ಸಿಂಧನೂರು: ಮಳೆ, ಸೊಳ್ಳೆ ಹಾವಳಿ, ಶೀತಗಾಳಿಯಿಂದ ಅನಾರೋಗ್ಯ : ಮಕ್ಕಳ ಆಸ್ಪತ್ರೆಗಳು ಫುಲ್ !

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 09

ಕಳೆದ ಹಲವು ದಿನಗಳಿಂದ ನಿರಂತರ ಮಳೆ, ಸೊಳ್ಳೆಗಳ ಹಾವಳಿ, ಶೀತಗಾಳಿ ಹಾಗೂ ಮೋಡಮುಚ್ಚಿದ ವಾತಾವರಣದಿಂದಾಗಿ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ನಗರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಮಕ್ಕಳ ಆಸ್ಪತ್ರೆಗಳು ತುಂಬಿಹೋಗಿವೆ.
ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಶಂಕಿತ ಡೆಂಗೆ, ಮಲೇರಿಯಾ ಪ್ರಕರಣಗಳು ಮಕ್ಕಳನ್ನು ಕಾಡುತ್ತಿದ್ದು, ಪಾಲಕರಲ್ಲಿ ಆತಂಕ ಮನೆ ಮಾಡಿದೆ. ಬೆಳಿಗ್ಗೆಯಿಂದಲೇ ಗ್ರಾಮೀಣ ಪ್ರದೇಶದ ಪಾಲಕರು ಮಕ್ಕಳನ್ನು ನಗರದ ಆಸ್ಪತ್ರೆಗಳಿಗೆ ಕರೆದುಕೊಂಡು ಬರುತ್ತಿದ್ದಾರೆ. ನಗರದ ಪ್ರದೇಶದ ಮಕ್ಕಳ ಪಾಲಕರೂ ಕೂಡ ಆಸ್ಪತ್ರೆಯತ್ತ ಮುಖಮಾಡುತ್ತಿದ್ದಾರೆ.
ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವ ಸವಾಲು
ಹವಾಮಾನ ವೈಪರೀತ್ಯದಿಂದ ಪಾಲಕರಿಗೆ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ. ಮಕ್ಕಳಲ್ಲಿ ಶೀತ, ಜ್ವರ ಹಾಗೂ ಕೆಮ್ಮು ಹೆಚ್ಚುತ್ತಿರುವುದರಿಂದ ಮಕ್ಕಳ ತಪಾಸಣೆ ತಜ್ಞರ ಬಳಿ ತೆರಳುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ಆಸ್ಪತ್ರೆಯ ಮಕ್ಕಳ ವೈದ್ಯರ ಕೊರತೆ ಸೇರಿದಂತೆ ಅನಾನುಕೂಲತೆಯಿಂದಾಗಿ ಬಹಳಷ್ಟು ಪೋಷಕರು ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯರ ಬಳಿಗೆ ತೆರಳುತ್ತಿದ್ದಾರೆ. “ಸಸಿ ಪಸಿ ಹಚ್ಚಿ ಏಳೆಂಟು ಸಾವ್ರ ದುಡಿದಿದ್ವಿ ರ‍್ರಿ, ಈ ಮಕ್ಕಳ ಹುಷಾರಿಲ್ಲದದಕ ತರ‍್ಸಾಕ ಎಲ್ಲಾ ರೊಕ್ಕಾ ಖಾಲಿ ಆದ್ವು. ಸರ್ಕಾರಿ ಆಸ್ಪತ್ರೆಗೋದ್ರ ನೋಡೆಕಂಬರ ಇಲ್ರಿ, ಹಿಂಗಾಗಿ ಖಾಸ್ಗಿ ದವಾಖಾನ್ಯಾಗ ತೋರಿಸೀವಿ. ಜ್ವರ, ಕೆಮ್ಮು, ನಗಡಿ ಹೋಗೈತಿ. ಹುಷಾರಾಗ್ಯಾನ’ ಎಂದು ಪಾಲಕರೊಬ್ಬರು ಮಗನ ಯೋಗಕ್ಷೇಮದ ಬಗ್ಗೆ ಪ್ರತಿಕ್ರಿಯಿಸಿದರು.

