ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗೆ ಆಕ್ರೋಶ, ರೈತರಿಂದ ಸಿಂಧನೂರಲ್ಲಿ ಟ್ರಾಕ್ಟರ್‌ ಪೆರೇಡ್‌

Spread the love

Namma Sindhanuru Click For Breaking & Local News


ನಗರದ ರಾಯಚೂರು ರಸ್ತೆಯ ಯಲ್ಲಮ್ಮ ದೇವಸ್ಥಾನದ ಹತ್ತಿರದಿಂದ ಆರಂಭವಾದ ಟ್ರಾಕ್ಟರ್ ಪೆರೇಡ್ ಹಳ್ಳದ ಸೇತುವೆ, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಕನಕದಾಸ ಸರ್ಕಲ್, ಗಾಂಧಿ ವೃತ್ತ, ಬಸ್ ನಿಲ್ದಾಣದ ಮುಂಭಾಗ, ಬಸವ ಸರ್ಕಲ್ ಮೂಲಕ ಹಾದು ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಎಪಿಎಂಸಿಯ ಆವರಣ ತಲುಪಿತು. ಪೆರೇಡ್ ಉದ್ದಕ್ಕೂ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಾಗತೀಕರಣದ ನಂತರ ಶೇ.30ರಷ್ಟು ಕೃಷಿ ಸಬ್ಸಿಡಿ ಕಡಿತ: ಎಪಿಎಂಸಿ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕರಾದ ಚಂದ್ರಶೇಖರ ಗೊರಬಾಳ, 75ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಈ ದೇಶದ ಶ್ರೀಮಂತರು, ಬಂಡವಾಳಿಗರು ಸ್ವೇಚ್ಛೆಯನ್ನು ಅನುಭವಿಸುತ್ತಿದ್ದರೆ, ರೈತರು, ಬಡವರು ಹಾಗೂ ದುಡಿಯುವ ವರ್ಗಗಳು ಅತ್ಯಂತ ಹೀನಾಯ ಪರಿಸ್ಥಿತಿಗೆ ತಳ್ಳಲ್ಪಟ್ಟಿವೆ. ದೇಶಕ್ಕೆ ಅನ್ನ ಹಾಕುವ ರೈತರು ಸರ್ಕಾರಗಳ ನೀತಿಯಿಂದಾಗಿ ವಿಷ ಕುಡಿದು ಸಾಯುತ್ತಿದ್ದಾರೆ. ಜಾಗತೀಕರಣ ಬಂದ ನಂತರ ಶೇ.30ರಷ್ಟು ಕೃಷಿ ಸಬ್ಸಿಡಿಯನ್ನು ಕಡಿತ ಮಾಡಲಾಗಿದೆ. ಕಳೆದ ೨೦ ವರ್ಷಗಳಲ್ಲಿ ಶೇ.೮೦ರಷ್ಟು ಕೃಷಿ ಕೂಲಿಕಾರರಿಗೆ ಕೆಲಸವಿಲ್ಲದಂತಾಗಿದೆ, ಯಾಂತ್ರೀಕರಣ ಹಾಗೂ ಸರ್ಕಾರಗಳ ಜನವಿರೋಧಿ ನೀತಿಗಳಿಂದಾಗಿ ಎಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಮೂರು ಕೃಷಿ ಕರಾಳ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದಿಂದಾಗಿ ಮೋದಿ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯಿತು. ಆದರೆ ರಾಜ್ಯದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಸರ್ಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿತು. ಪ್ರತಿಪಕ್ಷದಲ್ಲಿದ್ದಾಗ ನಾವು ಆಡಳಿತಕ್ಕೆ ಬಂದರೆ, ಈ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 9 ತಿಂಗಳಾದರೂ ಇಲ್ಲಿಯವರೆಗೂ ವಾಪಸ್ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News


ರೈತರ ಶಕ್ತಿ ಇರುವುದೇ ಹೋರಾಟದಲ್ಲಿ, ದೇಶಕ್ಕೆ ಅನ್ನ ಹಾಕುವ ರೈತರು, ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಉಳಿಸಬಲ್ಲರು ಎನ್ನುವುದಕ್ಕೆ ಇವತ್ತಿನ ಹೋರಾಟವೇ ಸಾಕ್ಷಿಯಾಗಿದೆ. ತಮ್ಮ ಹಕ್ಕಾಗಿರುವ ಹೋರಾಟ ನಡೆಸಲು ರೈತರು ಸರ್ಕಾರಗಳಿಂದ ಪರವಾನಗಿ ಪಡೆಯಬೇಕಾದ ಅನಿವಾರ್ಯತೆ ಎದುರಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯವಾಗಿದೆ. ಸ್ವಾತಂತ್ರö್ಯ ಸಂಗ್ರಾಮವನ್ನು ನೆನಪಿಸಿದ ದೆಹಲಿ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ರೈತ ವಿರೋಧಿ ಸರ್ಕಾರಗಳು ಮಾರಕ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಈ ದೇಶದ ಇಡೀ ಕೃಷಿಕರ ಬದುಕನ್ನೇ ನಿರ್ನಾಮ ಮಾಡಲು ಹೊರಟಿವೆ. ಇದಕ್ಕೆ ಆಸ್ಪದ ನೀಡದೇ ರೈತರು ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ರೈತರು ಉಪವಾಸಬಿದ್ದು ಸಾಯುತ್ತಿದ್ದರೆ, ಮೋದಿ ಸರ್ಕಾರ ಅಂಬಾನಿ, ಅದಾನಿಯವರ ಸಾಲ ಮನ್ನಾ ಮಾಡುತ್ತಿದೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಮಾತನಾಡಿ, ರೈತರು ಸಾಲಬಾಧೆ, ಬರಗಾಲದಿಂದಾಗಿ ಉಪವಾಸ ಬಿದ್ದು ಸಾಯುತ್ತಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರ ಅಂಬಾನಿ, ಆದಾನಿಯವರ ಸಾಲ ಮನ್ನಾ ಮಾಡುತ್ತಿದೆ. ಹೊರದೇಶದಲ್ಲಿರುವ ಕಪ್ಪು ಹಣ ದೇಶಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರೂಪಾಯಿ ಹಾಕುತ್ತೇನೆ, ರೈತರ ಆದಾಯ ದ್ವಿಗುಣಗೊಳಿಸುತ್ತೇನೆ, ವರ್ಷಕ್ಕೆ ೨ ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಆಡಳಿತಕ್ಕೆ ಬಂದ ಮೋದಿಯವರು 112 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ದೇಶದ ಜನರ ಮೇಲೆ ಹೊರಿಸಿದ್ದಾರೆ. ಜಾತಿ, ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಒಡೆದಾಳುವುದೇ ಬಿಜೆಪಿಯ ಅಜೆಂಡಾವಾಗಿದೆ. ಇಂತವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಸರಿಯಾದ ಪಾಠ ಕಲಿಸಲೇಬೇಕಿದೆ ಎಂದು ಹರಿಹಾಯ್ದರು.

Namma Sindhanuru Click For Breaking & Local News

ಎಂಎಸ್‌ಪಿ ವಿಚಾರದಲ್ಲಿ ಆಳುವ ಸರ್ಕಾರಗಳಿಂದ ರೈತರಿಗೆ ಮೋಸ: ಸಚಾಲಕರಾದ ಬಸವಂತರಾಯ ಪಾಟೀಲ್ ಮಾತನಾಡಿ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ವಿಷಯದಲ್ಲಿ ಎಲ್ಲ ಸರ್ಕಾರಗಳು ವಂಚಿಸಿವೆ. ನೀರಿನ ವಿಷಯದಲ್ಲಿಯೂ ರಾಜಕಾರಣ ಮಾಡುವ ಮೂಲಕ ರೈತರನ್ನು ಒಡೆದಾಳಲಾಗುತ್ತಿದೆ. ಇಂದು ರೈತರ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿರುವ ಉದ್ದೇಶ ಮುಂದಿನ ದಿನಗಳಲ್ಲಿ ಎಪಿಎಂಸಿಯನ್ನು ಸಂಪೂರ್ಣ ನುಂಗುವ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಆರೋಪಿಸಿದರು.
ರೈತರನ್ನು ಸರ್ಕಾರಗಳು ಬೀದಿಗೆ ತಳ್ಳಿವೆ: ಮುಖಂಡ ಚಂದ್ರಶೇಖರ ಕ್ಯಾತ್ನಟ್ಟಿ ಮಾತನಾಡಿ, ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಿ, ರೈತರನ್ನು ಸರ್ಕಾರಗಳು ಬೀದಿಗೆ ತಂದು ನಿಲ್ಲಿಸಿವೆ. ದುಡಿಯುವವರಿಗೆ ಕೆಲಸವಿಲ್ಲ, ರೈತರ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ, ರೈತರು ಸಬ್ಸಿಡಿಯನ್ನು ಕಡಿತಗೊಳಿಸುವ ಸರ್ಕಾರಗಳು, ಗುಡಿ-ಗುಂಡಾರಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ರಾಜಕಾರಣ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ಕೃಷಿ ಖಾಸಗೀಕರಣ ಮಿತಿಮೀರಿದೆ: ರಾಜ್ಯ ರೈತ ಸಂಘದ ರಾಜ್ಯ ಮುಖಂಡ ಅಮೀನ್‌ಪಾಷಾ ದಿದ್ದಗಿ ಮಾತನಾಡಿ, ರೈತನೇ ಈ ದೇಶದ ಅತಿ ಹೆಚ್ಚು ತೆರಿಗೆದಾರ, ಆದರೆ ಇಂದು ಸರ್ಕಾರಗಳ ರೈತ ವಿರೋಧಿ ನೀತಿಗಳಿಂದಾಗಿ ಅರ್ಧ ತಾಸಿಗೆ ಒಬ್ಬ ರೈತ ಸಾಯುತ್ತಿದ್ದಾನೆ. ಎಲ್ಲರಿಗೆ ಅನ್ನ ಹಾಕುವ ಅನ್ನದಾತನೇ ಉಪವಾಸವಿದ್ದಾನೆ. ಎಲ್ಲೆಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮೋದಿಯವರ ಸರ್ಕಾರ ಆಡಳಿತಕ್ಕೆ ಬಂದಂದಿನಿಂದ ಕೃಷಿ ಖಾಸಗೀಕರಣ ಮಿತಿಮೀರಿದೆ. ದೇಶದ ಬೆನ್ನೆಲುಬಾದ ರೈತರು ಹೋರಾಟ ಮಾಡಲು ಪರವಾನಗಿ ಪಡೆಯಬೇಕಾದ ದುಸ್ಥಿಃತಿ ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ಮೋದಿ ಸರ್ಕಾರದಿಂದ ಜನರ ತೆರಿಗೆ ಹಣ ಲೂಟಿ: ಸಂಚಾಲಕರಾದ ನಾಗರಾಜ್ ಪೂಜಾರ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಜಾತಿ-ಧರ್ಮ ಮತ್ತು ಭಾವನಾತ್ಮಕ ವಿಚಾರಗಳನ್ನು ಕೆದಕಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವುದು ಬಿಟ್ಟರೆ ಬೇರೇನೂ ಮಾಡಿಲ್ಲ. ಹತ್ತು ವರ್ಷಗಳ ಹಿಂದೆ ನೀಡಿದ ಭರವಸೆಗಳೇನೂ, ಈಗ ಬಿಜೆಪಿ ಮಾಡುತ್ತಿರುವುದೇನು ? ಕಾರ್ಪೋರೇಟ್ ಉದ್ಯಮಪತಿಗಳ ಹದಿನಾಲ್ಕುವರೆ ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ಜನರ ತೆರಿಗೆಯ ಹಣವನ್ನು ಲೂಟಿ ಹೊಡೆಯುತ್ತಿದೆ. ಇದರಿಂದಾಗಿ ದೇಶದ ದುಡಿಯುವ ಜನರು ಆಪತ್ತಿನಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ಪೆರೇಡ್‌ನಲ್ಲಿ ರೈತ ಮುಖಂಡರಾದ ಚಿಟ್ಟಿಬಾಬು, ರಮೇಶ್ ಪಾಟೀಲ್, ಚಾಂದ್‌ಪಾಷಾ, ಸೇರಿದಂತೆ ಇನ್ನಿತರರು ಹೋರಾಟದ ಹಾಡುಗಳನ್ನು ಹಾಡಿದರು. ಬಸವರಾಜ ಬಾದರ್ಲಿ ಹೋರಾಟ ಸಭೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬಾಷುಮಿಯಾ, ಡಿ.ಎಚ್.ಕಂಬಳಿ, ಎಸ್.ದೇವೇಂದ್ರಗೌಡ, ವೆಂಕನಗೌಡ ಗದ್ರಟಗಿ, ಅಪ್ಪಣ್ಣ ಕಾಂಬ್ಳೆ, ರಾಮಯ್ಯ ಜವಳಗೇರಾ, ಬಸವರಾಜ ಹಂಚಿನಾಳ, ಬಸವರಾಜ ಬೆಳಗುರ್ಕಿ, ಹಾಜಿಸಾಬ್, ಪಾಂಡುರಂಗ, ಪರಶುರಾಮ ತಿಡಿಗೋಳ, ಜಗದೀಶ್ ಸೇರಿದಂತೆ ರೈತ ಸಂಘಟನೆಗಳ ಪದಾಧಿಕಾರಿಗಳು, ಎಸ್‌ಕೆಎಂ, ರೈತ ವಿರೋಧಿ ಕೃಷಿ ಕಾನೂನುಗಳ ರದ್ಧತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *