ನಮ್ಮ ಸಿಂಧನೂರು, ಫೆಬ್ರವರಿ 5
ವಿದ್ಯಾರ್ಥಿನಿಯರು ಸೀರೆ ತೊಟ್ಟು ಮಿಂಚಿದರೆ, ವಿದ್ಯಾರ್ಥಿಗಳು ಪಂಚೆ, ಲುಂಗಿ, ತಲೆಗೆ ರುಮಾಲು ಧರಿಸಿ ಗ್ರಾಮೀಣ ಸೊಗಡಿನಲ್ಲಿ ಗಮನ ಸೆಳೆದರು. ತಾಲೂಕಿನ ಎಸ್.ಎನ್.ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಹಳ್ಳಿ ಸೊಬಗು’ ವಿಶೇಷ ಕಾರ್ಯಕ್ರಮದಿಂದಾಗಿ ಶಾಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಶಾಲಾ ಮಕ್ಕಳು ತರಹೇವಾರಿ ಪೋಷಾಕು ತೊಟ್ಟು ಸಂತಸಪಟ್ಟರು.ಸಂತೆ ಮಾರುಕಟ್ಟೆಯಲ್ಲಿ ಧಾನ್ಯಗಳ ಮಾರಾಟ ಮಾಡುವ ಬಗೆ, ಕಟ್ಟಿಗೆ ಕಡಿಯುವುದು, ಬಟ್ಟೆ ಶುಭ್ರಗೊಳಿಸುವ ವಿಧಾನ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಹಲವು ಕರಕುಶಲ ವೃತ್ತಿಗಳ ಬಗ್ಗೆ ತಿಳಿಸಿಕೊಡುವ ಮೂಲಕ ಮನವರಿಕೆ ಮಾಡಿಕೊಡಲಾಯಿತು.ಶಾಲಾ ಮುಖ್ಯಗುರು ಲಕ್ಷ್ಮಣ ಅವರು ವಿದ್ಯಾರ್ಥಿಗಳಿಗೆ ಹಳ್ಳಿ ಸೊಬಗಿನ ಮಹತ್ವವವನ್ನು ತಿಳಿಸಿಕೊಟ್ಟರು. ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪ, ಅತಿಥಿ ಶಿಕ್ಷಕ ನಿರುಪಾದೆಪ್ಪ ಹಸಮಕಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.