ನಮ್ಮ ಸಿಂಧನೂರು, ಅಕ್ಟೋಬರ್ 1
ಸಿಂಧನೂರು ತಾಲೂಕಿನ ಜಾಲವಾಡಗಿ ಗ್ರಾಮದ ಹೊರವಲಯದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 6 ಟಿಪ್ಪರ್‌ಗಳನ್ನು ರಾಯಚೂರು ಗ್ರಾಮೀಣ ಪೊಲೀಸರು ಸೋಮವಾರ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಪುಟ್ಟಮಾದಯ್ಯ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ರಾಯಚೂರಿನ ಸಾತ್ ಮೈಲ್ ಕ್ಯಾಂಪ್ ಬಳಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಜಾಲವಾಡಗಿಯ ಹೊಲವೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಮರಳನ್ನು ಅನಧಿಕೃತವಾಗಿ ಟಿಪ್ಪರ್‌ನಲ್ಲಿ ಮಾನ್ವಿ ಪಟ್ಟಣದ ಮುಖಾಂತರ ರಾಯಚೂರಿನ ಸಾತ್‌ಮೈಲ್ ಕ್ಯಾಂಪ್ ಮಾರ್ಗವಾಗಿ ಬೀದರ್ ಕಡೆ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದಿದ್ದಾರೆ ಎಂದು ಗೊತ್ತಾಗಿದೆ.
ಅ.2ಕ್ಕೆ ಪರವಾನಗಿ, ಸೆ.30ರಂದೇ ಸಾಗಣೆ !
ಅಕ್ಟೋಬರ್ 2ಕ್ಕೆ ಪರವಾನಗಿ ಪಡೆದು, ಸೆ.30ರಂದೇ ಟಿಪ್ಪರ್‌ಗಳ ಮೂಲಕ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳನ್ನು ಸಾಗಿಸುತ್ತಿರುವುದು ತನಿಖೆಯ ಸಮಯದಲ್ಲಿ ಬಯಲಾಗಿದೆ. ಕಡಿಮೆ ಟನ್‌ಗೆ ರಾಯಲ್ಟಿ ಪಾವತಿಸಿ ಹೆಚ್ಚು ಮರಳನ್ನು ಸಾಗಿಸಿದ್ದಲ್ಲದೇ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಯವರು ದಾಳಿ ನಡೆಸಿ ಕ್ರಮಕ್ಕೆ ಮುಂದಾದರೂ, ಆದರೆ, ಸಂಬಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ಸಾಗಣೆದಾರರ, ದಾಸ್ತಾನುದಾರರ ಮೇಲೆ ಕ್ರಮಕ್ಕೆ ಮುಂದಾಗದೇ ಇರುವುದು ಸಾರ್ವಜನಿಕರ ಗುಮಾನಿಗೆ ಕಾರಣವಾಗಿದೆ.