ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 9
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ 4 ಲೇಬರ್ ಕೋಡ್ ರದ್ದುಪಡಿಸಬೇಕು ಸೇರಿದಂತೆ ಇನ್ನಿತರೆ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಜೆಸಿಟಿಯು) ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿರೋಧದ ಕಹಳೆ ಮೊಳಗಿಸಿದವು.

ನಗರದ ಎಪಿಎಂಸಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ಜಂಟಿ ಕಾರ್ಮಿಕ ಸಂಘಟನೆಯ ಸಹಭಾಗಿ ಸಂಘಟನೆಗಳಾದ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಲಿಬರೇಶನ್, ಎಐಟಿಯುಸಿ, ಸಿಐಟಿಯು, ಎಐಸಿಸಿಟಿಯು, ಅಂಗನವಾಡಿ ಫೆಡರೇಶನ್, ಮಹಿಳಾ ಒಕ್ಕೂಟ, ತಾಲೂಕು ಹಮಾಲರ ಸಂಘ ಸೇರಿದಂತೆ ಇನ್ನಿತರೆ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಹಾಗೂ ಪದಾಧಿಕಾರಿಗಳು ಬಸವ ಸರ್ಕಲ್, ಬಸ್ ನಿಲ್ದಾಣ ಮುಂಭಾಗ, ಗಾಂಧಿ ಸರ್ಕಲ್ ಮೂಲಕ ತಹಸಿಲ್ ಕಾರ್ಯಾಲಯದ ಮುಂಭಾಗಕ್ಕೆ ಬಂದು ಸಮಾವೇಶಗೊಂಡರು.
ದಿನ ದಿನಕ್ಕೂ ಕಾರ್ಮಿಕ ವರ್ಗದ ಮೇಲಿನ ದಾಳಿ ಹೆಚ್ಚಾಗುತ್ತಿದೆ. ಕಾರ್ಮಿಕರ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದ ಕಾರ್ಮಿಕ ಕಾನೂನುಗಳ ಬದಲಾವಣೆಗೆ ಕೇಂದ್ರ ಸರಕಾರ ವಿಭಿನ್ನ ದಾರಿಯಲ್ಲಿ ಹೊರಟಿದೆ. ಕೇಂದ್ರ ಸರಕಾರದ ಬದಲು ರಾಜ್ಯ ಸರಕಾರಗಳು ಈ ಕಾನೂನು ಬದಲಾವಣೆಯಲ್ಲಿ ತೊಡಗಿವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಲವಾರು ಕಾನೂನುಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಉಳಿದ ರಾಜ್ಯಗಳು ಇದಕ್ಕೆ ಹೊರತಾಗಿಲ್ಲ. ಆತಂಕದ ಸಂಗತಿ ಎಂದರೆ, ಹಾಲಿ ಕಾರ್ಮಿಕ ಕಾನೂನುಗಳನ್ನು ನೇರವಾಗಿ ಉಲ್ಲಂಘಿಸಿ, ಕಾರ್ಪೊರೇಟ್ ಬಂಡವಾಳಕ್ಕೆ ಹಾಗೂ ಗುತ್ತಿಗೆ ಕಾರ್ಮಿಕ ಪದ್ದತಿಗೆ ಭಾರಿ ಉತ್ತೇಜನ ನೀಡಲಾಗುತ್ತಿದೆ. ದೇಶದಲ್ಲಿ ಶೇಕಡ 90ರಷ್ಟು ಕಾರ್ಮಿಕರು ಕನಿಷ್ಟ ವೇತನ ಹಾಗೂ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಬಾಷುಮಿಯಾ ಮಾತನಾಡಿ, ಕಾರ್ಮಿಕರು ಸಂಘ ಕಟ್ಟುವ, ದುಡಿಮೆಯ ಹಕ್ಕುಗಳ ರಕ್ಷಣೆಗಾಗಿ ಮುಷ್ಕರ ನಡೆಸುವ ಸ್ವಾತಂತ್ರ‍್ಯವನ್ನು ಕಳೆದುಕೊಂಡಿದ್ದಾರೆ. “ಹೆಚ್ಚು ಕೂಲಿ ಕೇಳಿದರೆ ಕೆಲಸಕ್ಕೆ ಬರಬೇಡಿ!” ಎಂಬ ಬೆದರಿಕೆ ದೇಶಾದ್ಯಂತ ಕೇಳಿಬರುತ್ತಿದೆ. ಸರಕಾರಿ, ಅರೆ ಸರಕಾರಿ ಹಾಗೂ ಖಾಸಗೀ ಕ್ಷೇತ್ರದಲ್ಲೂ ಕಾರ್ಮಿಕರ ಹಕ್ಕುಗಳ ಹರಣ ಎಗ್ಗಿಲ್ಲದೆ ನಡೆದಿದೆ. ಗುತ್ತಿಗೆ ಕಾರ್ಮಿಕ ಪದ್ಧತಿ ಹಾಗೂ ವೇತನ ಗುಲಾಮಗಿರಿಯನ್ನು ತೊಲಗಿಸದೇ ಕಾರ್ಮಿಕರಿಗೆ ಅನ್ಯದಾರಿ ಇಲ್ಲ ಎಂದು ಹೇಳಿದರು.

ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳನ್ನು ಗುಲಾಮರನ್ನಾಗಿಸುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ದುಡಿತದ ಅವಧಿಯ ಹೆಚ್ಚಳವನ್ನು ಹಿಂಪಡೆದು ಕೆಲಸದ ಅವಧಿಯನ್ನು 8 ಗಂಟೆಗಳಿಗೆ ಸೀಮಿತಗೊಳಿಸಬೇಕು, ಕನಿಷ್ಠ ವೇತನ ಜಾರಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಬೇಕು ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು, ಕಾರ್ಖಾನೆ ಕಾಯ್ದೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ 24ಕ್ಕೆ ತಿದ್ದುಪಡಿ ಮಾಡಬಾರದು, ಎಲ್ಲಾ ರೀತಿಯ ಖಾಸಗೀಕರಣವನ್ನು ನಿಲ್ಲಿಸಬೇಕು ಎಂಬ ಬೇಡಿಕೆಗಳ ಮನವಿಪತ್ರವನ್ನು ತಹಸೀಲ್ದಾರ್ ಅವರ ಮೂಲಕ ಸಿಎಂ ಅವರಿಗೆ ರವಾನಿಸಲಾಯಿತು. ಈ ವೇಳೆ ಕಾರ್ಮಿಕ ಮುಖಂಡರಾದ ಡಿ.ಎಚ್.ಕಂಬಳಿ, ಚಂದ್ರಶೇಖರ ಗೊರಬಾಳ, ನಾಗರಾಜ್ ಪೂಜಾರ್, ಅಪ್ಪಣ್ಣ ಕಾಂಬಳೆ, ಚಂದ್ರಶೇಖರ ಕ್ಯಾತ್ನಟ್ಟಿ, ಬಸವರಾಜ ಎಕ್ಕಿ, ಜಗದೀಶ ಸುಕಾಲಪೇಟೆ, ಎಂ.ಲಿಂಗಪ್ಪ, ಬಸವರಾಜ ಬಾದರ್ಲಿ ಸೇರಿದಂತೆ ಅಂಗನವಾಡಿ ಫೆಡರೇಶನ್, ಹಮಾಲರ ಸಂಘ ಹಾಗೂ ಮಹಿಳಾ ಸಂಘಟನೆಗಳ ಮುಖಂಡರು ಇದ್ದರು.

ಟಿಯುಸಿಐನಿಂದ ಧರಣಿ
4 ಕಾರ್ಮಿಕ ಕೋಡ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದಿಂದ ತಹಸಿಲ್ ಕಾರ್ಯಾಲಯದ ಮುಂಭಾಗದಲ್ಲಿ ಬುಧವಾರ ಧರಣಿ ಹೋರಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ. ಗಂಗಾಧರ ಮಾತನಾಡಿದರು. ಮುಖಂಡರಾದ ಹೆಚ್.ಆರ್.ಹೊಸಮನಿ, ಶಂಕರ್ ನಾಗ್ ಗ್ರಾಮೀಣ ಆಟೋ ಚಾಲಕರ ಸಂಘದ ಹುಲುಗಪ್ಪ ಬಳ್ಳಾರಿ, ಹನುಮಂತಪ್ಪ ಗೋಡಿಹಾಳ, ಸಂತೋಷ ಹಿರೇದಿನ್ನಿ, ಆದೇಶ ಹಿರೇನಗನೂರ, ಧರಗಯ್ಯ, ಮುದಿಯಪ್ಪ, ವೆಂಕಟೇಶ ನಾಯಕ, ಹನುಮೇಶ ಕೆ.ವೇರ್‌ಹೌಸ್, ರಾಮಲಿಂಗಪ್ಪ, ವೆಂಕಟೇಶ್ ನಾಯಕ ವೇರ್‌ಹೌಸ್, ಸಿದ್ದು ಆಟೋ, ಸಂಗಮೇಶ, ನಿರುಪಾದಿ, ಗುಳಿಸಾಬ್, ಹೊಳೆಯಪ್ಪ, ಹನುಮಂತ, ಮಂಜುನಾಥ, ಬಾಳಪ್ಪ ಇದ್ದರು.

ಕೆಆರ್‌ಎಸ್‌ನಿಂದ ಮನವಿ ಸಲ್ಲಿಕೆ
ಕರ್ನಾಟಕ ರೈತ ಸಂಘದಿಂದ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಟಿಯುಸಿಐ ಮುಖಂಡರಾದ ಬಿ.ಎನ್.ಯರದಿಹಾಳ, ಚಿಟ್ಟಿಬಾಬು ಬೂದಿಹಾಳಕ್ಯಾಂಪ್, ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ ಅವರು, ಅಖಿಲ ಭಾರತ ಕಾರ್ಮಿಕರ ಮುಷ್ಕರ ಬೆಂಬಲಿಸಿ, 4 ಲೇಬರ್ ಕೋಡ್ ರದ್ದುಗೊಳಿಸುವುದು ಸೇರಿದಂತೆ ಇನ್ನಿತರ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ, ರಾಜ್ಯಪಾಲರಿಗೆ ಮನವಿಪತ್ರ ರವಾನಿಸಿದರು.