ಬಹುತ್ವ, ಏಕತ್ವಗಳ ಬಂಧುತ್ವವೇ ನಿಜವಾದ ಭಾರತ

Spread the love

ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಸ್ವೀಕರಿಸಿರುವ ನಾವುಗಳು ಜಾತ್ಯತೀತತೆ ಮತ್ತು ಸೌಹಾರ್ದತೆ ಕೇವಲ ಹೊಂದಾಣಿಕೆಯಲ್ಲ, ಅದು ಸಮಾನತೆ ಮತ್ತು ಸಹಿಷ್ಣುತೆಯಿಂದ ಕೂಡಿರಬೇಕು. ಅಂದರೆ ಮಾತ್ರ ಇಬ್ಬರ ಮಧ್ಯದಲ್ಲಿ ಸಮಾನತೆಯ ಭಾವ ಮತ್ತು ಸಹಿಷ್ಣುತೆಯ ಭಾವ ಬರುತ್ತದೆ. ಜಾತ್ಯತೀತ ಸಮಾನತೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸಿದ ಬಹುದೊಡ್ಡ ಪರಂಪರೆ ಭಾರತದಲ್ಲಿದೆ. ಸುಭಾಶ್ಚಂದ್ರ ಬೋಸ್, ಅಂಬೇಡ್ಕರ್, ಭಗತ್‌ಸಿಂಗ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಹೀಗೆ ಹಲವಾರು ಪ್ರಮುಖರು ಧರ್ಮ ಸಹಿಷ್ಣುತೆಯನ್ನು ಕಾಪಾಡಿದ್ದಾರೆ ಮತ್ತು ಕಟ್ಟಿದ್ದಾರೆ.
೭೦ರ ದಶಕದಲ್ಲಿ ಪ್ರಗತಿಪರ ಸಂಘಟನೆಗಳು ಸಮಾನತೆಯ ಬಗ್ಗೆ ಮಾತನಾಡುತ್ತಿದ್ದವು. ಆ ಆದ್ಯತೆಗಳು ಪಲ್ಲಟವಾಗಿರುವುದರಿಂದ ಈಗ ಸಮಾನತೆಯ ಬದಲಾಗಿ ಸೌಹಾರ್ದತೆಯ ಬಗ್ಗೆ ಮಾತನಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಮಾನತೆಯ ಬಗ್ಗೆ ಮಾತನಾಡಿದರೆ ಅಸಮಾನತೆ ಇದೆ ಎಂದರ್ಥ, ಸೌಹಾರ್ದತೆಯ ಬಗ್ಗೆ ಮಾತನಾಡುವ ಅನಿವಾರ್ಯತೆ ಎದುರಾಗಿದ್ದಾರೆ ಸೌಹಾರ್ದತೆಗೆ ಧಕ್ಕೆಯಾಗಿದೆ ಎಂದು ಬೇರೆ ಹೇಳಬೇಕಿಲ್ಲ. “ಸರ್ವೇಜನ ಸುಖೀನೋ ಭವಂತು” ಎಂದರೆ ಸರ್ವರೂ ಸುಖವಾಗಿಲ್ಲ ಎಂದು ಅರ್ಥೈಸಬೇಕೇನೋ ?
ಧಾರ್ಮಿಕ ಮೂಲಭೂತವಾದ ಮಾನವತಾವಾದವನ್ನು ನುಂಗುತ್ತಿದೆ. ದ್ವೀಪಗಳನ್ನು ದಾಟಿ ದೀಪವಾಗಿ ಪ್ರಜ್ವಲಿಸುವುದು ಮಾನವತಾವಾದ. ಎಲ್ಲ ಮೂಲಭೂತವಾದ ದ್ವೇಷಗಳನ್ನು ಕಟ್ಟುವ ದ್ವೀಪವಾಗುತ್ತಿದೆ. ಹೀಗಾಗುವುದರಿಂದ ಮನುಷ್ಯ ಕೂಪಮಂಡೂಕನಾಗುತ್ತಾನೆ. ಇದನ್ನೆ ಸ್ವಾಮಿ ವಿವೇಕಾನಂದರು ಅಮೆರಿಕಾದ ಧರ್ಮ ಸಮ್ಮೇಳನಕ್ಕೆ ಹೋದಾಗ ಧಾರ್ಮಿಕ ಸಂಕುಚಿತ ಮನೋಭಾವನೆಯನ್ನು ಪ್ರಸ್ತಾಪಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿಯಾಗಿದೆ. ಧರ್ಮ ಮತ್ತು ದೇವರ ದುರುಪಯೋಗ ಎಗ್ಗಿಲ್ಲದೇ ನಡೆದಿದೆ. ಅತಿಹೆಚ್ಚು ಶೋಷಣೆಗೊಳಗಾದವರು ದೇವರೇ ಎಂದು ಹೇಳಬೇಕಾದ ಪರಿಸ್ಥಿತಿ ಬಂದಿದೆ. ಯಾವುದೇ ಕಾರಣಕ್ಕೂ ಧರ್ಮದ ಹೆಸರಿನಲ್ಲಿ ಮೂಢತೆಯನ್ನು ಬಿತ್ತುವುದು ಮತ್ತೊಂದು ಧರ್ಮವನ್ನು ದ್ವೇಷಿಸುವುದು ಸರಿಯಾದ ಮಾರ್ಗವನ್ನು ತೋರಿಸಲಾರದು. “ಯಾವುದೇ ಒಂದು ದೇಶÀವನ್ನು ನಾಶಮಾಡಬೇಕೆಂದು ಇಚ್ಛಿಸಿದರೆ, ಆ ದೇಶದ ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ಪರಸ್ಪರ ಸಂಘರ್ಷ ಉಂಟುಮಾಡಿದರೆ ಸಾಕು ತನ್ನಷ್ಟಕ್ಕೆ ತಾನೇ ಆ ದೇಶ ಛಿದ್ರವಾಗುತ್ತದೆ” ಎಂದು ಟಾಲ್‌ಸ್ಟಾಯ್ ಪ್ರತಿಪಾದಿಸಿದ್ದಾರೆ.
