(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 20
ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕೆಲಸ ಪೂರ್ಣಗೊಂಡು ಉಪಯೋಗಕ್ಕೆ ದೊರೆಯುವುದು ಯಾವಾಗ ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಕಲ್ಲೂರಿನಲ್ಲಿ ಈ ಆಸ್ಪತ್ರೆ ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಜಾಗಕ್ಕಾಗಿ ಹುಡುಕಾಟ ನಡೆದು ಕೊನೆಗೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಿದಂತೆ ಪಿಡಬ್ಲ್ಯುಡಿ ಕ್ಯಾಂಪ್‌ನ ನೀರಾವರಿ ಇಲಾಖೆಯ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದು, ಆದರೆ ಕಾಮಗಾರಿ ಮಾತ್ರ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ನೆಲಮಹಡಿ ನಿರ್ಮಾಣಗೊಂಡಿದ್ದು ಮೇಲ್ಮಡಿ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಮೊದ ಮೊದಲು ಸ್ಥಳ ವಿವಾದದಿಂದ ಆಸ್ಪತ್ರೆ ನಿರ್ಮಾಣ ಕಾರ್ಯ ತಡವಾಗಿತ್ತು, ತದನಂತರದಲ್ಲಿ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಆರಂಭಿಸಲಾಯಿತು, ಆದರೆ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೇಜವಾಬ್ದಾರಿ ಸಾಕ್ಷಿ
ಪಕ್ಕದ ಮಾನ್ವಿ ಪಟ್ಟಣ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಈಗಾಗಲೇ ತಾಯಿ, ಮಕ್ಕಳ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ಕೇಂದ್ರವಾದ ಸಿಂಧನೂರಿನಲ್ಲಿ ಇನ್ನೂ ಆಸ್ಪತ್ರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು ಇಲ್ಲಿನ ಜನಪ್ರತಿನಿಧಿಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ. ವೆಂಕಟರಾವ್ ನಾಡಗೌಡರು ಶಾಸಕರಾಗಿದ್ದಾಗ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ದೊರೆತಿತ್ತು, ನಂತರದ ದಿನಗಳಲ್ಲಿ ಕೆಲಸ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
4 ವರ್ಷವಾದರೂ ಉನ್ನತಿ ಕಾಣದ ತಾಯಿ-ಮಕ್ಕಳ ಆಸ್ಪತ್ರೆ !
“ಏಪ್ರಿಲ್ 28, 2020ರಂದು ಸರ್ಕಾರ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿದ್ದು, ಈಗಾಗಲೇ ಸರ್ಕಾರದಿಂದ 11 ಕೋಟಿ ರೂಪಾಯಿ ಮಂಜೂರಾಗಿದೆ. ಇದು 60 ಹಾಸಿಗೆಯುಳ್ಳ ಆಸ್ಪತ್ರೆಯಾಗಿದ್ದು, 3 ಜನ ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿ ಅವಶ್ಯಕವಿದೆ’’ ಎಂದು ಅಂದಿನ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ ಹೇಳಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಇನ್ನೂ ಆಸ್ಪತ್ರೆ ಕಟ್ಟಡ ಹಂತದಲ್ಲೇ ಇದೆ. ಈ ಆಸ್ಪತ್ರೆ ನಿರ್ಮಾಣವಾದರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಪ್ರತಿ ತಿಂಗಳು 250ಕ್ಕೂ ಹೆಚ್ಚು ಹೆರಿಗೆಗಳಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಕಂಡು ಕೆಲವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ಮೊರೆ ಹೋಗುವಂತಾಗಿದೆ. ಹಾಗಾಗಿ ಆದಷ್ಟು ಬೇಗ ಈ ಆಸ್ಪತ್ರೆ ಪೂರ್ಣಗೊಳಿಸಲು ಹಾಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೆಚ್ಚಿದ ಒತ್ತಡ:
ಹೆಚ್ಚುತ್ತಿರುವ ಹೊರ ಮತ್ತು ಒಳರೋಗಿಗಳಿಂದಾಗಿ ನಗರದ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಸೇರಿದಂತೆ ಇನ್ನಿತರೆ ಶಸ್ತ್ರ ಚಿಕಿತ್ಸೆಗಳಿಗೆ ವೈದ್ಯರು ಕೊಠಡಿಗಳನ್ನು ಹೊಂದಿಸುವುದೇ ಕಷ್ಟಕರವಾಗಿದೆ. ಕೆಲವೊಂದು ಬಾರಿ ಆಸ್ಪತ್ರೆಗೆ ನೂರಾರು ರೋಗಿಗಳು ಬರುವುದರಿಂದ ಜಾತ್ರೆಯ ಸ್ವರೂಪ ಪಡೆದುಕೊಳ್ಳುತ್ತದೆ. ಜನಸಂಖ್ಯೆಗೆ ತಕ್ಕಂತೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಸಲಕರಣೆ, ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯಗಳ ಅಭಾವದಿಂದಾಗಿ ವೈದ್ಯರು ದಿನವೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.
