ಸಿಂಧನೂರು: ಕಲಬೆರೆಕೆ ಆಹಾರ ವಿತರಿಸಿದರೆ ಕಾನೂನು ಕ್ರಮ : ಸುರಕ್ಷತೆ ಅಧಿಕಾರಿ ಗುರುರಾಜ ಎಚ್ಚರಿಕೆ

Spread the love

ನಮ್ಮ ಸಿಂಧನೂರು, ಆಗಸ್ಟ್ 30
ಅವಧಿ ಮೀರಿದ ಪದಾರ್ಥಗಳನ್ನು ಮಾರಾಟ ಮಾಡಿದವರ ಹಾಗೂ ಕಲಬೆರೆಕೆ ಆಹಾರ ವಿತರಿಸಿದವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸುರಕ್ಷತೆ ಅಧಿಕಾರಿ ಗುರುರಾಜ ಹೇಳಿದರು.
ಅವರು ನಗರದ ಗಂಗಾವತಿ ಮಾರ್ಗದ ರಸ್ತೆಯಲ್ಲಿರುವ ಟ್ರೆಂಡ್ಸ್ ಪಕ್ಕದ ಚಾಟ್ಸ್ ಆ್ಯಂಡ್ ಗ್ರಿರ್ಲ್ಸ್ , ಹೋಟೆಲ್ ಮತ್ತು ರೆಸ್ಟೋರೆಂಟ್, ಬೇಕರಿ, ಕಿರಾಣಿ ಅಂಗಡಿಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ವಿಶೇಷ ತಪಾಸಣೆ ನಡೆಸಲು ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಸಚಿವರ ಸೂಚನೆಯ ಮೇರೆಗೆ ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ರಾಯಚೂರು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಹಾರ ಸುರಕ್ಷತಾ ಕಾರ್ಯಗಾರದಲ್ಲಿ ಮಾತನಾಡಿದರು.‌ “ಆಹಾರ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ. ಆಹಾರವನ್ನು ತಯಾರಿಸುವವರು, ಮಾರಾಟ ಮಾಡುವವರು, ಸಂಸ್ಕರಣೆ ಮಾಡುವವರು ಗ್ರಾಹಕರನ್ನು ದೇವರೆಂದು ಭಾವಿಸುತ್ತಾರೆ. ಆದ್ದರಿಂದ ಗ್ರಾಹಕರಿಗೆ ಯಾವುದೇ ರೀತಿಯ ಮೋಸ ಮಾಡಬಾರದು. ಗ್ರಾಹಕರಿಗೆ ಮೋಸ ಮಾಡಿದರೆ ದೇವರಿಗೆ ಮೋಸ ಮಾಡಿದ ಹಾಗೆ ಎಂದು ತಿಳಿಸಿದರು.