ಮನುಷ್ಯನಿಗೆ ಕರುಳು ಇರಬೇಕು. ಕರುಳು ಇದ್ದವನಿಗೆ ಮಾತ್ರ ಕಿವಿ, ಕಣ್ಣು ಕಾಣಿಸಲು ಸಾಧ್ಯವಾಗುತ್ತದೆ. ಆ ಮೂಲಕ ಪ್ರಜಾಪ್ರಭುತ್ವ ಉಳಿಯುತ್ತದೆ. ಇಂದಿನ ರಾಜಕೀಯ ನಾಯಕರಿಗೆ ಕೇವಲ ನಾಗರ ನಾಲಿಗೆ ಮಾತ್ರ ಹಿಗ್ಗಾಮುಗ್ಗಾ ಹರಿದಾಡುತ್ತದೆ. ಅವರು ತಮ್ಮ ಸ್ಥಾನದ ಘನತೆ, ಗೌರವ, ಪ್ರಜಾಪ್ರಭುತ್ವ, ಸಂವಿಧಾನದ ಘನತೆ, ವಿಧಾನಸಭೆಯ ಗೌರವದ ಬಗ್ಗೆ ಯೋಚಿಸಿದಂತೆ ಕಾಣುತ್ತಿಲ್ಲ. ೧೯೫೦ರಲ್ಲಿ ನೆಹರೂ ಅವರು ನವ ಭಾರತ ಕಟ್ಟುವುದು ಅವಶ್ಯಕತೆ ಇದೆಯೆಂದು ಹೇಳಿದ್ದರು. ೧೯೫೧ರಲ್ಲಿ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಭಾರತದ ಪ್ರಥಮ ಸೇವಕ ಎಂದು ಹೇಳಿಕೊಂಡರು.
ಆದರೆ ಇತ್ತೀಚಿನ ರಾಜಕಾರಣಿಗಳು ಪಕ್ಷದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಯುದ್ಧೋತ್ಪಾದನೆ ಸೃಷ್ಟಿಸುತ್ತಿದ್ದಾರೆ. ಅದರಿಂದ ದ್ವೇಷೋತ್ಪಾದನೆಯೂ ಜನ್ಮತಾಳಿದೆ. ಧಾರ್ಮಿಕ ನಾಯಕರೆನಿಸಿಕೊಂಡವರ ಕೆಲ ರಾಜಕಾರಣಿಗಳ ದ್ವೇಷ ಭಾಷಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯ ಇಂತಹ ಸಂದರ್ಭದಲ್ಲಿ ಸ್ವಯಂಪ್ರೇರಣೆಯಿAದ ಪ್ರಕರಣ ದಾಖಲಿಸುವಂತೆ ಸರ್ಕಾರಗಳಿಗೆ ಸೂಚನೆ ನೀಡಿದೆ. ಮಾತಿಗೆ ಕನ್ನಡ ಸಾಹಿತ್ಯದಲ್ಲಿ ವಿಶೇಷ ಮಹತ್ವವಿದೆ. ವಚನಕಾರರು ಮಾತಿಗೆ “ಮಾತೆಂಬುದು ಜ್ಯೋತಿರ್ಲಿಂಗ” ಎಂದಿದ್ದಾರೆ. ಪ್ರತಿಯೊಬ್ಬರೂ ತಾವು ಮಾತನಾಡುವ ಮುಂಚೆ ವಿವೇಕ ಇಟ್ಟುಕೊಳ್ಳಬೇಕಾದದ್ದು ಅಗತ್ಯವಾಗಿದೆ.
ಸ್ವಚ್ಛ ಭಾರತದ ಬಗ್ಗೆ ನನಗೆ ವಿರೋಧವಿಲ್ಲ. ಪರಿಸರ, ಆರೋಗ್ಯದ ದೃಷ್ಟಿಯಿಂದ ಬೀದಿ ಭಾರತ ಸ್ವಚ್ಛವಾಗಬೇಕು. ಆದರೆ, ಬೀದಿ ಭಾರತಕ್ಕಿಂತ ಭಾವ ಭಾರತ ಸ್ವಚ್ಛವಾಗಬೇಕಾಗಿರುವುದು ಜರೂರಿದೆ. ಸ್ವಚ್ಛ ಭಾರತದ ಬಗ್ಗೆ ಮಹಾತ್ಮ ಗಾಂಧಿ ಅವರು ತುಮಕೂರಿಗೆ ಬಂದಾಗ ಮಾತನಾಡಿದ್ದು, ನನಗೆ ನೆನಪಿದೆ. ಇತ್ತೀಚೆಗೆ ಬಹುತ್ವ ನಾಶಮಾಡುವ ಪ್ರಯತ್ನ ನಡೆಯುತ್ತಿದೆ. ಬಹುಸಂಸ್ಕೃತಿ, ಬಹು ಆಹಾರ ಪದ್ಧತಿ, ಬಹು ಆಚರಣೆಗಳು, ಭಾರತದ ವೈಶಿಷ್ಟö್ಯ ಇವುಗಳನ್ನೇ ನಾಶಪಡಿಸಲು ಪ್ರಯತ್ನಿಸಿದರೆ ಭಾರತದ ವಿಶೇಷತೆಯೇ ನಾಶವಾದಂತೆ. ಹಾಗಾಗಿ ನಾವು ಮೇಲ್ನೋಟದಲ್ಲಿ ಮನುಷ್ಯರಾಗಿ ಕಾಣುತ್ತಿದ್ದೇವೆ. ಆಂತರ್ಯದಲ್ಲಿ ಹುಲಿ, ಚಿರತೆ ಹಾಗೂ ಸಿಂಹದ ಮನಸ್ಥಿತಿಗಳಿವೆ. ಇವುಗಳನ್ನು ನಾಶಪಡಿಸದಿದ್ದರೆ, ಮಾನವೀಯತೆ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಬಹುತ್ವ ಮತ್ತು ಏಕತ್ವಗಳ ಬಂಧುತ್ವವೇ ನಿಜವಾದ ಭಾರತವಾಗಿದೆ. ಇದನ್ನು ಕಾಪಾಡಿದರೆ ಮಾತ್ರ ಸೌಹಾರ್ದತೆ ಉಳಿಯುತ್ತದೆ.
ಸಂವಿಧಾನ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಎಸ್.ರಾಧಾಕೃಷ್ಣ ಅವರು ಭಿನ್ನಾಭಿಪ್ರಾಯವನ್ನು ಹೊಂದಿದವರು. ಇಬ್ಬರು ಹೇಳಿದ್ದು, “ಈ ದೇಶದಲ್ಲಿ ಎಲ್ಲ ಧರ್ಮಗಳನ್ನು ಸಮಾನತೆಯಿಂದ ಕಾಣಬೇಕು. ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರö್ಯ ಇರಬೇಕು, ಹಾಗೆಯೇ ಅಶ್ಪಾಕ್‌ವುಲ್ಲಾ ಖಾನ್ ಮುಸ್ಲೀಮರಾದರೆ ಮತ್ತು ರಾಮ್‌ಪ್ರಸಾದ್ ಬಿಸ್ಮಿಲ್ಲಾ ಬ್ರಾಹ್ಮಣರಾಗಿದ್ದರೂ ಆದರೆ ಇಬ್ಬರೂ ಸೋದರರಂತಿದ್ದರು. ಸ್ವಾತಂತ್ರö್ಯ ಹೋರಾಟಗಾರರಾದ ಇವರನ್ನು ಬ್ರಿಟಿಷರು ಏಕಕಾಲಕ್ಕೆ ಗಲ್ಲಿಗೇರಿಸಿದರು. ಸಾವಿತ್ರಿಭಾಯಿ ಫುಲೆ ಮತ್ತು ಫಾತೀಮಾ ಶೇಖ್ ಇಬ್ಬರೂ ಭಾರತದ ಶಿಕ್ಷಣದ ರೂವಾರಿಗಳು. ಹೀಗೆ ಇಂತಹ ಹಲವಾರು ಪರಂಪರೆಗಳು ಭಾರತೀಯರಿಗೆ ಸೌಹಾರ್ದದ ದೃಷ್ಟಿಯಿಂದ ಮಾದರಿಯಾಗಿವೆ. ಈ ಮಾದರಿಗಳಿಂದ ನಾವು ನವ ಭಾರತವನ್ನು ಮುನ್ನಡೆಸಬೇಕಾಗಿದೆ.
