ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 22
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗಾಗಿ ದಾಖಲಾಗಿದ್ದ ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಗರ್ಭಿಣಿ ಮೌಸಂಬಿ ಮಂಡಲ್ ಹೆರಿಗೆ ನಂತರ ಸೋಮವಾರ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಕರ್ತವ್ಯಲೋಪ ಎಸಗಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತಗೊಳಿಸುವಂತೆ ಒತ್ತಾಯಿಸಿ, ನಮ್ಮ ಕರ್ನಾಟಕ ಸೇನೆಯಿಂದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು.
ನಗರದ ಸಾರ್ವಜನಿಕರ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿನ ಕೆಲ ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ಗೆ ಹೋಗುತ್ತಾರೆ. ಪದೇ ಪದೇ ಈ ರೀತಿ ಮಾಡುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆ ದೊರೆಯದೇ ಪರದಾಡುತ್ತಿದ್ದಾರೆ. ಇನ್ನೂ ಗರ್ಭಿಣಿಯರು, ತೀವ್ರ ಆನಾರೋಗ್ಯದಿಂದ ಬಳಲುತ್ತಿರುವವರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಆರ್.ಎಚ್.ಕ್ಯಾಂಪ್ನ ಮೌಸಂಬಿ ಮಂಡಲ್ ಗಂಡ ಮಹೇಶ್ವರ ಮಂಡಲ್ ಅವರ ಸಾವಿಗೆ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷö್ಯವೇ ಕಾರಣ. ಹೆರಿಗೆ ನಂತರ ಮಹಿಳೆಗೆ ಉತ್ತಮ ಚಿಕಿತ್ಸೆ ದೊರೆತಿದ್ದರೆ ಆಕೆ ಉಳಿಯುತ್ತಿದ್ದಳು ಎಂದು ಆಕೆಯ ಸಂಬಂಧಿಕರೇ ಹೇಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಲಕ್ಷದ ಸಾವುಗಳು ಹೆಚ್ಚುತ್ತಿದ್ದು, ಪದೇ ಪದೆ ಅವಘಡಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಮೌನ ತಾಳಿದೆ ಎಂದು ಸಂಘಟನೆಯ ಕಾರ್ಯಕರ್ತರು ಆಪಾದಿಸಿದರು.
‘ಸಿಎಂ, ಜಿಲ್ಲಾಡಳಿತ, ಡಿಎಚ್ಒ ಅವರಿಗೆ ಮನವಿ ಕೊಟ್ಟರೂ ಕ್ರಮ ಇಲ್ಲ’
ನಮ್ಮ ಕರ್ನಾಟಕ ಸೇನೆ ವತಿಯಿಂದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ 06-09-2024ರಂದು ಲಿಂಗಸುಗೂರು ಉಪ ವಿಭಾಗ ಎಸಿ, ಡಿಎಚ್ಒ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೇ 04-10-2024ರಂದು ಕಾರ್ಯಕ್ರಮವೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಿಂಧನೂರಿಗೆ ಆಗಮಿಸಿದ್ದಾಗ ಅವರಿಗೂ ಮನವಿ ಸಲ್ಲಿಸಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆಯಲಾಗಿದೆ. ಅಲ್ಲದೇ ಜಿಲ್ಲಾಡಳಿತ, ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿದಿಗಳಿಗೆ ಮೌಖಿಕವಾಗಿ ಮತ್ತು ಮನವಿ ಮೂಲಕ ಗಮನಕ್ಕೆ ತಂದು ಒತ್ತಾಯಿಸಿದ್ದಾಗ್ಯೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿಯೇ ಪುನಃ ನಿರ್ಲಕ್ಷದಿಂದ ಮತ್ತೊಂದು ಸಾವು ಸಂಭವಿಸಿದೆ. ಇದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಆರೋಪಿಸಿದರು.
‘ಡಿಸಿ ಬರುವವರೆಗೂ ಹೋರಾಟ ನಿಲ್ಲಲ್ಲ’
ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಅವ್ಯವಸ್ಥೆಯನ್ನು ಪರಿಶೀಲಿಸಿ, ಸಮಗ್ರ ತನಿಖೆಗೆ ಆದೇಶಿಸಬೇಕು. ಕರ್ತವ್ಯಲೋಪ ಎಸಗಿದ ಹಾಗೂ ಸರ್ಕಾರಿ ಆಸ್ಪತ್ರೆಗೆ ನೇಮಕಗೊಂಡು ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರನ್ನು ಅಮಾನತು ಮಾಡಬೇಕು, ಬೇಜವಾಬ್ದಾರಿಯಿಂದ ವರ್ತಿಸುವ ಸಿಬ್ಬಂದಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಿಡಬ್ಲ್ಯುಡಿ ಕ್ಯಾಂಪಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಬೇಗ ಉದ್ಘಾಟಿಸಬೇಕು, ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ, ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಮುಂದಿನ ಯಾವುದೇ ರೀತಿಯ ಆಗು-ಹೋಗುಗಳಿಗೆ ತಾಲೂಕು, ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಪ್ರತಿಕ್ರಿಯಿಸಿದ್ದಾರೆ.
ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಸಂಚಾಲಕ ಹುಸೇನ್ ಭಾಷಾ ಇಂದಿರಾನಗರ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬೂದೇಶ ಮರಾಠ, ತಾಲೂಕು ಉಪಾಧ್ಯಕ್ಷ ಗದ್ದೆಪ್ಪ, ಸದ್ದಾಂ, ಎಂ.ಡಿ.ನಬಿ, ಮಲ್ಲಿಕಾರ್ಜುನ, ಅಬ್ದುಲ್ ನಬಿ, ಮಹ್ಮದ್ ಸಾಬ್ ಚಿಟಗಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಹನುಮಂತ ಸೇರಿದಂತೆ ರವಿಕುಮಾರ ಉಪ್ಪಾರ, ಆನಂದ್, ಅವಿನಾಶ ದೇಶಪಾಂಡೆ, ಆದನಗೌಡ ಜವಳಗೇರಾ, ಅಯ್ಯಪ್ಪ, ಸೈಯ್ಯದ್ ರಬ್ಬಾನಿ ಜಾಗೀರದಾರ ಇನ್ನಿತರರು ಇದ್ದರು.