ನಮ್ಮ ಸಿಂಧನೂರು, ಜೂನ್ 11
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಂವಿಧಾನದ ಅನುಚ್ಛೇದ 371(ಜೆ) ಮೀಸಲಾತಿ ನಿಯಮಗಳ ಸಮಗ್ರ ಹಾಗೂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ,ರಾಜ್ಯದಲ್ಲಿ ಅನುಚ್ಛೇದ ೩೭೧(ಜೆ) ಉದ್ಯೋಗ ಮೀಸಲಾತಿಯಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಸಿಂಧನೂರಿನಲ್ಲಿ ಕಲ್ಯಾಣ ಕರ್ನಾಟಕ ಆರ್ಟಿಕಲ್ ೩೭೧(ಜೆ) ಹೋರಾಟ ಸಮಿತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗಾಂಧಿಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, 371(ಜೆ) ಕಲಂ ಸಮರ್ಪಕ ಜಾರಿಗೊಳಿಸುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾ ಮೆರವಣಿಗೆ ತಹಸೀಲ್ ಕಚೇರಿ ಆವರಣಕ್ಕೆ ತೆರಳಿತು. ಪ್ರತಿಭಟನಾ ಮೆರವಣಿಗೆಯಲ್ಲಿ ವಕೀಲ ಸಂಘದವರು, ನಾನಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪನ್ಯಾಸಕರು, ಆಡಳಿತ ಮಂಡಳಿಯವರು ಸೇರಿದಂತೆ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.