ಕಾರ್ಪೊರೇಟ್ ಕೋಮುವಾದಿ ಫ್ಯಾಸಿಸ್ಟ್ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಸಿಪಿಐ(ಎಂಎಲ್‌) ಮಾಸ್‌ಲೈನ್ , ಎಮ್ಎಲ್‌ಪಿಐ(ರೆಡ್‌ ಫ್ಲ್ಯಾಗ್‌) ಜಂಟಿ ಕರೆ

Spread the love

ನಮ್ಮ ಸಿಂಧನೂರು, ಏಪ್ರಿಲ್‌ 18
2024ರ ಲೋಕಸಭಾ ಚುನಾವಣೆಯಲ್ಲಿ ಕಾರ್ಪೋರೇಟ್ ಕೋಮುವಾದಿ ಫ್ಯಾಸಿಸ್ಟ್ ನೇತೃತ್ವದ ಬಿಜೆಪಿಯನ್ನು ಸೋಲಿಸಿ, ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಗೆಲ್ಲಿಸಿ, ದೇಶದ ಸಾರ್ವಭೌಮತ್ವ, ಸಂವಿಧಾನ, ಪ್ರಜಾತಂತ್ರವನ್ನು ರಕ್ಷಿಸಬೇಕೆಂದು ಮತದಾರರಿಗೆ ಸಿಪಿಐ(ಎಂಎಲ್‌) ಮಾಸ್‌ಲೈನ್‌ ನ ರಾಜ್ಯ ಕಾರ್ಯದರ್ಶಿ ಡಿ.ಎಚ್‌.ಪೂಜಾರ್ ಹಾಗೂ ಎಮ್‌ಎಲ್‌ಪಿಐ (ರೆಡ್ ಫ್ಲಾಗ್‌) ನ ರಾಜ್ಯ ಕಾರ್ಯದರ್ಶಿ ಬಿ.ಬಸವಲಿಂಗಪ್ಪ ಕರೆ ನೀಡಿದರು. ರಾಯಚೂರಿನ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿವರು ಈ ಬಾರಿಯ ಲೋಕಸಭೆಗೆ 400 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಜನರ ತೀರ್ಪಿಗಿಂತ ಮುಂಚೆ ತಾವೆ ತೀರ್ಪು ಘೋಷಿಸಿಕೊಳ್ಳುವುದು ಫ್ಯಾಸಿಸ್ಟ್ ಸರ್ವಾಧಿಕಾರದ ದೋರಣೆಯಲ್ಲವೆ ? ಅವರು ಚುನಾವಣೆ ಆಯೋಗ, ಇಡಿ,ಐಟಿ ಹಾಗೂ ಸಿಬಿಐ ಇತರೆ ಸರ್ಕಾರಿ ಯಂತ್ರಾಂಗಳನ್ನು ಬಳಸಿಕೊಂಡು ಮತ್ತು ಹಣದ ಹೊಳೆ ಹರಿಸಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸುಳ್ಳು ಮತ್ತು ದ್ವೇಷದ ಫ್ಯಾಕ್ಟರಿಯಿಂದ ಅನೇಕ ಸಶಸ್ತçಗಳನ್ನು ಉತ್ಪಾದಿಸಿಕೊಂಡು ಚುನಾವಣೆಗೆ ಸಿದ್ಧಗೊಂಡಿದ್ದಾರೆ. 2019ರ ಚುನಾವಣೆಯಲ್ಲಿ ಪುಲ್ವಾಮಾ ಘಟನೆಯನ್ನು ಮುಂದಿಟ್ಟುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿ ಮತದಾರರನ್ನು ಮೋಡಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ವಾಧಿಕಾರಿ ಧೋರಣೆ:
ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಿಗೆ ನ್ಯಾಯಯುತವಾಗಿ ಕೊಡಬೇಕಾದ ತೆರಿಗೆ ಪಾಲಿನ ಹಣ ಕೊಡದೇ ಕೇಂದ್ರ ಆರ್ಥಿಕ ಸರ್ವಾಧಿಕಾರ ನಡೆಸಿದೆ. ಜಾರ್ಖಂಡ್ ಮತ್ತು ದೆಹಲಿ ಮುಖ್ಯಮಂತ್ರಿಗಳನ್ನು ಬಂಧಿಸಿ ಮತ್ತು ಕೆಲವು ಪಕ್ಷಗಳ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಿ ಪ್ರಜಾತಂತ್ರದ ಕತ್ತನ್ನು ಹಾಡಹಗಲೇ ಕೊಯ್ದಿದ್ದಾರೆ. ಆದರೆ, ೨೦೨೪ರ ಚುನಾವಣೆ ಅವರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುತ್ತವೆ. ಏಕೆಂದರೆ ಇತಿಹಾಸದಲ್ಲಿ ಜನರನ್ನು ಸುಲಿಗೆ ಮಾಡುವ ಶತ್ರುಗಳು ಯಾರೂ ಹೆಚ್ಚಿನ ಕಾಲಾವಧಿ ಅಧಿಕಾರದಲ್ಲಿ ಉಳಿದಿಲ್ಲ ಎಂದು ಎಚ್ಚರಿಸಿದರು.
