ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 18
ನಗರದ ಟೌನ್‌ಹಾಲ್‌ನಲ್ಲಿ ಗುರುವಾರ ಸಿಂಧೊಳ್ಳು ಸಮುದಾಯದ ಅಲೆಮಾರಿ ಮಹಿಳೆಯರು ಮತ್ತು ವಿಮುಕ್ತ ದೇವದಾಸಿ ಮಹಿಳೆಯರೊಂದಿಗಿನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಸಂವಾದ ಕಾರ್ಯಕ್ರಮಕ್ಕೆ ನೊಂದು-ಬೆಂದ ಮಹಿಳೆಯರು ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತಂದರು.
ಸರ್ಕಾರದ ಸವಲತ್ತು ಸಿಗದೇ ಅನುಭವಿಸುತ್ತಿರುವ ಯಾತನೆ, ತಾಪತ್ರಯ ಸಂಕಟದ ಒಡಲ ನುಡಿಗಳನ್ನು ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಅವರ ಮುಂದೆ ತೋಡಿಕೊಂಡರು. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಪೋಲಿಸ್ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಿಂಧನೂರು ಮತ್ತು ತುರ್ವಿಹಾಳ ಹಾಗೂ ಸಿಂಧನೂರು ತಾಲೂಕು ಇಂದಿರಾಗಾಂಧಿ ಸ್ತ್ರೀಶಕ್ತಿ ಒಕ್ಕೂಟ ಆಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಟೌನ್‌ಹಾಲ್ ಮಹಿಳೆಯರಿಂದ ತುಂಬಿ ತುಳುಕಿತು. ಅಧ್ಯಕ್ಷರ ಕಾರ್ಯಕ್ರಮ ಮುಗಿದ ನಂತರವೂ ಬಹಳಷ್ಟು ಮಹಿಳೆಯರು ಟೌನ್‌ಹಾಲ್ ಬಳಿ ನೆರೆದಿದ್ದು ಕಂಡುಬಂತು

ಸಿಂಧನೂರಿನ ಟೌನ್‌ಹಾಲ್‌ನಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಯುವತಿಯೊಬ್ಬರು ಸಮಸ್ಯೆ ಹೇಳಿಕೊಂಡು ಕಣ್ಣೀರಾಗುತ್ತಿದ್ದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮಿ ಚೌದರಿ ಅವರು ಸಂತೈಸಿದರು.
