟಣದ ಮೂಲಕ ರಾಯಚೂರಿಗೆ ಹೊರಟಿದೆ. ಈ ಸಂದರ್ಭದಲ್ಲಿ ಮಾನ್ವಿ ಪಟ್ಟಣದಲ್ಲಿ ಪ್ರಯಾಣಿಕರೊಬ್ಬರು ಹಣದೊಂದಿಗೆ ರಾಯಚೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾಯಚೂರಿನ ವಾಲ್ಮೀಕಿ ಸರ್ಕಲ್ ಬಳಿ ಬಸ್ ನಿಲುಗಡೆಯಾಗುತ್ತಿದ್ದಂತೆ ಪ್ರಯಾಣಿಕರು ಹಣವನ್ನು ಮರೆತು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲ ಪ್ರಯಾಣಿಕರು ಬಸ್‌ನಿಂದ ಇಳಿದ ನಂತರ ಸೀಟ್‌ವೊಂದರಲ್ಲಿ ಬಿಳಿ ಕವರ್ ಇರುವುದನ್ನು ನೋಡಿದ ನಿರ್ವಾಹಕ ಮತ್ತು ಚಾಲಕರು, ಆ ಕವರ್‌ನಲ್ಲಿ ಹಣ ಇರುವುದನ್ನು ಗಮನಿಸಿ, ಅದನ್ನು ತಮ್ಮ ಇಲಾಖೆಯ ಮೇಲಧಿಕಾರಿಯಾದ ಡಿಸ್ಟಿçಕ್ಟ್ ಕಂಟ್ರೋಲರ್ ಅವರಿಗೆ ತಲುಪಿಸಿದ್ದು, ತದನಂತರ ಹಣ ಬಿಟ್ಟು ಹೋದ ಪ್ರಯಾಣಿಕರನ್ನು ಪತ್ತೆಹಚ್ಚಿ ಪುನಃ ಅವರಿಗೆ ಹಣ ಮರಳಿಸಲಾಯಿತು.
ಪ್ರಯಾಣಿಕರು ಮರೆತು ಬಸ್‌ನಲ್ಲಿ ಬಿಟ್ಟು ಹೋದ ಹಣವನ್ನು ಪುನಃ ಮರಳಿಸಲು ಕಾರಣರಾದ ಹುಬ್ಬಳ್ಳಿ ಡಿಪೋದ ಬಸ್‌ನ ಚಾಲಕರಾದ ಹನುಮಂತರಾಯ ಹಾಗೂ ನಿರ್ವಾಹಕರಾದ ಮಂಜುನಾಥ ಅವರ ಕರ್ತವ್ಯ ಪ್ರಜ್ಞೆ, ಮಾನವೀಯತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.