ವೈದ್ಯರ ಹೆಣಗಾಟ
ಸರ್ಕಾರಿ ಆಸ್ಪತ್ರೆಗೆಯಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅತಿಸೂಕ್ಷ್ಮ ಬಾಣಂತಿಯರ ವಾರ್ಡ್ಗಳಲ್ಲಿ ಅಗತ್ಯ ಸೌಲಭ್ಯಗಳು ಇಲ್ಲ. ಇರುವ ಸೌಕರ್ಯಗಳಲ್ಲೇ ಇಲ್ಲಿನ ಮುಖ್ಯ ವೈದ್ಯರು ಸೇರಿದಂತೆ ಸಿಬ್ಬಂದಿ ಚಿಕಿತ್ಸೆ ಒದಗಿಸಲು ಹೆಣಗಾಡುವಂತಾಗಿದೆ. ಇನ್ನೂ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗೆ ಹೆಚ್ಚಿನ ಅನುಕೂಲಗಳು ಇಲ್ಲದ ಕಾರಣ ಹೆರಿಗೆ ಸಂದರ್ಭದಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವ ಆಗಿಲ್ಲ ಎಂದು ಸಾರ್ವಜನಿಕರೊಬ್ಬರು ಆರೋಪಿಸುತ್ತಾರೆ.
ತುಮಕೂರು ಜಿಲ್ಲೆ ಪಾವಗಡ ಸರ್ಕಾರಿ ಆಸ್ಪತ್ರೆ ಘಟನೆ
ಕಳೆದ ಫೆಬ್ರವರಿಯಲ್ಲಿ ತುಮಕೂರು ಜಿಲ್ಲೆ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆಗೆ ಒಳಗಾದ ನಂತರ 3 ಮಹಿಳೆಯರು ಸೋಂಕಿನಿಂದ ಮೃತಪಟ್ಟು ಹಲವರು ಅನಾರೋಗ್ಯಕ್ಕೀಡಾದ ಘಟನೆ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಈ ಬಗ್ಗೆ ತನಿಖೆಗೆ ಆದೇಶಿಸಿದ್ದ ಆರೋಗ್ಯ ಇಲಾಖೆ ಹಲವು ಲೋಪಗಳನ್ನು ಪತ್ತೆಹಚ್ಚಿತ್ತು. ಹಾಗಾಗಿ ಶಸ್ತ್ರಚಿಕಿತ್ಸೆ ಅಗತ್ಯ ಮುನ್ನೆಚ್ಚರಿಕೆ, ಶಸ್ತ್ರ ಚಿಕಿತ್ಸೆಯ ನಂತರ ಸೋಂಕು ತಗುಲದಂತೆ ಜಾಗರೂಕತೆ ವಹಿಸುವುದು ಅತ್ಯವಶ್ಯವಾಗಿದ್ದು, ಆದರೆ ನಾನಾ ಕಾರಣಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯವುದು ಅನುಮಾನ ಎಂದು ರೋಗಿಗಳ ಕಡೆಯವರು ಆರೋಪಿಸುತ್ತಾರೆ. ಈ ಬಗ್ಗೆ ನೂತನ ಶಾಸಕ ಹಂಪನಗೌಡ ಬಾದರ್ಲಿ ಅವರೂ ಸಹ ಅಷ್ಟೊಂದು ಕಾಳಜಿ ವಹಿಸಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.