ಜಗತ್ತಿನಲ್ಲಿ ದೊಡ್ಡದಾದ ಚುನಾವಣೆ ಬಾಂಡ್ ಹಗರಣ
ಚುನಾವಣೆಯಲ್ಲಿ ಪಾರದರ್ಶಕತೆ ತರುವ ನೆಪದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕಾಯ್ದೆಗೆ ಕೇಂದ್ರ ಸರ್ಕಾರ ೨೦೧೮ ರಲ್ಲಿ ತಿದ್ದುಪಡಿ ತಂದಿತ್ತು. ಈ ಹಿಂದೆ ಯಾವುದೇ ಕಂಪನಿ ಮತ್ತು ಉದ್ಯಮಿದಾರರು ಮೂರು ವರ್ಷಗಳ ಲಾಭದಲ್ಲಿ ಶೇ.7 ರಷ್ಟು ಹಣವನ್ನು ದೇಣಿಗೆ ಕೊಡಬಹುದಾಗಿತ್ತು. ತಿದ್ದುಪಡಿ ಕಾಯ್ದೆಯ ನಂತರ ನಷ್ಟದಲ್ಲಿದ್ದ ಕಂಪನಿಗಳು ಕೂಡ ಚುನಾವಣೆ ಬಾಂಡ್ ಕೊಡಬಹುದು. ಈ ಅವಕಾಶವನ್ನು ಬಳಸಿಕೊಂಡ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಸರ್ಕಾರಕ್ಕೆ ನಷ್ಟ ತೋರಿಸಿ (ತಮ್ಮ ಲಾಭವನ್ನು ಬೇನಾಮಿ ಹೆಸರಿನ ಶೆಲ್ ಕಂಪನಿಗೆ ವರ್ಗಾಯಿಸಿ) ಲಕ್ಷಾಂತರ ಕೋಟಿ ರೂ.ಸಾಲ ಮನ್ನಾ ಮಾಡಿಸಿಕೊಂಡು ಬಿಜೆಪಿಗೆ ೮,೨೫೦ ಕೋಟಿ ರೂ ಬೆಲೆಯ ಬಾಂಡ್ ಕೊಟ್ಟಿವೆ. ಈ ಹಗಲು ದರೋಡೆಯ ವಿರುದ್ಧ ಖ್ಯಾತ ವಕೀಲರಾದ ಪ್ರಶಾಂತ ಭೂಷಣ ಮತ್ತು ಇತರರು ಸತತ ೫ ವರ್ಷಗಳವರೆಗೆ ಕಾನೂನ ಹೋರಾಟ ನಡೆಸಿದರು. ಚುನಾವಣೆ ಬಾಂಡ್ ವ್ಯವಹಾರ ಅಸಂವಿಧಾನಿಕವೆಂದು ವ್ಯಾಖ್ಯಾನಿಸಿದ ಸುಪ್ರೀಂಕೋರ್ಟ್ “ಫೆಬ್ರುವರಿ ತಿಂಗಳಲ್ಲಿ” ಐತಿಹಾಸಿಕ ತೀರ್ಪು ನೀಡಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿತು. ಕಾಂಗ್ರೆಸ್ ನೇತೃತ್ವದ ಯುಪಿಎ ೨ ಸರ್ಕಾರದ ಅವಧಿಯಲ್ಲಿ, ೨ ಜಿ ಸ್ಪೆಕ್ಟ್ರಂ ಯೋಜನೆ ಜಾರಿಯಾದರೆ ಸರ್ಕಾರಕ್ಕೆ ೧.