ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 14
ಗುತ್ತಿಗೆ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ 16 ವರ್ಷದಿಂದ ಬಿಲ್ ಪಾವತಿಸದೇ ಪಂಚಾಯತ್ ರಾಜ್ ಎಂಜಿನಿಯರಿAಗ್ ಉಪ ವಿಭಾಗದ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದ್ದರಿಂದ, ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಕಾರು ಜಪ್ತಿಗೆ ಸಿಂಧನೂರು ಹಿರಿಯ ಶ್ರೇಣಿ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿಇಒ ಒಂದೇ ದಿನದಲ್ಲಿ ಬಾಕಿ ಮೊತ್ತ ಪಾವತಿಸಿದ ಅಪರೂಪದ ಘಟನೆ ನಡೆದಿದೆ.
ಹದಿನಾರು ವರ್ಷ ಕಳೆದರೂ ಗುತ್ತಿಗೆದಾರರಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಬಿಲ್ ಪಾವತಿಸದ ಕಾರಣ, 2ನೇ ಬಾರಿಗೆ ಇಲಾಖೆಯ ವಾಹನ ಜಪ್ತಿಗೆ ನಗರದ ಹಿರಿಯ ಶ್ರೇಣಿ ನ್ಯಾಯಾಲಯ 05-02-2026ರಂದು ಆದೇಶಿಸಿತ್ತು. ಕಳೆದ ಬಾರಿ ಜಪ್ತಿಗೆ ಆದೇಶಿಸಿದಾಗ ಇಲಾಖೆ ಅಧಿಕಾರಿಗಳು ತಡೆಯಾಜ್ಞೆ ತಂದಿದ್ದರು. ನಂತರದಲ್ಲಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ 2 ತಿಂಗಳೊಳಗೆ ಗುತ್ತಿಗೆದಾರರಿಗೆ ಬಿಲ್‌ಪಾವತಿ ಮಾಡುವುದಾಗಿ ಕೋರಿಕೊಂಡಿದ್ದರು. ಆದರೆ, 2 ತಿಂಗಳು ಕಾಲಾವಕಾಶ ಮುಗಿದರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದ ಕಾರಣ, ಪುನಃ 2ನೇ ಬಾರಿಗೆ ಇಲಾಖೆ ವಾಹನವನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ, ಗುತ್ತಿಗೆದಾರರ ಪರ ವಕೀಲರೊಂದಿಗೆ ನ್ಯಾಯಾಲಯದ ಅಧಿಕಾರಿಗಳು ಇಲಾಖೆಯ ಬುಲೆರೊ ವಾಹನವನ್ನು ಫೆ.5ರಂದು ಜಪ್ತಿ ಮಾಡಿದ್ದರು. ಆದರೂ ಸಹ ಇಲಾಖೆಯು ಪಾವತಿ ಮಾಡದೇ ವಿಳಂಬ ಧೋರಣೆ ತೋರಿದ ಕಾರಣ, ಗುತ್ತಿಗೆದಾರರ ವಕೀಲರು ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಾರನ್ನೇ ಜಪ್ತಿ ಮಾಡಲು ಫೆ.12ರಂದು ಹೋದಾಗ ಎಚ್ಚೆತ್ತುಕೊಂಡ ಸಿಇಒ ಈಶ್ವರಕುಮಾರ ಕಾಂಡೂ ಅವರು ತಕ್ಷಣವೇ ಬಿಲ್ ಪಾವತಿಗೆ ಪೂರ್ಣ ಪ್ರಮಾಣದ ಚೆಕ್ ಅನ್ನು ನೀಡಿ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕಾರು ಜಪ್ತಿಗೆ ಮುಂದಾದ ಕೋರ್ಟ್ ಸಿಬ್ಬಂದಿ
ಫೆ.12 ಗುರುವಾರದಂದು ರಾಯಚೂರು ನ್ಯಾಯಾಲಯದ ಸಿಬ್ಬಂದಿಗಳು ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿ, ಸಿಇಒ ಅವರ ಅಧಿಕೃತ ವಾಹನ ಜಪ್ತಿಗೆ ಮುಂದಾಗಿದ್ದಾರೆ. ಜಿ.ಪಂ.ನ ಅಧಿಕಾರಿಗಳು ಕೋರ್ಟ್ ಸಿಬ್ಬಂದಿ ಹಾಗೂ ಗುತ್ತಿಗೆದಾರರ ಪರ ವಕೀಲರ ಮನವೊಲಿಕೆಗೆ ಮುಂದಾದ ಘಟನೆಯೂ ನಡೆಯಿತು. ನ್ಯಾಯಾಲಯದ ಆದೇಶ ಪಾಲನೆ ಆಗದಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ತದನಂತರ ಸಂಬAಧಪಟ್ಟ ಇಲಾಖೆಯಿಂದ ಶೀಘ್ರವಾಗಿ ಬಾಕಿ ಮೊತ್ತ ಪಾವತಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಕಾರು ಜಪ್ತಿ ಪ್ರಕ್ರಿಯೆಯನ್ನು ಕೈಬಿಡಲಾಯಿತು.
