ನಮ್ಮ ಸಿಂಧನೂರು, ಮಾರ್ಚ್ 20
ಮಾರ್ಚ್ 20ರಂದು ಗುಬ್ಬಚ್ಚಿ ದಿನವೆಂದು ಆಚರಿಸಲಾಗುತ್ತಿದೆ. ಆದರೆ ಬದಲಾದ ಸಂದರ್ಭದಲ್ಲಿ ಗುಬ್ಬಿಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸದಾ ಮನೆ, ಹೊಲ, ಗದ್ದೆ ಕಂಡುಬರುತ್ತಿದ್ದ, ಗಿಡದ ಕೊನೆ ಕೊಲ್ಲಿಗೆ ಗೂಡು ಕಟ್ಟಿ ಚಿಂವ್‌ಗುಟ್ಟುತ್ತಿದ್ದ ಗುಬ್ಬಿಗಳು ದಿನದಿಂದ ದಿನಕ್ಕೆ ಮರೆಯಾಗುತ್ತಿವೆ. ಅವುಗಳ ಸಂತತಿ ಅಪಾಯದ ಸ್ಥಿತಿ ತಲುಪಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬೆಳಗಾದರೆ ಸಾಕು ಗುಬ್ಬಿಗಳ ಶಬ್ದ ಕೇಳದ ದಿನಗಳಿಲ್ಲದಂತಹ ವಾತಾವರಣವಿತ್ತು, ಆದರೆ ಬದಲಾದ ವಾತಾವರಣದಿಂದಾಗಿ ಈಗ ಗುಬ್ಬಿಗಳು ಕಾಣಸಿಗುವುದು ಅಪರೂಪ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಹೊಲದಲ್ಲಿನ ಬೆಳೆಗಳಿಗೆ ಕಾಡುವ ಮಿಡತೆ, ಕೀಟ, ಹುಳ-ಹುಪ್ಪಟೆಗಳನ್ನು ಹೆಕ್ಕಿ ತಿನ್ನುತ್ತಿದ್ದ ಗುಬ್ಬಿಗಳು ರೈತ ಸ್ನೇಹಿಯಾಗಿ ವರ್ತಿಸುತ್ತಿದ್ದವು. ಕೀಟಗಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಪ್ರಮೇಯವೇ ರೈತರಿಗೆ ಬರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ, ಅತಿಯಾದ ತರಗಾಂತರಗಳ ಕಾರಣದಿಂದ ಗುಬ್ಬಿಯ ಸಂತತಿ ಕಡಿಮೆಯಾಗುತ್ತಿದ್ದು, ಚಿಂವ್ ಚಿಂವ್ ಸದ್ದು ಅಪರೂಪ ಎನ್ನುವಂತಾಗಿದೆ ಎಂಬುದು ಪರಿಸರ ಮಾತಾಗಿದೆ.