ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 03
ಒಳಮೀಸಲಾತಿ ಅನುಷ್ಠಾನಗೊಳಿಸಿ ಅಂಗೀಕರಿಸುವಂತೆ ಆಗ್ರಹಿಸಿ, ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ರಾಯಚೂರು ಜಿಲ್ಲೆ ಬಂದ್‌ಗೆ ಕರೆ ನೀಡಿದ್ದು, ಅದರ ಭಾಗವಾಗಿ ಗುರುವಾರ ಸಿಂಧನೂರು ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಕಂಡುಬಂತು.
ಅಕ್ಟೋಬರ್ 3ರಂದು ಬಂದ್ ಆಚರಿಸುವುದಾಗಿ ಹೋರಾಟ ಸಮಿತಿ ಈ ಮುಂಚೆಯೇ ಆಟೋ ಮೂಲಕ ಮೈಕ್ ಪ್ರಚಾರ ನಡೆಸಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿದ್ದರು. ರಾಯಚೂರು, ಗಂಗಾವತಿ, ಕುಷ್ಟಗಿ ಹಾಗೂ ಮಸ್ಕಿ ಮಾರ್ಗದ ರಸ್ತೆಯ ಅಂಗಡಿ ಮುಂಗಟ್ಟುಗಳು, ಹಳೆ ಬಜಾರ್, ಎಪಿಎಂಸಿ ಮಾರುಕಟ್ಟೆ ಪ್ರದೇಶ ಅಂಗಡಿಗಳು ಬೆಳಿಗ್ಗೆಯಿಂದಲೇ ಸ್ಥಗಿತಗೊಂಡಿದ್ದವು. ಸಿಂಧನೂರು ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಯಚೂರು, ಗಂಗಾವತಿ, ಮಸ್ಕಿ ಹಾಗೂ ಕುಷ್ಟಗಿ ಮಾರ್ಗದ ರಸ್ತೆಯ ಹೊರ ಭಾಗದಲ್ಲಿ ಪೊಲೀಸರು ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಿದ್ದು ಕಂಡುಬಂತು.
ವ್ಯಾಪಕ ಪೊಲೀಸ್ ಬಂದೋಬಸ್ತ್
ನಗರದ ತಹಸಿಲ್ ಕಾರ್ಯಾಲಯದ ಮುಂಭಾಗದಲ್ಲಿ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯಿಂದ ಬಹಿರಂಗ ಸಭೆ ಆಯೋಜಿಸಿರುವ ಹಿನ್ನೆಲೆಯಲ್ಲಿ ಟೆಂಟ್ ಹಾಕಲಾಗಿದ್ದು, ಈ ಹಿನ್ನೆಲೆಯಲ್ಲಿ ಗಾಂಧಿ ಸರ್ಕಲ್‌ನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಸ್ ನಿಲ್ದಾಣ ಸೇರಿದಂತೆ ಅಲ್ಲಲ್ಲಿ ಡಿಆರ್ ವಾಹನ ವ್ಯವಸ್ಥೆಗೊಳಿಸಲಾಗಿದೆ. ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳದಲ್ಲಿ ಬಂದೋಬಸ್ತ್ನಲ್ಲಿ ನಿರತರಾಗಿದ್ದರು.
ಸಾರಿಗೆ ಬಸ್ ಸಂಚಾರ ಸ್ಥಗಿತ
ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ಬಸ್ ನಿಲ್ದಾಣ ಹಾಗೂ ಆವರಣದಲ್ಲಿ ಪ್ರಯಾಣಿಕರಿಲ್ಲದೇ ಬಿಕೋ ವಾತಾವರಣ ಕಂಡುಬಂತು. ಅಲ್ಲದೇ ಬಸ್ ಡಿಪೋ ಮುಂಭಾಗದಲ್ಲಿ ಕಾವಲಿಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.
ಹೋರಾಟ ಚುರುಕು
ನಗರದ ತಹಸಿಲ್ ಕಚೇರಿ ಮುಂಭಾಗದ ಹೋರಾಟ ಸ್ಥಳಕ್ಕೆ ಒಳ ಮೀಸಲಾತಿಗಾಗಿ ಐಕ್ಯ ಹೋರಾಟ ಸಮಿತಿಯ ಹೋರಾಟಗಾರರಾದ ಬಾಲಸ್ವಾಮಿ ಕೊಡ್ಲಿ, ನಾಗರಾಜ್ ಪೂಜಾರ್, ಬೋನವೆಂಚರ್, ಕರಿಯಪ್ಪ ಗುಡಿಮನಿ, ಎಚ್.ಎನ್.ಬಡಿಗೇರ, ಮಂಜುನಾಥ ಗಾಂಧೀನಗರ ಸೇರಿದಂತೆ ಹಲವು ಮುಖಂಡರು ಬೆಳಿಗ್ಗೆಯೇ ಆಗಮಿಸಿ, ಹೋರಾಟಕ್ಕೆ ಚುರುಕು ಮೂಡಿಸಿದರು.