Namma Sindhanuru Click For Breaking & Local News
ಸಿಂಧನೂರಿನ ಖಾಸಗಿ ಆಸ್ಪತ್ರೆಯ ಮುಂದೆ ಸೋಮವಾರ ಬೆಳಿಗ್ಗೆ ಮಕ್ಕಳ ಚಿಕಿತ್ಸೆಗಾಗಿ ಬಂದಿದ್ದ ಪೋಷಕರು ಸರದಿ ಸಾಲಲ್ಲಿ ನಿಂತಿದ್ದು ಕಂಡುಬಂತು.

ಬೆಳಿಗ್ಗೆ 9.30 ಗಂಟೆ ವೇಳೆಗೆ 60 ಕ್ಕೂ ಹೆಚ್ಚು ಚೀಟಿ
ನಗರದ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.30 ಗಂಟೆಗೂ ಮುಂಚೆ ಚಿಕಿತ್ಸೆಗಾಗಿ ೬೦ಕ್ಕೂ ಹೆಚ್ಚು ಮಕ್ಕಳ ಹೆಸರುಗಳನ್ನು ನೋಂದಣಿ ಮಾಡಿಸಿದ್ದು ಕಂಡುಬಂತು. ಸರ್ಕಾರಿ ಸೇರಿದಂತೆ ಖಾಸಗಿ ಮಕ್ಕಳ ಆಸ್ಪತ್ರೆಯ ಮುಂದೆ ಪಾಲಕರು ಮತ್ತು ಮಕ್ಕಳೇ ಗುಂಪೇ ಕಂಡುಬರುತ್ತಿದೆ. ನಗರದ ಖಾಸಗಿ ಆಸ್ಪತ್ರೆಯೊಂದರ ಮುಂದೆ ಬೆಳಿಗ್ಗೆಯಿಂದಲೇ ಚಿಕಿತ್ಸೆಗಾಗಿ ಪಾಲಕರು ಸರದಿ ಸಾಲಿನಲ್ಲಿ ನಿಂತಿದ್ದು, ಸೋಮವಾರ ಕಂಡುಬಂತು. ನಗರ ಸೇರಿದಂತೆ ದೂರದ ಊರಿಂದ ಮಕ್ಕಳ ಆಸ್ಪತ್ರೆಯತ್ತ ಬರುತ್ತಿರುವ ಪಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊರರೋಗಿಗಳಂತೆ ಒಳರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೆಚ್ಚಿನ ಅನಾರೋಗ್ಯ ಸಮಸ್ಯೆಯಿರುವ ಮಕ್ಕಳಿಗೆ ತಜ್ಞ ವೈದ್ಯರು ಅಡ್ಮಿಟ್ ಆಗಲು ಹೇಳುತ್ತಿದ್ದು, ಕೆಲ ಖಾಸಗಿ ಆಸ್ಪತ್ರೆಗಳು ಬಹುತೇಕ ತುಂಬಿರುವುದು ಕಂಡುಬAದಿತು.
ಮೈಮರೆತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ : ಆರೋಪ
ನಿರಂತರ ಮೋಡಮುಚ್ಚಿದ ವಾತಾವರಣ, ಮಳೆ, ಸೊಳ್ಳೆಗಳ ಹಾವಳಿ ಹಾಗೂ ಶೀತಗಾಳಿಯಿಂದಾಗಿ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಿ ಪಾಲಕರು ವಿಪರೀತ ಸಮಸ್ಯೆ ಅನುಭವಿಸುತ್ತಿದ್ದರೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಪೂರ್ಣ ಮೈ ಮರೆತಿದೆ, ಡಿಎಚ್‌ಒ ಅವರು ಈ ಬಗ್ಗೆ ಕನಿಷ್ಠ ಕಾಳಜಿಯನ್ನು ವಹಿಸಿಲ್ಲ ಎಂದು ಪಾಲಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಘಟಕ ತೆರೆಯಲು ಆಗ್ರಹ
ಜ್ವರ, ನೆಗಡಿ, ಕೆಮ್ಮು ಹಾಗೂ ವೈರಲ್ ಫೀವರ್‌ನಿಂದ ತಾಲೂಕಿನಾದ್ಯಂತ ಬಹಳಷ್ಟು ಮಕ್ಕಳು ಅನಾರೋಗ್ಯಪೀಡಿತರಾಗಿದ್ದು, ಕೂಡಲೇ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಗಳು ಎಚ್ಚೆತ್ತುಕೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ವಿಶೇಷ ತಪಾಸಣೆ ಹಾಗೂ ಚಿಕಿತ್ಸಾ ಘಟಕ ತೆರೆಯಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ ಒತ್ತಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *