ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 21
ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಕೆಲ ತಿಂಗಳುಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ತದನಂತರ ಕಾಂಗ್ರೆಸ್ ಪಕ್ಷ ಮರೆಯಿತೇ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳಲ್ಲಿ ಚರ್ಚೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ
ಕಳೆದ ಏಪ್ರೀಲ್ 17, 2024ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗಣ್ಣ ಕರಡಿ ಅವರು ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಮ್ಮುಖದಲ್ಲಿ ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಲಕ್ಷ್ಮಣ ಸವದಿ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಸೇರಿದಂತೆ ಹಲವರು ಇದ್ದರು.
ಎರಡು ಬಾರಿ ಸಂಸದ
ಸತತ ಎರಡು ಬಾರಿ ಕೊಪ್ಪಳ ಲೋಕಸಭೆಯನ್ನು ಬಿಜೆಪಿಯಿಂದ ಪ್ರತಿನಿಧಿಸಿ ಗೆಲುವಿನ ನಗೆ ಬೀರಿದ್ದ ಸಂಗಣ್ಣ ಕರಡಿ ಅವರು, ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ರೆಬಲ್ ಆಗಿದ್ದರು. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ಸಂಗಣ್ಣ ಕರಡಿ ಅವರನ್ನು ಮನವೊಲಿಸಲು ಯತ್ನಿಸಿದರೂ ಸಫಲವಾಗಿರಲಿಲ್ಲ. ಹೀಗಾಗಿ ಅವರು ಬಿಜೆಪಿ ಪಾಳಯದಿಂದ ದೂರವಾಗಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಚುನಾವಣೆಯ ಸಂದರ್ಭದಲ್ಲಿ ಕೈ ಪಾಳಯಕ್ಕೆ ಬಲ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರ ಬೆಂಬಲಿಗರು ಹೇಳುತ್ತಾರೆ.
ಕೊಪ್ಪಳದಲ್ಲಿ ಕೈ ಮೇಲುಗೈ ಸಾಧಿಸಲು ಸಂಗಣ್ಣರ ಬಲ
ಸತತ ಮೂರು ಬಾರಿ ಬಿಜೆಪಿ ಪಾಲಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ, ಈ ಬಾರಿ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು ಗೆಲುವಿನ ನಗೆ ಬೀರಲು ಬಿಜೆಪಿ ತೊರೆದು ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಬಂದಿದ್ದೇ ವರವಾಗಿ ಪರಿಣಮಿಸಿತು, ಅಲ್ಲದೇ ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರಿದವು ಎಂದು ಅವರ ಬೆಂಬಲಿಗರು ವಿಶ್ಲೇಷಿಸುತ್ತಾರೆ.
ಎಮ್ಮೆಲ್ಸಿ, ನಿಗಮ ಮಂಡಳಿಗೆ ಆದ್ಯತೆ ?
ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಸಂಗಣ್ಣ ಕರಡಿಯವರು ಪಕ್ಷದ ಹೈಕಮಾಂಡ್ ಮುಂದೆ ಯಾವುದೇ ರೀತಿಯ ಬೇಡಿಕೆಗಳನ್ನು ಇಟ್ಟಿಲ್ಲ. ಕಾಗ್ರೆಸ್ ಪಕ್ಷದಿಂದ ಎಮ್ಮೆಲ್ಸಿ ಇಲ್ಲವೇ ನಿಗಮ ಮಂಡಳಿಗೆ ನೇಮಕ ಮಾಡುವ ಕುರಿತಂತೆ ಕೆಲ ದಿನಗಳ ಹಿಂದೆ ಚರ್ಚೆ ನಡೆದಿತ್ತಾದರೂ ಆ ಬಗ್ಗೆ ಅವರು ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಅವರ ಬೆಂಬಲಿಗರು, ಅಭಿಮಾನಿಗಳಿಂದ ಸಕ್ರಿಯ ರಾಜಕಾರಣಕ್ಕೆ ಮರಳಲು ಒತ್ತಡ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಪ್ರಮುಖ ಸ್ಥಾನ ನೀಡಲು ಬೆಂಬಲಿಗರ ಒತ್ತಡ
ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಮುಖ ಕಾರಣವಾಗಿರುವ ಸಂಗಣ್ಣ ಕರಡಿ ಅವರನ್ನು ಕಡೆಗಣಿಸದೇ ಕಾಂಗ್ರೆಸ್ ಪಕ್ಷ, ಎಮ್ಮೆಲ್ಸಿ ಇಲ್ಲವೇ ಪ್ರಮುಖ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕು, ಆ ಮೂಲಕ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗುವಂತೆ ಮಾಡಬೇಕು ಎಂದು ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆAದು ಹೇಳಲಾಗುತ್ತಿದೆ.