(ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 24
ಕೆಲ ರಾಜಕಾರಣಿಗಳು, ಅವರ ಬೆಂಬಲಿಗರು, ಖಾಸಗಿ ವ್ಯಕ್ತಿಗಳು, ಕೆಲ ಸಂಘ-ಸಂಸ್ಥೆಗಳ ಅತಿರೇಕದ ಪ್ರಚಾರದ ಗೀಳಿನಿಂದಾಗಿ ನಗರದ ನಾಗರಿಕರು ಪ್ರಾಣಸಂಕಟ ಎದುರಿಸುತ್ತಿದ್ದಾರೆ. ಪ್ರಮುಖ ರಸ್ತೆ ಬದಿಗಳು ಸೇರಿದಂತೆ ಕಾಲೋನಿಗಳ ಸಂದಿ-ಗೊಂದಿಗಳಲ್ಲಿ ಮನಬಂದಂತೆ, ಅನಧಿಕೃತವಾಗಿ ಪ್ಲೆಕ್ಸ್, ಬಂಟಿಗ್ಸ್, ಕಟೌಟ್ಗಳನ್ನು ಹಾಕುತ್ತಿರುವುದರಿಂದ ಜನಸಾಮಾನ್ಯರು ಇನ್ನಿಲ್ಲದ ಕಿರಿಕಿರಿಗೆ ಗುರಿಯಾಗಿದ್ದಾರೆ.
ಯಾವೋದೋ ಸಭೆ, ಸಮಾರಂಭಗಳಿರಲಿ, ಜನ್ಮದಿನಗಳಿರಲಿ ಅವರವರ ಅಭಿಮಾನಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಮನಸೋಇಚ್ಛೆ ಬ್ಯಾನರ್, ಬಂಟಿಗ್ಸ್ಗಳನ್ನು ಹಾಗೂ ಕಟೌಟ್ಗಳನ್ನು ರಸ್ತೆ ಬದಿ ಹಾಗೂ ಡಿವೈಡರ್ ಮಧ್ಯೆ ಕಟ್ಟುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದರೂ, ನಗರಸಭೆ ಮಾತ್ರ ತುಟಿಪಿಟಕ್ಕೆನ್ನದೇ ಸುಮ್ಮನಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ‘ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ 1981’ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ಎಡವಿರುವುದಕ್ಕೆ ಸಾಕ್ಷಿಯಾಗಿದೆ.
ನಗರದ ಗಂಗಾವತಿ, ಕುಷ್ಟಗಿ, ರಾಯಚೂರು ರಸ್ತೆಯ ಮಾರ್ಗಗಳಲ್ಲಿ ಮುಂಬದಿಯ ವಾಹನಗಳು ಕಾಣದಂತೆ, ಸವಾರರ ಕಣ್ಣಿಗೆ, ವಾಹನಗಳಿಗೆ ತಾಕುವಂತೆ ಪ್ಲೆಕ್ಸ್ಗಳನ್ನು ಹಾಕಿದರೂ ನಗರಸಭೆ ಅಧಿಕಾರಿಗಳು ಕಿಂಚಿತ್ ಕ್ರಮ ಕೈಗೊಳ್ಳದೇ ‘ಮೌನ’ಕ್ಕೆ ಶರಣಾಗಿರುವುದು ಸಾರ್ವಜನಿಕರು ಹಾಗೂ ವಾಹನ ಸವಾರರನ್ನು ಕೆರಳುವಂತೆ ಮಾಡಿದೆ.
ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ ಏನು ಹೇಳುತ್ತದೆ
ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ 1981ರ ಅನ್ವಯ ನಗರಸಭೆಯ ಪೂರ್ವ ಅನುಮತಿ ಪಡೆಯದೇ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾಯ್ದೆಯ ಕಲಂ3ರ ಪ್ರಕಾರ ಅನುಮತಿ ಇಲ್ಲದೇ ಪ್ರಚಾರ ಸಾಮಗ್ರಿಗಳನ್ನು ಅಳವಡಿಸಿದವರಿಗೆ 6 ತಿಂಗಳು ಜೈಲು ಶಿಕ್ಷೆ, 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಇಲ್ಲವೇ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ರಾಜ್ಯ ಸರ್ಕಾರ 2016ರಲ್ಲಿ ಫ್ಲೆಕ್ಸ್ ನಿಷೇಧ ಹೇರಿದೆ. ಅನಧಿಕೃತವಾಗಿ ಫ್ಲೆಕ್ಸ್ ಅಳಡಿಸುವ ವ್ಯಕ್ತಿಗಳ ವಿರುದ್ಧ ‘ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ-1981’ ಅನ್ವಯ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಕ್ರಿಮಿನಲ್ ಸ್ವರೂಪದ ಪ್ರಕರಣವೆಂದು ಪರಿಗಣಿಸಲಾಗುತ್ತದೆ.
ಅನುಮತಿ ನೀಡಲು ನಿಯಮಗಳು, ಮಾರ್ಗಸೂಚಿಗಳೇನು ?
ಪ್ಲೆಕ್ಸ್ ಅಳವಡಿಕೆಗೆ ಮುನ್ನ ಕಾರ್ಯಕ್ರಮ ಆಯೋಜಕರು ಅಥವಾ ಸಾರ್ವಜನಿಕರು ಅನುಮತಿ ಪ್ರಾಧಿಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು, ಪ್ಲೆಕ್ಸ್, ಬ್ಯಾನರ್ ಅಳವಡಿಸಲು ಅನುಮತಿ ನೀಡುವ ಸಂದರ್ಭದಲ್ಲಿ ಕನಿಷ್ಠ ಸಮಯದ ಮಟ್ಟಿಗೆ ಅನುಮತಿ ನೀಡಬೇಕು ಹಾಗೂ ಪ್ಲೆಕ್ಸ್ ಹಾಕುವ ಮತ್ತು ತೆರವುಗೊಳಿಸುವ ದಿನಾಂಕ ಮತ್ತು ಸಮಯವನ್ನು ಅನುಮತಿ ಪತ್ರದಲ್ಲಿಯೇ ನಮೂದಿಸಲಾಗುವುದು. ಅನುಮತಿ ಕೋರಿರುವವರೇ ತೆರವು ಕಾರ್ಯವನ್ನು ಸಮರ್ಪಕವಾಗಿ ಮಾಡಿಸುವುದು ಹಾಗೂ ತೆರವು ಮಾಡಿದ ಬ್ಯಾನರ್ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಪ್ಲೆಕ್ಸ್ ಅಳವಡಿಸುವ ಸ್ಥಳದಲ್ಲಿ ಯಾವುದೇ ವಿವಾದಗಳಿದ್ದಲ್ಲಿ ಅನುಮತಿ ನೀಡಬಾರದು. ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಂದರೆ ಆಗುವಂತಿರಬಾರದು. ಬ್ಯಾನರ್ಗಳಲ್ಲಿ ಯಾವುದೇ ವಿವಾದಾತ್ಮಕ ಅಂಶಗಳು ಅಥವಾ ಬೇರೆ ಧರ್ಮ, ಸಂಘಟನೆ, ಪಕ್ಷ, ಇತ್ಯಾದಿ ಭಾವನೆಗಳಿಗೆ ಧಕ್ಕೆ ಬರುವಂತಿರಬಾರದು. ಅಳವಡಿಸಲಾದ ಪ್ಲೆಕ್ಸ್ಗಳ ರಕ್ಷಣೆಯ ಹೊಣೆ ಸಂಪೂರ್ಣವಾಗಿ ಕಾರ್ಯಕ್ರಮ ಆಯೋಜಕರು ಅಥವಾ ಮನವಿ ಮಾಡಿದವರದ್ದೇ ಆಗಿದ್ದು, ಬ್ಯಾನರ್ ಅಳವಡಿಸುವ ಸ್ಥಳದಲ್ಲಿ ಎಲ್ಲ ಆಗುಹೋಗುಗಳು ದಾಖಲಾಗುವಂತೆ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ಪ್ಲಾಸ್ಟಿಕ್ ಪ್ಲೆಕ್ಸ್ ಮತ್ತು ಬ್ಯಾನರ್ ಗಳ ಅಳವಡಿಕೆ ನಿಷೇಧಿಸಲಾಗಿದೆ.ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಅನುಮತಿ ಪ್ರಾಧಿಕಾರ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸ್ವಾಗತ ಕಮಾನಿನ ಕಟೌಟ್ ಬಿದ್ದು, ಮೂವರು ಗಾಯಗಳಾದ ಘಟನೆ
ಸಿಂಧನೂರಿನ ಹೃದಯಭಾಗದಲ್ಲಿರುವ ಗಾಂಧಿ ಸರ್ಕಲ್ನಲ್ಲಿ ಸೋಮವಾರ ಕಬ್ಬಿಣದ ಸ್ವಾಗತ ಕಮಾನಿನ ಕಟೌಟ್ ಬಿದ್ದು ಹಲವರು ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ತಹಸೀಲ್ ಕಾರ್ಯಾಲಯ,
ಕೋರ್ಟ್ ಬಳಿ ಹಾಗೂ ಸಾರ್ವಜನಿಕರು ಹೆಚ್ಚು ಓಡಾಡುವ ರಸ್ತೆಯಲ್ಲಿಯೇ ನಿಯಮಬಾಹಿರವಾಗಿ ಸ್ವಾಗತ ಕಮಾನು ಅಳವಡಿಸಲು ಅನುಮತಿ ಕೊಟ್ಟವರು ಯಾರು ? ಜನರ ಪ್ರಾಣಕ್ಕೆ ಧಕ್ಕೆಯಾದರೆ ಹೊಣೆ ಯಾರದ್ದು ? ಎಂದು ಸಾರ್ವಜನಿಕರು ಧ್ವನಿ ಎತ್ತಿದ್ದಾರೆ.
ನಿಯಮಗಳು ಗಾಳಿಪಾಲಾದವೇ ?
ಹಲವು ನಿಯಮ, ನಿಬಂಧನೆಗಳು ಇದ್ದರೂ ಹಾಗೂ ನಗರದ ರಸ್ತೆಗಳಲ್ಲಿ ಬಹಿರಂಗವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಫ್ಲೆಕ್ಸ್ ಸೇರಿದಂತೆ ಪ್ರಚಾರ ಸಾಮಗ್ರಿಗಳನ್ನು ಅಳವಡಿಸಿದರೂ ನಗರಸಭೆಯ ಅಧಿಕಾರಿಗಳು ಕ್ರಮ ಜರುಗಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿದೆ. ಇತ್ತ ನಗರಸಭೆಗೆ ತೆರಿಗೆಯೂ ಇಲ್ಲ, ಅತ್ತ ಹಾಡಹಗಲೇ ನಿಯಮ ಉಲ್ಲಂಘನೆಯ ಜೊತೆಗೆ ಸಾರ್ವಜನಿಕರಿಗೆ ಇನ್ನಿಲ್ಲದ ಕಿರುಕುಳ ಎದುರಾಗಿದೆ. ಇದನ್ನು ನೋಡಿಯೂ ನೋಡದಂತೆ ನಗರಸಭೆ ಮೌನಕ್ಕೆ ಜಾರಿರುವುದು ಗಮನಿಸಿದರೆ ನಿಯಮಗಳು ಗಾಳಿಪಾಲಾದವೇ ಎಂದು ಸಾರ್ವಜನಿಕ ಪ್ರಶ್ನಿಸಿದ್ದಾರೆ.
‘ಅನಧಿಕೃತ, ಅಸುರಕ್ಷಿತ ಬ್ಯಾನರ್, ಫ್ಲೆಕ್ಸ್, ಬಂಟಿಗ್ಸ್, ಕಟೌಟ್ ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ’ ?
ದಿನಾಂಕ: 22-07-2024 ಸೋಮವಾರದಂದು ನಗರದ ಗಾಂಧಿ ಸರ್ಕಲ್ನಲ್ಲಿ ಸ್ವಾಗತ ಕಮಾನಿನ ಕಟೌಟ್ ಬಿದ್ದು ಹಲವರು ಗಾಯಗೊಂಡ ಘಟನೆ ನಾಗರಿಕರನ್ನು ಬೆಚ್ಚಿಬೀಳಿಸಿದ್ದು, ಒಂದು ವೇಳೆ ಬಹಳಷ್ಟು ಜನರು ಮೇಲೆ ಈ ಕಟೌಟ್ ಬಿದ್ದಿದ್ದರೆ ದೊಡ್ಡ ಆಪತ್ತೇ ಕಾದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯದೇ ನಗರಸಭೆ ಸೇರಿದಂತೆ ಅನುಮತಿ ಪ್ರಾಧಿಕಾರಗಳು ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಜನಸಾಮಾನ್ಯರ ಹಿತ ಕಾಯದೇ ಹೋದರೆ, ಸಾರ್ವಜನಿಕರಿಗೆ ಹಾನಿ ಕಟ್ಟಿಟ್ಟಬುತ್ತಿ ಎನ್ನುವುದು ನಾಗರಿಕರ ಅಳಲಾಗಿದೆ.
‘ಕೋರ್ಟ್, ತಹಸಿಲ್ ಕಚೇರಿ ಮುಂದೆಯೇ ಹೀಗಾದರೆ ಉಳಿದ ಕಡೆ ಹೇಗೆ’ ?
ಸಿಂಧನೂರಿನ ಜಿಲ್ಲಾ ನ್ಯಾಯಾಲಯದ ಮುಂದೆಯೇ ಹಾಗೂ ತಾಲೂಕು ಆಡಳಿತ ಕಚೇರಿಯ ಎದುರಿನಲ್ಲೇ ಅನಧಿಕೃತವಾಗಿ ಫ್ಲೆಕ್ಸ್, ಬಂಟಿಗ್ಸ್, ಕಟೌಟ್ ಹಾಕಿ ಸಾರ್ವಜನಿಕರಿಗೆ ಕಿರುಕುಳ ಕೊಡುವುದಲ್ಲದೇ, ಹಾನಿಯುಂಟು ಮಾಡುವ ಘಟನೆಗಳು ನಡೆದರೂ ನಗರಸಭೆ ಆಡಳಿತ, ಪೊಲೀಸ್ ಇಲಾಖೆ, ತಾಲೂಕು ಆಡಳಿತ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕ್ರಮ ಜರುಗಿಸದೇ ಕೈಚೆಲ್ಲಿ ಕುಳಿತಿರುವುದು ನೋಡಿದರೆ, ಇನ್ನು ಉಳಿದ ಕಡೆ ಪರಿಸ್ಥಿತಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.