೭೦ ಲಕ್ಷ ಕೋಟಿ ತೆರಿಗೆ ವಂಚನೆಯಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಈ ಹಗರಣದ ವಿರುದ್ಧ ದೇಶದ ಜನರು ಮತ್ತು ಅಣ್ಣಾ ಹಜಾರೆ ನೇತೃತ್ವದದಲ್ಲಿ ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಿದರು. ಮಾಧ್ಯಮಗಳು ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದವು. ಈ ಕಾರಣದಿಂದ ಯುಪಿಎ ನೇತೃತ್ವದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಚುನಾವಣೆ ಬಾಂಡ್ ಹಗರಣ ೨ ಜಿ ಹಗರಣಕ್ಕಿಂತ ೨೦ ಪಟ್ಟು ದೊಡ್ಡದಾಗಿದೆ. ಕಾರಣವೇನೆಂದರೆ ಸಾವಿರಾರು ಕೋಟಿ ಬೆಲೆಯ ಬಾಂಡ್‌ಗಳನ್ನು ಬಿಜೆಪಿಗೆ ಕೊಟ್ಟಿರುವ ಪ್ರಮುಖ ೩೦ ಕಂಪನಿಗಳು. ರಾಷ್ಟ್ರೀಯ ಕಾರಿಡಾರ್, ರಸ್ತೆ, ರೇಲ್ವೆ, ವಿಮಾನಯಾನ, ಬಂದರು ನಿರ್ಮಾಣ ಮತ್ತು ಕಲ್ಲಿದ್ದಲು ಇತರೆ ಗಣಿಗಾರಿಕೆ ಗುತ್ತಿಗೆ ಪಡೆದು ಹತ್ತಾರು ಲಕ್ಷ ಕೋಟಿ ರೂ. ಸಾರ್ವಜನಿಕ ತೆರಿಗೆ ಹಣವನ್ನು ನುಂಗಿ ಹಾಕಿವೆ ಎಂದು ಆಪಾದಿಸಿದರು. ಪರಿಸರ, ಅರಣ್ಯ ಸಂರಕ್ಷಣೆ ಮಾಡುವ ಕಾಯ್ದೆಗೆ ತಿದ್ದುಪಡಿ ತಂದು, ನಿಸರ್ಗವನ್ನು ನಾಶ ಮಾಡಲು ಕಂಪನಿಗಳಿಗೆ ಹಸಿರು ನಿಶಾನೆ ತೋರಲಾಗಿದೆ. ಕೈಗಾರಿಕೆ ನೆಪದಲ್ಲಿ ರೈತರ ಭೂಮಿ ಕಿತ್ತಿಕೊಳ್ಳುವುದು ಸೇರಿದಂತೆ ದೇಶದ ಸಂಪತ್ತನ್ನು ಲೂಟಿ ಮಾಡಲು ಕಂಪನಿಗಳಿಗೆ ಅಧಿಕಾರ ನೀಡಲಾಗಿದೆ. ಹಾಗಾಗಿ ಬಾಂಡ್ ಖರೀದಿ ಕೇಂದ್ರ ಸರ್ಕಾರದ ಹಫ್ತಾ ವಸೂಲಿ ವ್ಯವಹಾರವಾಗಿದೆ. ಎಸ್‌ಬಿಐ ಮೋದಿ ಸರ್ಕಾರವನ್ನು ಬಚಾವ್ ಮಾಡಲು ಪ್ರಾರಂಭದಲ್ಲಿ ಡ್ರಾಮಾ ಪ್ರಾರಂಭಿಸಿತ್ತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಹಗರಣ ಬಯಲುಗೊಂಡಿದೆ. ಆದರೂ ಇನ್ನೂ ಮುಖ್ಯವಾದ ಮಾಹಿತಿಯನ್ನು ಮುಚ್ಚಿಟ್ಟು ಮೋದಿ ಸರ್ಕಾರವನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ.


ಕಾರ್ಪೊರೇಟ್ ಕಿಂಗ್‌ನ ಅಲೆಯಲ್ಲಿ ಚುನಾವಣೆ ಗೆಲ್ಲುವ ಭ್ರಮೆ
ಮೋದಿಯವರಿಗೆ ಕುಟುಂಬ ಇಲ್ಲವೆಂದು; ತ್ಯಾಗಿ, ಯೋಗಿ ಇತ್ಯಾದಿ ಬಿರುದುಗಳಿಂದ ಮಾಧ್ಯಮಗಳು ಅವರನ್ನು ವೈಭವೀಕರಿಸುತ್ತಿವೆ ಮತ್ತು ದೇಶದ ಒಂದು ಸಣ್ಣ ವರ್ಗದ ಜನರನ್ನು ನಂಬಿಸಲಾಗಿದೆ. ಅದಾನಿ, ಅಂಬಾನಿ ಇತರೆ ಕಾರ್ಪೋರೇಟ್ ಕುಟುಂಬವೇ ಮೋದಿಯವರ ಅವಿಭಕ್ತ ಕುಟುಂಬವಾಗಿದೆ. ಈ ಕಾರಣದಿಂದಲೇ ಕಳೆದ 10 ವರ್ಷಗಳಿಂದ ದೇಶದ ರೈತರ ಭೂಮಿ ಸೇರಿದಂತೆ ಸಾರ್ವಜನಿಕ ಸಂಪತ್ತು ಅದಾನಿ, ಅಂಬಾನಿ ಇತರೆ ಕಾರ್ಪೋರೇಟ್ ಕಂಪನಿಗಳ ವಶವಾಗುತ್ತಿದೆ. ೨೦೧೪ರಲ್ಲಿ ಅದಾನಿ ಸಂಪತ್ತು 80 ಸಾವಿರ ಕೋಟಿ, ಅಂಬಾನಿ ಸಂಪತ್ತು 1.15 ಲಕ್ಷ ಕೋಟಿ. 2024 ವರದಿಗಳ ಪ್ರಕಾರ ಅದಾನಿ ಸಂಪತ್ತು 15 ಲಕ್ಷ ಕೋಟಿ ಮತ್ತು ಅಂಬಾನಿ ಸಂಪತ್ತು 17 ಲಕ್ಷ ಕೋಟಿಯಾಗಿದೆ. ಒಂದು ಕಡೆ ಇವರ ಸಂಪತ್ತು 15ಪಟ್ಟು ಹೆಚ್ಚಾದರೆ ಇನ್ನೊಂದು ಕಡೆ ದೇಶದ ಸಾಲ ಕಳೆದ 10 ವರ್ಷಗಳ (2014ರಲ್ಲಿ ದೇಶ ಸಾಲ 53 ಲಕ್ಷ ಕೋಟಿ)ಲ್ಲಿ 150 ಲಕ್ಷ ಕೋಟಿಗೆ ಹೇರಿಕೆಯಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ವಿಶ್ವ ಬ್ಯಾಂಕಿಗೆ ೯ ರಿಂದ ೧೧ ಲಕ್ಷ ಕೋಟಿ ಬಡ್ಡಿ ಸಂದಾಯ ಮಾಡುತ್ತಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಹೇರಿಕೆ, ನಿರುದ್ಯೋಗ, ಬಡತನ ಸಾಮಾಜಿಕ ಅಸಮಾನತೆ ನಿಯಂತ್ರಿಸಲಾಗದಷ್ಟು ಮಿತಿ ಮೀರಿದೆ. ಆದರೆ ವಿಕಸಿತ ಭಾರತ ಘೋಷಣಿಯೊಂದಿಗೆ ತಮಗೆ ತಾವೆ ವಿಶ್ವಗುರು ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ 5 ತಿಂಗಳಿಂದ ದೇಶದ ಜನರಿಗೆ ಉದ್ಯೋಗ ಖಾತ್ರಿ ಕೂಲಿ ಕೊಟ್ಟಿಲ್ಲ. ರಾಜ್ಯದ ಜನರು ಬರದಿಂದ ತೀವ್ರ ಸಂಕಷ್ಟಕ್ಕಿಡಾಗಿದ್ದರೂ ಬರ ಪರಿಹಾರ ಕೊಡದೇ ತಾರತಮ್ಯ ಮಾಡಲಾಗುತ್ತಿದೆ. ದುಡಿಯುವ ಜನರು ಹಸಿವು, ಬಡತನ, ಅನಾರೋಗ್ಯ, ಸಾಲದ ಸುಳಿಯಲ್ಲಿ ನರಳುತ್ತಿದ್ದರೆ, ಬಿಜೆಪಿಯವರು ಕಾರ್ಪೋರೇಟ್ ಕಿಂಗ್ ಮೋದಿಯವರ ಅಲೆಯಲ್ಲಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ.
1999-2019 ಸಿಪಿಐಎಂಲ್ ಸ್ಪರ್ಧೆ
1999 ರಿಂದ 2019ರ ವರೆಗೆ ಕೊಪ್ಪಳ, ರಾಯಚೂರು, ಕೊಡಗು, ಚಿಕ್ಕಮಗಳೂರು, ಬಳ್ಳಾರಿ ಲೋಕಸಭೆಗೆ ಸಿಪಿಎಂಎಲ್ ಸ್ಪರ್ಧೆವೊಡ್ಡಿ ಚುನಾವಣೆ ಹೋರಾಟ ನಡೆಸಿತ್ತು. ಕೊಪ್ಪಳ ಲೋಕಸಭೆಯ ಅಭ್ಯರ್ಥಿಯಾಗಿದ್ದ ಕಾಂ.ಡಿ.ಹೆಚ್.ಪೂಜಾರ 1999ರಲ್ಲಿ 17ಸಾವಿರ ಹಾಗೂ 2004ರಲ್ಲಿ 24 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದ ಕಾಂ.ಬಿ.ಬಸವಲಿಗಪ್ಪ 1999ರಲ್ಲಿ 38 ಸಾವಿರ 2004 ರಲ್ಲಿ 57 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಕೋಮುವಾದಿ ಫ್ಯಾಸಿಸ್ಟರನ್ನು ಸೋಲಿಸುವ ಮತ್ತು ದೇಶದ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ಸಿಪಿಐ (ಎಂಎಲ್) ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಯುವಜನರು, ರೈತ ಕಾರ್ಮಿಕರು, ಮಹಿಳೆಯರು ಸೇರಿದಂತೆ ಸಮಸ್ತ ದುಡಿಯುವ ಜನತೆ ಬಿಜೆಪಿ ಆರ್.ಎಸ್.ಎಸ್.ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಿ, ಇಂಡಿಯಾ ಮೈತ್ರಿ ಕೂಟದ ಪಕ್ಷಗಳನ್ನು ಗೆಲ್ಲಿಸಿ, ದೇಶದ ಸಂವಿಧಾನ ಪ್ರಜಾತಂತ್ರವನ್ನು ರಕ್ಷಿಸಬೇಕೆಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಂಟಿ ಪಕ್ಷಗಳ ಪದಾಧಿಕಾರಿಗಳು ಹಾಜರಿದ್ದರು.


Spread the love

Leave a Reply

Your email address will not be published. Required fields are marked *