ನಮ್ಮ ಸಿಂಧನೂರು, ಅಕ್ಟೋಬರ್ 29
ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ವಾರ್ಡ್ ನಂ.1ರ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ.125ರಲ್ಲಿ ಸರ್ಕಾರಕ್ಕೆ ಸೇರಿದ ಖಾಲಿ ಜಾಗ ಇದ್ದು, ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಮಂಗಳವಾರ ತಹಸೀಲ್ದಾರ್ ಕಾರ್ಯಾಲಯದ ಅಧಿಕಾರಿ ಮೂಲಕ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕೆ.ಮಾತನಾಡಿ, “ಎಲೆಕೂಡ್ಲಿಗಿ ಗ್ರಾಮದ ವಾರ್ಡ್ ನಂ.1ರ ಮಹಿಳೆಯರು ಬಹಿರ್ದೆಸೆಗೆ ಹೋಗಲು ಸಮಸ್ಯೆ ಎದುರಿಸುತ್ತಿದ್ದಾರೆ. ಸಣ್ಣಪುಟ್ಟ ಜಾಗಗಳಿರುವುದರಿಂದ ಸ್ವಂತ ಶೌಚಾಲಯ ಕಟ್ಟಿಸಿಕೊಳ್ಳುವ ಪರಿಸ್ಥಿತಿ ಇಲ್ಲ. ಇನ್ನು ಬಹಿರ್ದೆಸೆಗೆ ಹೋಗಲು ಸಂಜೆ ಕತ್ತಲಾಗುವುದನ್ನು ಕಾಯಬೇಕಿದೆ. ಇನ್ನೂ ನಸುಕಿನಲ್ಲೇ ಶೌಚಕ್ಕೆ ಹೋಗಬೇಕಿದೆ. ವೃದ್ಧ ಮಹಿಳೆಯರು ಹಾಗೂ ಅನಾರೋಗ್ಯಪೀಡಿತರು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹಾಗಾಗಿ ವಾರ್ಡ್ನ ಸರ್ವೆ ನಂ.125ರಲ್ಲಿ ಸರ್ಕಾರಿ ಜಾಗೆ ಇದ್ದು ಇಲ್ಲಿ ಸಾಮೂಹಿಕ ಶೌಚಾಲಯ ಕಟ್ಟಿಸಲು ವ್ಯಕ್ತಿಯೊಬ್ಬರು ವಿನಾಃಕಾರಣ ತಡೆಯೊಡ್ಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಸಂಬAಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರೂ, ಸರ್ಕಾರಿ ಜಾಗೆ ಅತಿಕ್ರಮಿಸಿಕೊಂಡಿರುವ ವ್ಯಕ್ತಿ ಪದೇ ಪದೆ ತಡೆಯೊಡ್ಡುತ್ತಿದ್ದಾರೆ. ಹಾಗಾಗಿ ತಹಸೀಲ್ದಾರರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು” ಒತ್ತಾಯಿಸಿದರು. ಈ ವೇಳೆ ತಾಲೂಕು ಅಧ್ಯಕ್ಷ ಉಮೇಶ್ ಬಾಲಿ ಸೇರಿದಂತೆ ವಾರ್ಡ್ನ ಮಹಿಳೆಯರು ಇನ್ನಿತರರು ಇದ್ದರು.