ಕನ್ನಡದ ಮೇರುಕೃತಿ ಕವಿರಾಜ ಮಾರ್ಗದಲ್ಲಿ “ಪರಧರ್ಮ, ಪರವಿಚಾರ ಸಹಿಸಿಕೊಳ್ಳುವುದೇ ಚಿನ್ನ” ಎಂದು ಹೇಳಲಾಗಿದೆ. ಪಂಪನು “ಮನುಷ್ಯ ಕುಲಂ ತಾನೊಂದೇವೊಲA” ಎಂದು ಉಲ್ಲೇಖಿಸುತ್ತಾನೆ. ಧಾರ್ಮಿಕತೆ ಮತ್ತು ರಾಜಕೀಯವನ್ನು ಭಿನ್ನ ಎಂದು ಹೇಳಲು ವಿಕ್ರಮಾರ್ಜುನ ವಿಜಯವನ್ನು ರಾಜಕೀಯಕ್ಕಾಗಿ, ಆದಿಪುರಾಣವನ್ನು ಧಾರ್ಮಿಕಕ್ಕಾಗಿ ರಚಿಸಿ ತನ್ನ ಬದ್ಧತೆಯನ್ನು ಸ್ಪಷ್ಟಪಡಿಸಿದ್ದಾನೆ.
ಬಸವಣ್ಣನವರ “ದೇಹವೇ ದೇಗುಲ ಮತ್ತು ಶರಣ ಸತಿ ಲಿಂಗ ಪತಿ” ಎಂಬ ಎರಡೂ ವಿಚಾರಗಳು ಬಹುಮುಖ್ಯವಾಗಿ ಕಾಣುತ್ತವೆ. ಧರ್ಮ ಎನ್ನುವುದು ಸಂಪೂರ್ಣ ವೈಯಕ್ತಿಕ ಎನ್ನುವುದನ್ನು ಈ ಮೂಲಕ ಅವರು ಸ್ಪಷ್ಟಪಡಿಸಿದ್ದಾರೆ. ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ಎಂದೂ ಶ್ರೀರಾಮನನ್ನು ಬಳಸಿಕೊಂಡಿಲ್ಲ. ತಮ್ಮ ಹೋರಾಟಕ್ಕೆ ಚರಕ, ಖಾದಿ ಮತ್ತು ಉಪ್ಪನ್ನು ಬಳಸಿಕೊಂಡರೇ ವಿನಃ, ಸ್ವಾತಂತ್ರö್ಯ ಸಂಗ್ರಾಮದಲ್ಲಿ ಯಾವುದೇ ಧರ್ಮಕ್ಕೂ ಕಿಂಚಿತ್ತೂ ಅಸಮಾಧಾನ ಆಗದಂತೆ ನೋಡಿಕೊಂಡರು. “ಧರ್ಮ ಚಲನಶೀಲವಾದದ್ದು, ಪರಧರ್ಮವನ್ನು ದ್ವೇಷಿಸುವ ಬಗ್ಗೆ ಕನಸಿನಲ್ಲಿಯೂ ಆಲೋಚಿಸಬಾರದು” ಎಂದು ಗಾಂಧೀಜಿ ಹೇಳಿದ್ದಾರೆ.
ಸ್ವಾತಂತ್ರö್ಯ ಹೋರಾಟಗಾರ ಮೌಲಾನ ಅಬ್ದುಲ್ ಕಲಾಂ ಅಜಾದ್ ಅವರಿಗೆ ಕುರಾನ್ ಬಗ್ಗೆ ಭಕ್ತಿ ಇತ್ತು. ಈ ನಡುವೆ ಅವರು ತಮ್ಮನ್ನು ಅಪ್ಪಟ ಭಾರತೀಯರು ಎಂದು ಕರೆದುಕೊಳ್ಳುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು “ಧರ್ಮ ಇರುವುದು ಮನುಷ್ಯರಿಗಾಗಿ, ಮನುಷ್ಯರು ಧರ್ಮಕ್ಕಾಗಿ ಅಲ್ಲ” ಎಂದು ಉಲ್ಲೇಖಿಸಿದ್ದಾರೆ. ಈ ಎಲ್ಲ ಸಂಗತಿಗಳನ್ನು ಮನನಮಾಡಿಕೊಂಡು ಸೌಹಾರ್ದತೆಯ ಪರಂಪರೆಯನ್ನು ಅನುಸರಿಸಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.


Spread the love

Leave a Reply

Your email address will not be published. Required fields are marked *