ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು.ಜನವರಿ 31
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯನ್ನು, ಮುಬಿನ್ ಎನ್ನುವ ದುಷ್ಕರ್ಮಿ ಹಾಡಹಗಲೇ ಚಾಕು ಇರಿದು ಬರ್ಬರವಾಗಿ ದಿನಾಂಕ: 30-01-2025ರಂದು ಕೊಲೆ ಮಾಡಿದ್ದು, ಪಾಸ್ಟ್ಟ್ರಾಕ್ ಕೋರ್ಟ್ ಮೂಲಕ ಅತಿಶೀಘ್ರ ವಿಚಾರಣೆ ನಡೆಸಿ, ತಪ್ಪಿತಸ್ಥನಿಗೆ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ರವಾನಿಸಲಾಯಿತು.
ಕೊಲೆಗೆ ಕಾರಣನಾದ ದುಷ್ಕರ್ಮಿಯು ಈಗಾಗಲೇ ಲಿಂಗಸುಗೂರು ಪೊಲೀಸರಿಗೆ ಶರಣಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತನಿಖೆ ಪೂರ್ಣಗೊಳಿಸಿ, ಆದಷ್ಟು ಬೇಗ ಪಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ ಈತನಿಗೆ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮೂವ್‌ಮೆಂಟ್‌ನ ಪದಾಧಿಕಾರಿಗಳು ಮನವಿ ಮಾಡಿದರು.
‘ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿ’
ಮೊದಲೇ ಹೆಣ್ಣು ಮಕ್ಕಳು, ವಿದ್ಯಾರ್ಥಿನಿಯರು ಕಾಲೇಜು ಮೆಟ್ಟಿಲು ಹತ್ತಲು ಹತ್ತಾರು ಸವಾಲುಗಳು, ಸಂಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಗಳು ಅವರ ಮಾನಸಿಕ ಸ್ಥೆöÊರ್ಯವನ್ನು ಕುಸಿಯುವಂತೆ ಮಾಡುತ್ತವೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಪಾಲಕ ಸಮುದಾಯದವರಲ್ಲಿ ಆತಂಕ ಮನೆ ಮಾಡುವುದು ಸರ್ವೆ ಸಾಮಾನ್ಯವಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ವಿದ್ಯಾರ್ಥಿ, ಪಾಲಕರ ಆತಂಕ ದೂರಮಾಡಿ’
ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ನಗರ ಶೈಕ್ಷಣಿಕ ಹಬ್ ಆಗಿದ್ದು, ಇಲ್ಲಿನ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದು, ಇದನ್ನು ಪರಿಗಣಿಸಿ ಶಾಲಾ ಕ್ಯಾಂಪಸ್‌ನ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಲ್ಲದ ಪುಂಡ-ಪೋಕರಿಗಳ ಹಾವಳಿ ತಡೆಗಟ್ಟಬೇಕು, ಶಾಲಾ-ಕಾಲೇಜು ಆಟದ ಮೈದಾನಗಳಲ್ಲಿ ವಿದ್ಯಾರ್ಥಿಗಳಲ್ಲದವರು ಪ್ರವೇಶಿಸುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಮೇಲೆ ನಿಗಾಯಿಡಬೇಕು ಹಾಗೂ ನಿಯಮಿತವಾಗಿ ಪ್ರತಿ ದಿನವೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲಾ-ಕಾಲೇಜು ಪ್ರದೇಶ ವ್ಯಾಪ್ತಿಗೆ ಪೊಲೀಸ್ ಬೀಟ್ ನಿಯೋಜಿಸಬೇಕು. ಆ ಮೂಲಕ ವಿದ್ಯಾರ್ಥಿನಿಯರ ಹಾಗೂ ಪಾಲಕರ ಆತಂಕವನ್ನು ದೂರಮಾಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ.
ಹಕ್ಕೊತ್ತಾಯಗಳು
ವಿದ್ಯಾರ್ಥಿನಿಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಾಸ್ಟ್ಟ್ರಾö್ಯಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ, ಅತಿ ಶೀಘ್ರದಲ್ಲಿ ತಪ್ಪಿತಸ್ಥನ ಮೇಲೆ ಕಠಿಣ ಶಿಕ್ಷೆ ವಿಧಿಸಬೇಕು, ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ರಾಜ್ಯಾದ್ಯಂತ ಇಂತಹ ಘಟನೆಗಳು ಪದೇ ಪದೆ ಮರುಕಳಿಸುತ್ತಿದ್ದು, ಸರ್ಕಾರ ಇದರ ನಿಗ್ರಹಕ್ಕಾಗಿ ಸಮಾಜ ಶಾಸ್ತ್ರೀಯ ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸುವ ಮೂಲಕ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು, ಸಿಂಧನೂರು ನಗರದ ಅಕ್ಕಮಹಾದೇವಿ ವಿವಿಯ ಮಹಿಳಾ ಪಿಜಿ ಸೆಂಟರ್, ಮಹಿಳಾ ಪದವಿ ಕಾಲೇಜ್, ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆ, ಸರ್ಕಾರಿ ಪದವಿ ಮಹಾವಿದ್ಯಾಲಯ ಸೇರಿದಂತೆ ಹಲವು ಕಾಲೇಜುಗಳಿಗೆ ಕಾಂಪೌಂಡ್ ನಿರ್ಮಿಸಬೇಕು, ಕುಷ್ಟಗಿ ಮಾರ್ಗದ ಸರ್ಕಾರಿ ಪದವಿ ಮಹಾವಿದ್ಯಾಲಯ, ಪಿಡಬ್ಲ್ಯುಡಿ ಕ್ಯಾಂಪಿನ ಜೂನಿಯರ್ ಕಾಲೇಜು ಸೇರಿದಂತೆ ಇನ್ನಿತರೆ ಶಾಲಾ ಮೈದಾನಗಳಲ್ಲಿ ಖಾಸಗಿ ವ್ಯಕ್ತಿಗಳು ವಿವಿಧ ಟೂರ್ನ್ಮೆಂಟ್‌ಗಳ ಹೆಸರಿನಲ್ಲಿ ಶೈಕ್ಷಣಿಕ ಪರಿಸರಕ್ಕೆ ಧಕ್ಕೆ ಮಾಡುತ್ತಿದ್ದು, ಇದರಿಂದ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟಿ ಶೈಕ್ಷಣಿಕ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು.
ಈ ಸಂದರ್ಭದಲ್ಲಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ವಸೀಮ್ ಅಹ್ಮದ್, ಜಮಾಅತೆ ಇಸ್ಲಾಂ ಹಿಂದ್‌ನ ತಾಲೂಕು ಘಟಕದ ಅಧ್ಯಕ್ಷ ಹುಸೇನ್‌ಸಾಬ್, ಮನುಜಮತ ಬಳಗದ ಬಸವರಾಜ ಬಾದರ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಬ್ದುಲ್ ಸಮ್ಮದ್ ಚೌದ್ರಿ, ಲಿಯಾಖತ್, ಖಾಜಿ ಜಾವಿದ್, ತನ್ವೀರ್ ಸೇರಿದಂತೆ ಇನ್ನಿತರರಿದ್ದರು.