ಚೆಕ್ ಮೂಲಕ ಬಾಕಿ ರೂ.8,22,516 ಪಾವತಿ
ನ್ಯಾಯಾಲಯದ ಆದೇಶದಿಂದ ತಡವಾಗಿ ಎಚ್ಚೆತ್ತ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಬಾಕಿ ರೂ.8,22,516/-ಮೊತ್ತದ ಚೆಕ್ ಅನ್ನು ನೀಡಿದ್ದರಿಂದ, ಕಳೆದ 16 ವರ್ಷಗಳಿಂದ ಕಗ್ಗಂಟಾಗಿದ್ದ ಗುತ್ತಿಗೆದಾರರ ಬಿಲ್ ಬಾಕಿ ಪ್ರಕರಣ ಗುರುವಾರ ಸುಖಾಂತ್ಯ ಕಂಡಿತು. ನ್ಯಾಯಾಲಯಕ್ಕೆ ಇಲಾಖೆಯಿಂದ ಚೆಕ್ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ಸಿಂಧನೂರು ಹಿರಿಯ ಶ್ರೇಣಿ ನ್ಯಾಯಾಲಯ ವಾಹನ ಬಿಡುಗಡೆಯ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ
ತಾಲೂಕಿನ ವೀರಾಪುರ ಗ್ರಾಮದಲ್ಲಿ 2009-10ನೇ ಸಾಲಿನ ನೆರೆಹಾವಳಿ ಯೋಜನೆ ಅಡಿಯಲ್ಲಿ 16 ವರ್ಷಗಳ ಹಿಂದೆ ರೂ.4 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ ಇಲಾಖೆಯ ಆದೇಶದಂತೆ ನಿರ್ವಹಿಸಿದ್ದರು. ಕಾಮಗಾರಿ ಪೂರ್ಣಗೊಂಡ ನಂತರ ಬಿಲ್ ಪಾವತಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಿಂಧನೂರು ಉಪ ವಿಭಾಗದ ಅಧಿಕಾರಿಗಳ ಮೊರೆ ಹೋಗಿದ್ದರು. ಕಾಮಗಾರಿ ಬಿಲ್ ಬಿಡುಗಡೆ ಮಾಡಲು ಹಲವು ವರ್ಷಗಳ ಕಾಲ ಅಧಿಕಾರಿಗಳು ಸತಾಯಿಸಿದ ಕಾರಣ ಗುತ್ತಿಗೆದಾರರು ಕಾನೂನು ಮೊರೆ ಹೋಗಿದ್ದರು.
ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲು
ಗುತ್ತಿಗೆದಾರರು ಸಿಂಧನೂರಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ನ್ಯಾಯಾಲಯ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ ಪ್ರಕರಣದ ದಾಖಲಾತಿಗಳನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ ಏಕಪಕ್ಷೀಯ ಆದೇಶದೊಂದಿಗೆ ಒಟ್ಟು ಬಿಲ್ ಬಾಕಿ ಮೊತ್ತ ರೂ.2,12,756ಗೆ 2010ರಿಂದ ಬಡ್ಡಿ ಸೇರಿ ಒಟ್ಟು ರೂ.8,22,516 ಗಳನ್ನು ಗುತ್ತಿಗೆದಾರರಿಗೆ ನೀಡಬೇಕೆಂದು ದಿ: 15-03-2025ರಂದು ಆದೇಶ ಹೊರಡಿಸಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದರು. ತದನಂತರ ಗುತ್ತಿಗೆದಾರರು ನ್ಯಾಯಾಲಯದ ಆದೇಶದ ಪಾಲನೆಗೆ ಮತ್ತೊಂದು ಆದೇಶ ಜಾರಿ ಪ್ರಕರಣವನ್ನು ದಾಖಲು ಮಾಡಿದ್ದರು. ನ್ಯಾಯಾಲಯ ಆದೇಶ ಜಾರಿ ಪ್ರಕರಣದ ಮೇಲೆ ದಿ:10-06-2025ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿಲ್ಲಾ ಪಂಚಾಯಿತಿ ರಾಯಚೂರು, ಇಇ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ರಾಯಚೂರು ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಉಪ ವಿಭಾಗ ಸಿಂಧನೂರು ಇವರ ವಾಹನಗಳ ಜಪ್ತಿಗೆ ವಾರಂಟನ್ನು ಹೊರಡಿಸಿತ್ತು.
ವಾಹನ ಜಪ್ತಿ ಆದೇಶ
ಮಾನ್ಯ ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಲಯ ಸಿಂಧನೂರು ನ್ಯಾಯಾಧೀಶರಾದ ಲಕ್ಷಿö್ಮಕಾಂತ ಜಾನಕೀರಾಮ್ ಮಿಸ್ಕಿನ್ ಇವರು ದಿ:05-02-2026ರಂದು ಜಪ್ತಿ ವಾರಂಟ್ ಆದೇಶ ಹೊರಡಿಸಿದ್ದರು. ಜಪ್ತಿ ಕಾರ್ಯಾಚರಣೆ ವೇಳೆ ಗುತ್ತಿಗೆದಾರರ ಪರ ವಕೀಲರಾದ ಮಿಥುನ್ ಕುಮಾರ್ ಹಾಗೂ ರಾಯಚೂರು ನ್ಯಾಯಾಲಯದ ಸಿಬ್ಬಂದಿಯವರಾದ ವೆಂಕಟೇಶ ಮತ್ತು ಇತರರು, ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ, ಬಸವರಾಜ ತುರ್ವಿಹಾಳ, ಬಸವರಾಜ ಕರಾಬದಿನ್ನಿ ಇದ್ದರು.

