ನಮ್ಮ ಸಿಂಧನೂರು, ಜುಲೈ 24
ತುಂಗಭದ್ರಾ ಜಲಾಶಯಕ್ಕೆ ದಿನಾಂಕ:24-07-2024 ಬುಧವಾರ ದಂದು 84,114 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು,ಕೊಂಚ ಇಳಿಮುಖವಾಗಿದೆ. ಜಲಾಶಯದಲ್ಲಿ ಇಂದು 96.91 ಟಿಎಂಸಿ ನೀರು ಸಂಗ್ರಹವಿದೆ. 14,791 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 25.42 ಟಿಎಂಸಿ ನೀರು ಸಂಗ್ರಹವಿದ್ದರೆ, 47,294 ಕ್ಯೂಸೆಕ್ ನೀರು ಒಳಹರಿವಿತ್ತು, 213 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಕಳೆದ ಹತ್ತು ವರ್ಷದ ಹಿಂದೆ ಇದೇ ದಿನ ಜಲಾಶಯದಲ್ಲಿ 57.86 ಟಿಎಂಸಿ ನೀರು ಸಂಗ್ರಹವಿದ್ದುದನ್ನು ದಾಖಲೆಗಳಿಂದ ತಿಳಿಯಬಹುದಾಗಿದೆ. ಬುಧವಾರ 80 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಜಲಾಶಯಕ್ಕೆ ಬರುತ್ತಿರುವುದರಿಂದ 24 ಗಂಟೆಯಲ್ಲಿ ಅಂದರೆ ನಾಳೆ ಗುರುವಾರ ಜಲಾಶಯ ಸಂಪೂರ್ಣ ಭರ್ತಿಯಾಗಲಿದ್ದು , ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಬಿಡುವ ಸಾಧ್ಯತೆ ಇದೆ. ಅಂತೂ ಈ ಬಾರಿ ಜುಲೈನಲ್ಲೇ ಡ್ಯಾಂ ಭರ್ತಿಯಾಗಿರುವುದರಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.