ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 04
ದಸರಾ ಮಹೋತ್ಸವದ ಪ್ರಯುಕ್ತ ಗಾಂಧಿ ಸರ್ಕಲ್ನಲ್ಲಿ ‘ಎತ್ತಿನ ಬಂಡಿ’ ಮಾದರಿಯನ್ನು ಅಳವಡಿಸಿದ್ದು, ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ರಾಫಿಕ್ ಸಿಗ್ನಲ್ ಗೋಚರಿಸುತ್ತಿದ್ದಂತೆ ಥಟ್ಟನೇ ಬ್ರೇಕ್ ಹಾಕುವ ವಾಹನ ಸವಾರರು, ‘ಬಾರುಕೋಲು ಬೀಸುತ್ತ ಬಂಡಿ ಓಡಿಸುತ್ತಿರುವ ರೈತ’ನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಿಂಡು ಹಿಂಡು ವಾಹನಗಳನ್ನು ನೋಡಿ ನೋಡಿ ಸಾಕಾಗಿ ಹೋದವರು ಹಳ್ಳಿ ಕೃಷಿ ಬದುಕಿನ ಎತ್ತಿನ ಕಂಡು ನೋಡಿ ‘ವಾರೆ ವ್ಹಾ’ ಎನ್ನುತ್ತಿದ್ದಾರೆ.
ಜೋಡೆತ್ತ ಕಟಿಗೊಂಡು, ಬಂಡೀಯ ಹೊಡಕಂಡು..
ಅಲಂಕೃತ ಬಿಳಿಯ ಜೋಡೆತ್ತುಗಳು, ಕುಸುರಿ ಕಲೆಯೊಂದಿಗೆ ನಿರ್ಮಿಸಿದ ಬಂಡಿ, ಸುತ್ತ ಒಪ್ಪ ಹೋರಣವಾಗಿ ಜೋಡಿಸಿಟ್ಟ ಗ್ರಾಮೀಣ ಸೊಗಡಿನ ಹಲವು ವಸ್ತುಗಳು ಸಾರ್ವಜನಿಕರಿಗೆ ಮುದ ನೀಡುತ್ತಿವೆ. ತಹಸೀಲ್ ಕಾರ್ಯಾಲಯಕ್ಕೆ ಕೆಲಸ ಕಾರ್ಯಗಳಿಗೆ ಬಂದ ಗ್ರಾಮೀಣ ಪ್ರದೇಶದ ಜನರು ‘ಕರಿಯತ್ತ ಕಾಳಿಂಗ, ಬಿಳಿಯೆತ್ತ ಮಾಲಿಂಗ’ ಎಂದು ಮನದೊಳಗೆ ಗುನುಗುತ್ತಿದ್ದಾರೆ.
ಕಲಾವಿದ ದೇವೇಂದ್ರ ಹುಡಾ ಅವರ ಕೈಚೆಳಕ
ದಸರಾ ಮಹೋತ್ಸವ ಆರಂಭಕ್ಕೂ ಮುನ್ನ ಸಾರ್ವಜನಿಕರನ್ನು ಗಮನ ಸೆಳೆಯುತ್ತಿರುವ ಗಾಂಧಿಸರ್ಕಲ್ನ ಹಳ್ಳಿಗಾಡಿನ ಎತ್ತಿನ ಬಂಡಿ ಮಾದರಿಯ ನಿರ್ಮಾತೃ ಸೃಜನಶೀಲ ಕಲಾವಿದ ದೇವೇಂದ್ರ ಹುಡಾ ಅವರು. ತಮ್ಮ ಕಲಾಚಿತ್ರಗಳ ಮೂಲಕ ಹಲವು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿರುವ ಅವರು ಕಲಾ ಶಿಕ್ಷಕರು. ಹುಡಾ ಅವರು ಬಂಡಿ ಮಾದರಿಯನ್ನು ತಯಾರಿಸುವ ದಸರಾ ಮಹೋತ್ಸವಕ್ಕೆ ತಮ್ಮದೇ ಆದ ರೀತಿಯಲ್ಲಿ ಕಲಾ ಸೇವೆ ನೀಡಿರುವ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.