ನಮ್ಮ ಸಿಂಧನೂರು, ಫೆಬ್ರವರಿ 15
ಕುಸಿದ ನೆಲಹಾಸು ಬಂಡೆ, ಇಕ್ಕಟ್ಟಾದ ಜಾಗೆ, ಖಾಲಿ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳ ಗಂಟು-ಮೂಟೆ ಇವು ನಗರದ ತಹಸೀಲ್ ಕಚೇರಿಯ ಆವರಣದಲ್ಲಿರುವ ನಾಡ ಕಚೇರಿ ಕಾರ್ಯಾಲಯದ ಅಧ್ವಾನದ ದೃಶ್ಯಗಳು. ನಾನಾ ಕೆಲಸ ಕಾರ್ಯಗಳಿಗೆ ದಿನವೂ ನಗರದ ವಿವಿಧ ವಾರ್ಡ್‌ಗಳ ನೂರಾರು ಸಾರ್ವಜನಿಕರು ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೆ ಕೊಠಡಿಯೊಳಗೆ ಜಾರಿ ಬೀಳುವ ಆತಂಕದೊಂದಿಗೆ ಪ್ರವೇಶಿಸುವಂತಾಗಿದೆ. ನೆಲಹಾಸು ಬಂಡೆಗಳು ಎಲ್ಲೆಂದರಲ್ಲಿ ಕುಸಿದಿದ್ದು, ಇಕ್ಕಟ್ಟಾದ ಪ್ರದೇಶದಲ್ಲಿ ಹರಸಾಹಸಪಟ್ಟು ಜನರು ಸರ್ಕಾರದ ಸೇವೆ ಪಡೆಯುತ್ತಾರೆ.
ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಕನಿಷ್ಠ ಸೌಲಭ್ಯ ಇಲ್ಲದಂತಾಗಿದ್ದು, ಇಕ್ಕಟ್ಟಾದ ಜಾಗೆಯಲ್ಲಿ ಇನ್ನಿಲ್ಲದ ತಾಪತ್ರಯ ಎದುರಿಸುತ್ತಿದ್ದಾರೆ. ಕಾರ್ಯಾಲಯದ ಕೊಠಡಿಯೊಳಗೆ ಪ್ರವೇಶಿಸುತ್ತಲೇ ಕುಸಿದ ನೆಲಹಾಸು ಬಂಡೆಗಳಿಂದಾಗಿ ಬಹಳಷ್ಟು ಜನರು ಎಡವಿಬಿದ್ದಿದ್ದಾರೆ. ಸಣ್ಣ ಕೊಠಡಿಯಲ್ಲಿ ಆಧಾರ್ ಸೇವೆ, ಜನನ ಮರಣ ನೋಂದಣಿ, ಜಾತಿ ಮತ್ತು ಆದಾಯ ಸೇರಿದಂತೆ 40ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಲು ಕನಿಷ್ಠ ವ್ಯವಸ್ಥೆ ಮಾಡದೇ ಇಕ್ಕಟ್ಟಾದ ಕೊಠಡಿಯಲ್ಲಿ ಮನಬಂದಂತೆ ಫ್ಲೈವುಡ್ ಅಳವಡಿಸಲಾಗಿದ್ದು, ಸಾರ್ವಜನಿಕರು ದಿನವೂ ಎದ್ದುಬಿದ್ದು ಸೇವೆ ಪಡೆಯುವಂತಾಗಿದೆ. ತಹಸೀಲ್ ಕಚೇರಿಯ ಪಕ್ಕದಲ್ಲಿಯೇ ನಗರದ ಸಾರ್ವಜನಿಕರು ದಿನವೂ ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಿದ್ದರೂ ಮೇಲಧಿಕಾರಿಗಳು ಈ ಬಗ್ಗೆ ಗಮನಿಸಿ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.