ಸಿಂಧನೂರು: ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಸಾವು ಪ್ರಕರಣ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಅನಿರ್ದಿಷ್ಟಾವಧಿ ಧರಣಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 8

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಾಂಕ: 21-10-2024ರಂದು ಆರ್.ಎಚ್. ಕ್ಯಾಂಪ್-3ರ ಮಹಿಳೆ ಮೌಸಂಬಿ ಮಹೇಶ್ವರ ಮಂಡಲ್ ಹೆರಿಗೆಯ ನಂತರ ವೈದ್ಯಕೀಯ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆಂದು ಆರೋಪಿಸಿ, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಿ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಹಾಗೂ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವಂತೆ ಒತ್ತಾಯಿಸಿ, ನಮ್ಮ ಕರ್ನಾಟಕ ಸೇನೆ ವತಿಯಿಂದ ನಗರದ ತಹಸಿಲ್ ಕಚೇರಿ ಮುಂದೆ ಶುಕ್ರವಾರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಮಾತನಾಡಿ, “ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ವೈದ್ಯರು ಸರಿಯಾದ ಸಮಯಕ್ಕೆ ಬರದಿರುವುದಲ್ಲದೇ, ಖಾಸಗಿ ಆಸ್ಪತ್ರೆ ನಡೆಸುವ ಮೂಲಕ ಕರ್ತವ್ಯಲೋಪ ಎಸಗುತ್ತಿದ್ದಾರೆ. ಕಳೆದ ಅಕ್ಟೋಬರ್ 21ರಂದು ಆರ್.ಎಚ್.ಕ್ಯಾಂಪ್ 3ರ ಗರ್ಭಿಣಿ ಮಹಿಳೆ ಹೆರಿಗೆ ನಂತರ ಮೃತಪಟ್ಟಿರುವುದು ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷö್ಯಕ್ಕೆ ಸಾಕ್ಷಿಯಾಗಿದೆ. ಸುರಕ್ಷತ ಮಾತೃತ್ವ ಆಶ್ವಾಸನೆ (ಸುಮನ್) ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಲಕ್ಷö್ಯದ ಕಾರಣ ಮೇಲಿಂದ ಮೇಲೆ ಸಾವು-ನೋವುಗಳಾಗುತ್ತಿದ್ದರೂ ಅಧಿಕಾರಿಗಳಾಗಲೀ, ಚುನಾಯಿತ ಜನಪ್ರತಿನಿಧಿಗಳಾಗಲೀ ಕಾಳಜಿ ವಹಿಸದೇ ನಿರ್ಲಕ್ಷ್ಯ ತಾಳಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ರಾಜ್ಯ ಘಟಕದ ಕಾರ್ಯಾಧ್ಯಕ್ಷ ಉಮೇಶಗೌಡ ಮಾತನಾಡಿ, “ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ನಮ್ಮ ಸಂಘಟನೆಯ ಪದಾಧಿಕಾರಿಗಳಿಗೆ ಮೇಲಿಂದ ಮೇಲೆ ಸಾರ್ವಜನಿಕರಿಂದ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಈ ಕುರಿತು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಡಿಎಚ್‌ಒ ಅವರಿಂದಿಡಿದು ಸಿಎಂ ಅವರ ವರೆಗೂ ಮನವಿ ಸಲ್ಲಿಸಿ ಗಮನ ಸೆಳೆದರೂ ಸಂಪೂರ್ಣ ನಿರ್ಲಕ್ಷö್ಯ ತಾಳಲಾಗಿದೆ. ಅ.21ರಂದು ನಡೆದ ಮಹಿಳೆ ಸಾವಿನ ಪ್ರಕರಣ ಒಂದೇ ಅಲ್ಲ, ಹಲವು ಬಾರಿ ಆಸ್ಪತ್ರೆಯ ಲೋಪಗಳ ಬಗ್ಗೆ ಯಾರೊಬ್ಬರೂ ಸಾರ್ವಜನಿಕರಿಗೆ ಉತ್ತರಾದಾಯಿತ್ವ ಹೊಂದಿಲ್ಲದ ಕಾರಣ ಸಂಘಟನೆಯಿಂದ ಅನಿರ್ದಿಷ್ಟ ಹೋರಾಟ ಕೈಗೊಳ್ಳಲಾಗಿದೆ” ಎಂದು ಹೇಳಿದರು.

Namma Sindhanuru Click For Breaking & Local News

ವೆಂಕಟರಾವ್ ನಾಡಗೌಡರು ಶಾಸಕರಾಗಿದ್ದಾಗ ಸರ್ಕಾರಿ ಆಸ್ಪತ್ರೆ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು: ಬಸವರಾಜ ನಾಡಗೌಡ
ನಮ್ಮ ಕರ್ನಾಟಕ ಸೇನೆ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟ ಹೋರಾಟ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಅವರು, “ಈ ಹಿಂದೆ ಶಾಸಕ ವೆಂಕಟರಾವ್ ನಾಡಗೌಡ ಅವರು ಇದ್ದಾಗ, ಮಹಿಳೆಯರ ಹೆರಿಗೆಗೆ ಯಾವುದೇ ರೀತಿಯ ತೊಂದರೆ ಆಗದಿರಲಿ ಎಂದು ಹೆಚ್ಚುವರಿಯಾಗಿ ಮಹಿಳಾ ವೈದ್ಯರನ್ನು ನೇಮಿಸಲಾಗಿತ್ತು. ಜೊತೆಗೆ ಅಗತ್ಯ ಅನುಕೂಲತೆಗಳನ್ನು ಒದಗಿಸಲಾಗಿತ್ತು. ಹೆರಿಗೆ ಸೂಕ್ಷö್ಮ ಸಂದರ್ಭವಾಗಿದ್ದು, ವೈದ್ಯರು ಆ ಸಂದರ್ಭದಲ್ಲಿದ್ದು, ಜಾಗರೂಕತೆಯಿಂದ ನಿರ್ವಹಿಸಬೇಕಿದೆ. ಸಂಘಟನೆಯವರು ನಡೆಸುತ್ತಿರುವ ಹೋರಾಟಕ್ಕೆ ಪಕ್ಷದ ಬೆಂಬಲವಿದ್ದು, ಒಂದು ವೇಳೆ ಯಾವುದೇ ರೀತಿಯ ಲೋಪವಾಗಿದ್ದರೆ, ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಿ. ಯಾವುದೇ ವೈದ್ಯಾಧಿಕಾರಿಗಳನ್ನು ಅಮಾನತುಗೊಳಿಸುವುದಕ್ಕಿಂತ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು” ಎಂದು ಹೇಳಿದರು.

Namma Sindhanuru Click For Breaking & Local News

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಸಂಚಾಲಕ ಹುಸೇನ್ ಭಾಷಾ ಇಂದಿರಾನಗರ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬೂದೇಶ ಮರಾಠ, ತಾಲೂಕು ಉಪಾಧ್ಯಕ್ಷ ಗದ್ದೆಪ್ಪ, ಸದ್ದಾಂ, ಎಂ.ಡಿ.ನಬಿ, ಮಲ್ಲಿಕಾರ್ಜುನ, ಅಬ್ದುಲ್ ನಬಿ, ಮಹ್ಮದ್ ಸಾಬ್ ಚಿಟಗಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಹನುಮಂತ, ನಗರ ಮಹಿಳಾ ಘಟಕದ ಅಧ್ಯಕ್ಷೆ ಪಾವನಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *