ನಮ್ಮ ಸಿಂಧನೂರು, ಎಪ್ರಿಲ್ 27
ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಮಾಜಿ ಸಂಸದ ಹಾಗೂ ಕಾಂಗ್ರೆಸ್ನ ಹಿರಿಯ ರಾಜಕಾರಣಿ ಎಚ್.ಜಿ.ರಾಮುಲು ಅವರನ್ನು ಅವರ ಗಂಗಾವತಿ ನಿವಾಸದಲ್ಲಿ ಶನಿವಾರ ಭೇಟಿಯಾಗುವ ಮೂಲಕ ಉಭಯಕುಶಲೋಪರಿ ವಿಚಾರಿಸುವ ಮೂಲಕ ಕೆಲವೊತ್ತು ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು. ಕೊಪ್ಪಳ ಲೋಕಸಭೆ ಚುನಾವಣೆಗೆ ಇನ್ನೇನು ೧೦ ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದು 2ನೇ ಹಂತದ ಚುನಾವಣೆಗೆ ಭರದ ಸಿದ್ಧತೆ ನಡೆದಿರುವ ಬೆನ್ನಲ್ಲೇ ಹಿರಿಯ ರಾಜಕಾರಣಿಯನ್ನು ಹರಿಪ್ರಸಾದ ಅವರು ಭೇಟಿಯಾಗಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದರಾಗಿ ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಕ್ಷೇತ್ರದಲ್ಲಿ ತಮ್ಮದೇ ರಾಜಕೀಯ ಹಿಡಿತ ಹೊಂದಿರುವ ಎಚ್.ಜಿ.ರಾಮುಲು ಅವರನ್ನು ಹರಿಪ್ರಸಾದ್ ಅವರು ಭೇಟಿಯಾಗುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆಂದೇ ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಮ್ಮೆಲ್ಸಿ ಎಚ್.ಆರ್.ಶ್ರೀನಾಥ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗ ವಿಭಾಗ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮುಷ್ಟೂರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರೆ ಶೈಲಜಾ ಹಿರೇಮಠ್, ಕಾಂಗ್ರೆಸ್ ಯುವ ಮುಖಂಡರಾದ ಹನುಮಂತಪ್ಪ ಅರಸಣಿಕೆರಿ, ಮಹೇಶ್ ಸಾಗರ್, ಕೃಷ್ಣಪ್ಪ ನಾಯಕ್, ಹನುಮಂತರಾಯಪ್ಪ, ಗಾಳೆಪ್ಪ ಸೇರಿದಂತೆ ಅನೇಕ ಮುಖಂಡರು ಇದ್ದರು.