ನಮ್ಮ ಸಿಂಧನೂರು, ಫೆಬ್ರವರಿ 10
ನಗರದಲ್ಲಿ ಬಿರುಸಿನಿಂದ ನಡೆಯುತ್ತಿರುವ ರೈಲ್ವೆ ಕಾಮಗಾರಿ ಹಾಗೂ ರೈಲು ನಿಲ್ದಾಣವನ್ನು ಶಾಸಕ ಹಂಪನಗೌಡ ಬಾದರ್ಲಿ ಶನಿವಾರ ಪರಿಶೀಲನೆ ನಡೆಸಿದರು. ದೆಹಲಿ ಪ್ರಯಾಣದ ನಂತರ ನಗರಕ್ಕೆ ಆಗಮಿಸಿದ ಶಾಸಕರು ರೈಲು ವೇಗ ಪರೀಕ್ಷೆಯ ನಂತರ ಕಾಮಗಾರಿ, ರೈಲು ನಿಲ್ದಾಣ ಹಾಗೂ ನಗರದ ಮುಖ್ಯ ರಸ್ತೆಯಿಂದ ರೈಲು ನಿಲ್ದಾಣಕ್ಕೆ ಲಿಂಕ್ ರಸ್ತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಪ್ಲಾಟ್ ಫಾರ್ಮ್, ಟಿಕೇಟ್ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಅಂಡರ್ ಪಾಸ್, ವಿಶೇಷ ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ ಕುರಿತು ಶಾಸಕರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಭೂ ಸ್ವಾಧೀನಾಧಿಕಾರಿ ಶೃತಿ, ರೈಲ್ವೆ ಇಲಾಖೆ ಎಇಇ ಉಮಾಮಹೇಶ್ವರ ಉಪಸ್ಥಿತರಿದ್ದರು.