“ಸ್ವಚ್ಛತೆ ಕಾಯ್ದುಕೊಳ್ಳಿ”
“ಆಹಾರವನ್ನು ನಿರ್ವಹಿಸುವವರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅಡುಗೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಆಹಾರವನ್ನು ಸ್ವಚ್ಛವಾಗಿರಿಸಲು ಶುದ್ಧ ನೀರಿನಿಂದ ಹಣ್ಣು ಮತ್ತು ತರಕಾರಿಗಳನ್ನು ತೊಳೆಯಬೇಕು, ಕಚ್ಚಾ ಮತ್ತು ತಯಾರಿಸಿದ ಆಹಾರವನ್ನು ಬೇರೆ ಬೇರೆಯಾಗಿರಿಸಿ,ಆಹಾರವನ್ನು ತಯಾರಿಸಿದ ಎರಡು ತಾಸಿನೊಳಗೆ ಶೀತಲೀಕರಣ ವ್ಯವಸ್ಥೆಯಲ್ಲಿರಿಸಬೇಕು. ಆಹಾರ ತಿನ್ನುವುದಕ್ಕಿಂತ ಮುಂಚೆ ಅದು ಹಾಳಾಗಿದೆಯೋ ಕಲಬೆರಕೆಗೊಂಡಿದೆಯೋ ಎನ್ನುವುದನ್ನು ಪರೀಕ್ಷಿಸಿ, ಹಾಳಾದ ಮತ್ತು ಹಾನಿಗೊಳಗಾದ ಆಹಾರವನ್ನು ಸಾರ್ವಜನಿಕರು ಖರೀದಿಸಬಾರದು. ಆಹಾರ ವಸ್ತುಗಳನ್ನು ಸೇವಿಸುವಾಗ ನಮೂದಿಸಿದ ದಿನಾಂಕ ಮತ್ತು ಅವಧಿಯ ದಿನಾಂಕವನ್ನು ನೋಡಿ ಖರೀದಿಸಬೇಕು.ಸಾರ್ವಜನಿಕರು ಸಾಮಾನ್ಯ ಆಹಾರ ಕಲಬೆರೆಕೆಯನ್ನು ಪರೀಕ್ಷಿಸಲು www.fssai.gov.in ಗೆ DART ಪುಸ್ತಕವನ್ನು ಉಪಯೋಗಿಸಿ. ಇದರಿಂದ ಕಲಬೆರೆಕೆ ವಸ್ತುಗಳನ್ನು ಕಂಡು ಹಿಡಿಯಬಹುದು ಎಂದು ವಿವರಿಸಿದರು.
“ನೋಂದಣಿ, ಪರವಾನಗಿ ಇಲ್ಲದಿದ್ದರೆ ಕ್ರಮ”
“ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಪ್ರಕಾರ (ಅನ್ವಯ) ತಾಲೂಕಿನಲ್ಲಿರುವ ಎಲ್ಲಾ ಆಹಾರ ವಸ್ತುಗಳ ತಯಾರಕರು/ಸಂಸ್ಕರಣೆ ಮಾಡುವವರು, ಸಾಗಣೆ ಮಾಡುವವರು, ವಿತರಕರು, ಮಾರಾಟಗಾರರು, ವಿತರಕರು ಕಡ್ಡಾಯವಾಗಿ ನೋಂದಣಿ ಮತ್ತು ಪರವಾನಗಿ ಪಡೆಯಬೇಕು. ನೋಂದಣಿ ಹಾಗೂ ಪರವಾನಗಿ ಪಡೆಯದೇ ಇದ್ದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅನ್ವಯ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
“ಕೃತಕ ಬಣ್ಣ ಬಳಸುವುದಕ್ಕೆ ನಿರ್ಬಂಧ”
“ವೆಜ್, ಚಿಕನ್, ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣವನ್ನು ಬಳಸುವುದನ್ನು ನಿರ್ಬಂಧಿಸಿದೆ. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. 7 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು” ಎಂದು ಮಾಹಿತಿ ನೀಡಿದರು.
ನಗರಸಭೆಯ ಆಹಾರ ನಿರೀಕ್ಷಕ ಕಿಶನ್‌ರಾವ್, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ನಾಮದೇವಗೌಡ, ಉಪಾಧ್ಯಕ್ಷ ರಾಮಯ್ಯ ಶೆಟ್ಟಿ, ಬೇಕರಿ ಅಂಗಡಿಗಳ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಸಾವಜಿ ಹೋಟೆಲ್‌ಗಳ ಸಂಘದ ಅಧ್ಯಕ್ಷರಾದ ನಾಗರಾಜ ಕಾಟ್ವಾ, ಹೋಟೆಲ್‌ಗಳ ಅಧ್ಯಕ್ಷ ಪ್ರದೀಪ್, ಲಿಂಗಪ್ಪ ಹಾಗೂ ಸಾರ್ವಜನಿಕರು, ಕಿರಾಣಿ ವ್ಯಾಪಾರಸ್ಥರು, ಹೋಟೆಲ್ ಉದ್ಯಮಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *